ಮಹಾರಾಷ್ಟ್ರದಿಂದ ಬಂದವರೇ ಹೆಚ್ಚು| ತಬ್ಲೀಘಿಯಿಂದಲೂ ಪಾರಾಗಿದ್ದ ಕೊಪ್ಪಳ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುತ್ತಿರುವ ಕಾರ್ಮಿಕರಿಂದ ದೊಡ್ಡ ಶಾಕ್| ಜಿಲ್ಲಾಡಳಿತ ಅನ್ಯ ರಾಜ್ಯದಿಂದ ಬಂದವರನ್ನು ಈಗಲೂ ಸಾಂಸ್ಥಿಕ ಕ್ವಾರಂಟೈನ್ ಮಾಡಿ ಅವರ ಮೇಲೆ ವಿಶೇಷ ನಿಗಾವಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟವಾಗುತ್ತಿಲ್ಲ|
ಕೊಪ್ಪಳ(ಜೂ.15): ಹಸಿರು ವಲಯವಾಗಿದ್ದ ಕೊಪ್ಪಳಕ್ಕೆ ಅಘಾತ ನೀಡಿದ್ದೇ ವಲಸೆ ಕಾರ್ಮಿಕರು. ಇಲ್ಲದಿದ್ದರೇ ಕೊಪ್ಪಳ ಕೊರೋನಾ ಮುಕ್ತ ಜಿಲ್ಲೆಯಾಗಿರುತ್ತಿತ್ತು. ತಬ್ಲೀಘಿಯಿಂದಲೂ ಪಾರಾಗಿದ್ದ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುತ್ತಿರುವ ಕಾರ್ಮಿಕರು ದೊಡ್ಡ ಶಾಕ್ ನೀಡುತ್ತಿದ್ದಾರೆ. ಹೀಗಾಗಿ, ಜಿಲ್ಲಾಡಳಿತ ಅನ್ಯ ರಾಜ್ಯದಿಂದ ಬಂದವರನ್ನು ಈಗಲೂ ಸಾಂಸ್ಥಿಕ ಕ್ವಾರಂಟೈನ್ ಮಾಡಿ ಅವರ ಮೇಲೆ ವಿಶೇಷ ನಿಗಾವಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟವಾಗುತ್ತಿಲ್ಲ.
ಜಿಲ್ಲಾಡಳಿತ ಅನ್ಯ ರಾಜ್ಯದಿಂದ ಬಂದವರ ಮೇಲೆ ವಿಶೇಷ ನಿಗಾ ಇಟ್ಟಿರುವುದು ಅಲ್ಲದೆ ಕ್ವಾರಂಟೈನ್ ಅವಧಿ ಮುಗಿದ ಮೇಲೆಯೇ ಊರೊಳಗೆ ಕಳುಹಿಸುತ್ತಿದೆ. ಪರಿಣಾಮ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕಗಳ ಸಂಖ್ಯೆ ಹೆಚ್ಚಾಗದಂತೆ ಹಾಗೂ ಪಾಸಿಟಿವ್ ಬರದಂತೆ ಮುಂಜಾಗ್ರತೆ ವಹಿಸುತ್ತಿದೆ.
ಕೊರೋನಾ ಕಾಟ: 'ಮಕ್ಕಳ ಆರೋಗ್ಯ ಮುಖ್ಯ, ಆ. 15ರ ವರೆಗೆ ಶಾಲೆ ಆರಂಭಿಸುವುದು ಬೇಡ'
ಅನ್ಯ ರಾಜ್ಯದಿಂದ 296 ಜನಕ್ಕೆ ಕ್ವಾರೆಂಟೈನ್:
ಅನ್ಯ ರಾಜ್ಯಗಳಲ್ಲಿ ಸಿಲುಕಿದ್ದ ಜಿಲ್ಲೆಯ ಜನರು ಲಾಕ್‌ಡೌನ್ ಸಡಿಲಿಕೆ ಆದ ಬಳಿಕ ಮರಳಿ ಬರುತ್ತಿದ್ದಾರೆ. ಕೆಲವರು ಸರ್ಕಾರದ ಸಾರಿಗೆ ಸೌಲಭ್ಯ, ಖಾಸಗಿ ವಾಹನದಲ್ಲಿ ಬಂದರೆ ಹಲವರು ಅನ್ಯ ಮಾರ್ಗದ ಮೂಲಕ ಆಗಮಿಸಿ ಹಳ್ಳಿಗಳನ್ನು ಸೇರಿದ್ದಾರೆ. ಇದು ಜಿಲ್ಲಾಡಳಿತಕ್ಕೆ ದೊಡ್ಡ ಸಮಸ್ಯೆ ತಂದಿಟ್ಟಿದೆ. ಹೀಗಾಗಿ ಗ್ರಾಮಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗೆ ನಿಗಾ ವಹಿಸುವಂತೆಯೂ ಸೂಚನೆ ನೀಡಿದೆ. ಪ್ರಸ್ತುತ ಅನ್ಯ ರಾಜ್ಯಗಳಿಂದ ಜಿಲ್ಲೆಗೆ 296 ಜನರು ಆಗಮಿಸಿದ್ದು, ಅವರ ಮೇಲೆ ನಿಗಾ ಇರಿಸಿರುವ ಜಿಲ್ಲಾಡಳಿತ ಅವರಿಗೆ ವಿಶೇಷ ಕ್ವಾರೆಂಟೈನ್ ಕೇಂದ್ರಗಳನ್ನು ಸ್ಥಾಪಿಸಿದೆ.
ಮಹಾದಿಂದ ಬಂದವರೇ ಹೆಚ್ಚು:
ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿತರ ಸ್ಥಿತಿಗೆ ಇಡೀ ದೇಶವೇ ಬೆಚ್ಚಿ ಬೀಳುವಂತಾಗಿದೆ. ಅಂತಹ ರಾಜ್ಯದಿಂದಲೇ ಜಿಲ್ಲೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ 282 ಜನರಿಗೆ 11 ಕಡೆ ಸಾಂಸ್ಥಿಕ ಕೇಂದ್ರಗಳನ್ನು ಸ್ಥಾಪಿಸಿ ಕ್ವಾರೆಂಟೈನ್ ಮಾಡಲಾಗಿದೆ.
ಯಾವ ಕ್ವಾರೆಂಟೈನ್‌ನಲ್ಲಿ ಏಷ್ಟುಜನರಿದ್ದಾರೆ:
ಕೊಪ್ಪಳದ ಹರ್ಷಾ ಲಾಡ್ಜ್‌ನಲ್ಲಿ 10, ತಳಕಲ್ ಎಂಡಿಆರ್‌ಎಸ್‌ನಲ್ಲಿ 17, ಕೊಪ್ಪಳದ ನಾರಾಯಣ ರೆಸಿಡೆನ್ಸಿಯಲ್ಲಿ 2, ಗಂಗಾವತಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 1, ಗಂಗಾವತಿ ಪಾರ್ಥಾ ಲಾಡ್ಜ್- 16, ಹೇಮಗುಡ್ಡದ ಎಂಡಿಆರ್‌ಎಲ್‌ನಲ್ಲಿ 19, ಕುಷ್ಟಗಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 18, ಯಲಬುರ್ಗಾ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 9, ತಳಕಲ್ ಮೊರಾರ್ಜಿ ವಸತಿ ನಿಲಯದಲ್ಲಿ 74, ಕುದರಿಮೋತಿ ಮೊರಾರ್ಜಿ ವಸತಿ ಶಾಲೆಯಲ್ಲಿ 39 ಜನ ಸೇರಿದಂತೆ ಒಟ್ಟು 296 ಜನರನ್ನು ಸಾಂಸ್ಥಿಕ ಕ್ವಾರೆಂಟೈನ್ ಮಾಡಲಾಗುತ್ತಿದೆ.
ಮತ್ತೊಬ್ಬರ ಬಿಡುಗಡೆ:
ಕೋವಿಡ್‌ನಿಂದ ಬಳಲುತ್ತಿದ್ದ ಮಹಿಳೆಯೋರ್ವಳು ಗುಣಮುಖವಾಗಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಭಾನುವಾರ ಇವರ ಪ್ರಯೋಗಾಲಯ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹೊರ ರಾಜ್ಯದಿಂದ ಬಂದವರು
ಮಹಾರಾಷ್ಟ್ರ 282
ರಾಜಸ್ಥಾನ 08
ಗುಜರಾತ 01
ತಮಿಳುನಾಡು 02
ಇತರೆ 03