ವೀಕೆಂಡ್‌: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಾಮಾನ್ಯ ಜನಸಂಚಾರ

By Kannadaprabha NewsFirst Published Jun 15, 2020, 7:39 AM IST
Highlights

ಚರ್ಚ್‌ಗಳಲ್ಲಿ ಪ್ರಾರ್ಥನೆ ಪ್ರಾರಂಭ| ಅಮರಗೋಳ ಎಪಿಎಂಸಿಯಲ್ಲಿ ಜನಜಂಗುಳಿ| ಬಿಕೋ ಎಂದ ಶಾಪಿಂಗ್‌ ಮಾಲ್‌| ಸಡಿಲಿಕೆ ಬಳಿಕ ಎಂದಿನಂತೆ ಹೋಟೆಲ್‌ಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು| ಸದಾ ಗಿಜಿಗುಡುತ್ತಿದ್ದ ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್, ಸಾಧನಕೇರಿ, ಕೆಲಗೇರಿ ಇತರ ಉದ್ಯಾನಗಳು ಖಾಲಿ ಖಾಲಿ|

ಹುಬ್ಬಳ್ಳಿ(ಜೂ.15): ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆ ಭಾನುವಾರ ಬೆಳಗ್ಗೆ ಮನೆಯಲ್ಲೆ ಕಳೆದರೆ ಸಂಜೆ ಹೊತ್ತು ಕೋವಿಡ್‌ ಭೀತಿ ಮರೆತು ಮನೆಯಿಂದ ಹೊರಬಂದರು. ಸಂಜೆ ಹೊತ್ತು ಶಾಪಿಂಗ್‌ ಮಾಲ್‌ಗಳು ಗ್ರಾಹಕರಿಂದ ಕೂಡಿದ್ದರೆ, ಎಪಿಎಂಸಿ ಮಾರುಕಟ್ಟೆಯಲ್ಲಿ ನಸುಕಿನಲ್ಲಿ ಜನಜಂಗುಳಿ ಸೇರಿತ್ತು. ಚರ್ಚ್‌ಗಳು ಭಾನುವಾರದಿಂದ ತೆರೆದುಕೊಂಡಿದ್ದು, ಕ್ರಿಶ್ಚಿಯನ್ನರು ಸಾಮಾಜಿಕ ಅಂತರ ಕಾಯ್ದುಕೊಂಡು ಸಂಕ್ಷಿಪ್ತವಾಗಿ ಪ್ರಾರ್ಥನೆ ಸಲ್ಲಿಸಿದರು.

ಭಾನುವಾರ ನಗರದಲ್ಲಿ ಬೆಳಗ್ಗೆ ಜನಸಂಚಾರ ವಿರಳವಾಗಿತ್ತು. ಇಲ್ಲಿನ ಪ್ರಮುಖ ರಸ್ತೆಗಳಾದ ಗೋಕುಲ, ಕೊಪ್ಪಿಕರ, ಚೆನ್ನಮ್ಮ ವೃತ್ತ, ರಸ್ತೆಯಲ್ಲೂ ಹೇಳಿಕೊಳ್ಳುವಷ್ಟುಜನಸಂಚಾರ ಇರಲಿಲ್ಲ. ಹಳೆ ಹುಬ್ಬಳ್ಳಿಯಲ್ಲಿ ಅಲ್ಲಲ್ಲಿ ಜನಸಂದಣಿ ಕಂಡುಬಂತಾದರೂ ಹೆಚ್ಚಿನ ಹೊತ್ತು ಈ ವಾತಾವರಣ ಇರಲಿಲ್ಲ. ಇನ್ನು ನಸುಕಿನಲ್ಲಿ ಇಲ್ಲಿನ ಅಮರಗೋಳ ಎಪಿಎಂಸಿ ತರಕಾರಿ ಮಾರುಕಟ್ಟೆಬೆಳಗ್ಗೆ ಜನಜಂಗುಳಿಯಿಂದ ಕೂಡಿತ್ತು. ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಸರನ್ನು ಜನತೆ ಮರೆತು ತರಕಾರಿ ಖರೀದಿಯಲ್ಲಿ ತೊಡಗಿದ್ದರು. ಬೆಳಗ್ಗೆ 11 ಗಂಟೆವರೆಗೂ ಇಲ್ಲಿ ಒಂದು ರೀತಿಯಲ್ಲಿ ಜನಜಾತ್ರೆಯಿತ್ತು.

ಹುಬ್ಬಳ್ಳಿ: ಕೊರೋನಾ ಸೋಂಕಿತ ವೃದ್ಧೆ ರಕ್ಷಿಸಿದ ಪೊಲೀಸರಿಗೂ ಆತಂಕ

ಮಾಲ್‌ಗಳಲ್ಲಿ ಶನಿವಾರ ಗ್ರಾಹಕರು ಕಂಡುಬಂದರೂ ಭಾನುವಾರ ಮತ್ತೆ ಬಿಕೋ ಎನ್ನುತ್ತಿತ್ತು. ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಅರ್ಬನ್‌ ಓಯಸಿಸ್‌ ಮಾಲ್‌, ಕೋಯಿನ್‌ ರಸ್ತೆಯಲ್ಲಿರುವ ಯು-ಮಾಲ್‌ಗಳತ್ತ ಸಂಜೆ ವೇಳೆಗೆ ಗ್ರಾಹಕರು ಸುಳಿದರು. ಅಲ್ಲದೆ, ಹೋಟೆಲ್‌ಗಳಲ್ಲಿ ಕೂಡ ಗ್ರಾಹಕರು ಕಡಿಮೆಯಿದ್ದರು. ವೀಕೆಂಡ್‌ನಲ್ಲಿ ಕುಟುಂಬ ಸಮೇತ ಸೇರುತ್ತಿದ್ದ ಇಲ್ಲಿನ ತೃಪ್ತಿ, ಸ್ವಾತಿ ಮತ್ತಿತರ ಹೋಟೆಲ್‌ಗಳಲ್ಲಿ ಜನರು ಕಂಡುಬರಲಿಲ್ಲ.

ಬಿಆರ್‌ಟಿಎಸ್‌, ನಗರ ಸಾರಿಗೆ ಸೇರಿ ಅಂತರ್‌ ಜಿಲ್ಲೆಯ ಬಸ್‌ಗಳಲ್ಲೂ ಪ್ರಯಾಣಿಕರ ಕೊರತೆಯಿತ್ತು. ನಿರ್ವಾಹಕರು ಗಂಟೆಗಟ್ಟಲೆ ಬಸ್‌ಗಳನ್ನು ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಕರೆದುಕೊಂಡು ತೆರಳಬೇಕಾಯಿತು. ಇನ್ನು, ಇಲ್ಲಿನ ಸಿದ್ಧಾರೂಢ ಸ್ವಾಮೀಜಿ ಮಠಕ್ಕೆ ಹೆಚ್ಚಿನ ಭಕ್ತರು ಆಗಮಿಸಿರಲಿಲ್ಲ. ಮೂರು ಸಾವಿರ ಮಠಕ್ಕೂ ಭಕ್ತರು ವಿರಳವಾಗಿದ್ದರು. ನಗರದ ಪ್ರಾಟೆಸ್ಟೆಂಟ್‌ ಚಚ್‌ರ್‍ಗಳಾದ ಬಾಸೆಲ್‌ ಮಿಷನ್‌, ಘಂಟಿಕೇರಿ ಹೋಲಿನೇಮ್‌ ಕ್ಯಾಥಡ್ರಾಲ್‌ ಚಚ್‌ರ್‍ಗಳು ಭಾನುವಾರದಿಂದ ತೆರೆದುಕೊಂಡಿವೆ. ಸಾಧಾರಣ ದಿನಗಳಲ್ಲಿ 2 ಗಂಟೆ ನಡೆಯುತ್ತಿದ್ದ ಪ್ರಾರ್ಥನೆಯನ್ನು ಅರ್ಧಗಂಟೆಗೆ ಸೀಮತಗೊಳಿಸಲಾಗಿತ್ತು. ಹೀಗಾಗಿ ಬೆಳಗ್ಗೆ 7.30ರಿಂದ 8 ಗಂಟೆವರೆಗೆ ಮಾತ್ರ ಪ್ರಾರ್ಥನೆ ನಡೆಯಿತು. ಬಾಕ್ಸ್‌ಗಳನ್ನು ಬರೆದು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.

ಮನೆ​ಯಲ್ಲೇ ಕಳೆ​ದ ಧಾರವಾಡಿಗ​ರು

ಲಾಕ್‌ಡೌನ್‌ ಅವಧಿ ಕಳೆದರೂ ಧಾರವಾಡಿಗರು ಭಾನುವಾರ ಮನೆಯಲ್ಲೆ ಕಾಲ ಕಳೆದಿದ್ದಾರೆ (ಶನಿವಾರ) ಒಂದೇ ದಿನ ಜಿಲ್ಲೆಯಲ್ಲಿ 20 ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜನರು ಕೋವಿಡ್‌ ಭೀತಿಗೆ ಒಳಗಾಗಿದ್ದರು. ಹೀಗಾಗಿ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕಿದರು. ಸಡಿಲಿಕೆ ಬಳಿಕ ಎಂದಿನಂತೆ ಹೋಟೆಲ್‌ಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಸದಾ ಗಿಜಿಗುಡುತ್ತಿದ್ದ ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್, ಸಾಧನಕೇರಿ, ಕೆಲಗೇರಿ ಇತರ ಉದ್ಯಾನಗಳು ಖಾಲಿ, ಖಾಲಿಯಾಗಿದ್ದವು. ಇನ್ನು, ಬೃಹತ್‌ ಮಳಿಗೆಗಳಲ್ಲಿ ಗ್ರಾಹಕರು ಇರಲಿಲ್ಲ.

click me!