ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ ಮೇಲೆ ನಮಗಿಲ್ಲ ವಿಶ್ವಾಸ| ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯದ ಮೊರೆಯಿಟ್ಟ ಸದಸ್ಯರು| ಲಾಕ್‌ಡೌನ್ ತೆರವಾದರೂ ಲಾಕ್‌ಡೌನ್‌ನಲ್ಲಿಯೇ ಇರುವ ಜಿಪಂ ಸದಸ್ಯರು|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.15): ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ವಿರುದ್ಧ ಸಿಡಿದೆದ್ದಿರುವ ಸದಸ್ಯರಿಗೆ ಸರ್ಕಾರ ಮಣೆ ಹಾಕುತ್ತಲೇ ಇಲ್ಲ. ಪಂಚಾಯತ್ ಕಾಯ್ದೆ ತಿದ್ದುಪಡಿ ನಿಯಮಾವಳಿ ನೆಪ ಮಾಡಿಕೊಂಡು ನಮಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ, ಸರ್ಕಾರಕ್ಕೆ ನ್ಯಾಯಾಲಯವೇ ನಿರ್ದೇಶನ ನೀಡಬೇಕು ಎಂದು ಧಾರವಾಡ ಹೈಕೋರ್ಟ್ ಪೀಠದ ಮೊರೆಯಿಟ್ಟಿದ್ದಾರೆ ಜಿಲ್ಲಾ ಪಂಚಾಯಿತಿಯ 20 ಸದಸ್ಯರು.
ಸದಸ್ಯರ ವಿಶ್ವಾಸ ಇಲ್ಲದ ಅಧ್ಯಕ್ಷರನ್ನು ಆಡಳಿತದಲ್ಲಿ ಮುಂದುವರಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ. ಅಲ್ಲದೆ ಜಿಲ್ಲಾ ಪಂಚಾಯಿತಿ ಸದಸ್ಯರ ಪೈಕಿ ಪಕ್ಷಾತೀತವಾಗಿ ಹಾಲಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ವಿರುದ್ಧ ಸಿಡಿದೆದ್ದಿದ್ದಾರೆ. ಅವಿಶ್ವಾಸ ಮಂಡನೆ ಮಾಡುವಂತೆ ಸ್ವತಃ ಅಧ್ಯಕ್ಷ ಸೇರಿದಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ಮನವಿ ಕೊಟ್ಟಿದ್ದೇವೆ. ಆದರೂ ಅವಿಶ್ವಾಸಕ್ಕೆ ಅವಕಾಶ ನೀಡದೆ ಇರುವುದರಿಂದ ಜನರಿಂದ ಆಯ್ಕೆಯಾಗಿರುವ ನಮ್ಮ ಮತಕ್ಕೆ ಬೆಲೆ ಇಲ್ಲದಂತೆ ಆಗಿದೆ. ಆದ್ದರಿಂದ ನ್ಯಾಯಾಲಯವೇ ಈ ದಿಸೆಯಲ್ಲಿ ಮಾರ್ಗದರ್ಶನ ಮಾಡಬೇಕು ಎಂದು ಕೋರಿಕೊಂಡಿದ್ದಾರೆ.
ಕೊಪ್ಪಳ: ಅನ್ಯರಾಜ್ಯದಿಂದ ಬಂದವರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ
ಜಿಲ್ಲಾ ಪಂಚಾಯಿತಿಯಲ್ಲಿ 29 ಸದಸ್ಯ ಬಲವಿದೆ. ಇದರಲ್ಲಿ 20 ಸದಸ್ಯರು ರುಜು ಮಾಡಿದ ಮನವಿ ಪತ್ರವನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಅಷ್ಟೇ ಅಲ್ಲ, ನ್ಯಾಯಾಲಯ ನಮಗೆ ಅವಕಾಶ ನೀಡಿದರೆ 20 ಸದಸ್ಯರು ನ್ಯಾಯಾಲಯದ ಮುಂದೆ ಹಾಜರಾಗಲು ಸಿದ್ಧರಿದ್ದೇವೆ. ನ್ಯಾಯಾಲಯದ ಎದುರೆ ನಮ್ಮ ಬಹುಮತದ ಸಾಬೀತುಪಡಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.
ಏನಿದೆ ಬಲಾಬಲ?:
ಇಲ್ಲಿಯ ಜಿಲ್ಲಾ ಪಂಚಾಯಿತಿಯಲ್ಲಿ 29 ಸದಸ್ಯ ಬಲವಿದೆ. ಇದರಲ್ಲಿ 17 ಕಾಂಗ್ರೆಸ್, 1 ಪಕ್ಷೇತರ ಸದಸ್ಯ ಹಾಗೂ ಬಿಜೆಪಿ 12 ಸದಸ್ಯ ಬಲಹೊಂದಿದೆ. ಈಗ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ವಿಶ್ವನಾಥ ರೆಡ್ಡಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ನವರೇ ಬಿಜೆಪಿ ಸದಸ್ಯರ ಬೆಂಬಲ ಪಡೆದು ಸ್ವಪಕ್ಷದ ವಿಶ್ವನಾಥ ರೆಡ್ಡಿ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಬಿಜೆಪಿಯ ಕೆಲ ಸದಸ್ಯರ ಬೆಂಬಲ ಪಡೆದಿದ್ದಾರೆ.
ಕಾಂಗ್ರೆಸ್ ಬಿಜೆಪಿಯ ಕೆಲ ಸದಸ್ಯರನ್ನು ತನ್ನತ್ತ ಸೆಳೆದಿದ್ದರೆ ಕಾಂಗ್ರೆಸ್‌ನವರೇ ಆಗಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರನ್ನೇ ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದರಿಂದ ನುಂಗಲಾರದ ತುತ್ತಾಗಿರುವುದರಿಂದ ಕಾಂಗ್ರೆಸ್ ಸ್ವಪಕ್ಷದ ಅಧ್ಯಕ್ಷ ವಿಶ್ವನಾಥ ರೆಡ್ಡಿ ವಿರುದ್ಧವೇ ಅವಿಶ್ವಾಸಕ್ಕೆ ಮುಂದಾಗಿದೆ.
ಭಾರಿ ರಾಜಕೀಯ:
ಇದು ಮೇಲ್ನೋಟಕ್ಕೆ ಕೇವಲ ಜಿಲ್ಲಾ ಪಂಚಾಯಿತಿ ಸದಸ್ಯರ ನಡುವೆ ನಡೆದ ಕಾದಾಟವಾಗಿದ್ದರೂ ಇದರ ಹಿಂದೆ ದೊಡ್ಡ ಯುದ್ಧವೇ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಭವಿಷ್ಯಕ್ಕಾಗಿ ಇದನ್ನೊಂದು ಗೇಮ್ ತರಹ ಬಳಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ತೆರೆಮರೆಯಲ್ಲಿಯೇ ಇದ್ದ ಜಾತಿಯ ಕಾದಾಟ ಇಲ್ಲಿ ಬಹಿರಂಗವಾಗಿದೆ.
ಹಾಜರಾಗಲು ಸಿದ್ಧ:
ಸರ್ಕಾರ ಈಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಅವಕಾಶ ಇಲ್ಲ ಎನ್ನುವ ಗುರಾಣಿ ಹಿಡಿದಿದೆ. ಪಂಚಾಯತ್ ಕಾಯ್ದೆಗೆ ತಿದ್ದುಪಡಿಯಾಗಿದ್ದರೂ ನಿಯಮಾವಳಿಯನ್ನು ರೂಪಿಸಿಲ್ಲವಾದ್ದರಿಂದ ಅವಿಶ್ವಾಸಕ್ಕೆ ಅವಕಾಶ ಇಲ್ಲ ಎನ್ನುವ ಹಿಂಬರಹದೊಂದಿಗೆ ಜಿಲ್ಲಾ ಪಂಚಾಯಿತಿ ಸದ್ಯರಿಗೆ ಪತ್ರ ನೀಡಿರುವುದರಿಂದ ಈಗ ಜಿಲ್ಲಾ ಪಂಚಾಯಿತಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದಾರೆ.