
ಕೊಪ್ಪಳ (ಆ.28): ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ನಡೆದ ಬರೋಬ್ಬರಿ 8.40 ಕೋಟಿ ರೂಪಾಯಿ ಬೃಹತ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ರೂವಾರಿ (ಕಿಂಗ್‌ಪಿನ್) ರವೀಂದ್ರಕುಮಾರ್ ಹಾಗೂ ಆತನ ಪತ್ನಿ ರಮಾಳನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾಧಿಕಾರದಲ್ಲಿದ್ದ ಬರೋಬ್ಬರಿ 8 ಕೋಟಿ 40 ಲಕ್ಷ ರೂಪಾಯಿ ಅನುದಾನವನ್ನು ರವೀಂದ್ರಕುಮಾರ್ ಯೋಜಿತ ರೀತಿಯಲ್ಲಿ ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ಜಮಾ ಮಾಡಿಕೊಂಡಿದ್ದ. ತನ್ನ ಖಾತೆಯಷ್ಟೇ ಅಲ್ಲದೆ, ತನ್ನ ಪತ್ನಿ ರಮಾ, ಸಹೋದರ ಅನಿಲಕುಮಾರ್ ಹಾಗೂ ಕುಟುಂಬದ ಇತರ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿ ವಂಚನೆ ಎಸಗಿದ್ದ ಎಂಬ ಗಂಭೀರ ಆರೋಪ ಇವರ ಮೇಲಿದೆ.
ಈ ಬೃಹತ್ ಆರ್ಥಿಕ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಕಮೀಷನರ್ ಶರಣಪ್ಪ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ತೀವ್ರಗೊಳಿಸಿ, ಎರಡು ದಿನಗಳ ಹಿಂದೆಯಷ್ಟೇ ರವೀಂದ್ರಕುಮಾರ್‌ನ ಸಹೋದರ ಅನಿಲಕುಮಾರ್‌ನನ್ನು ಬಂಧಿಸಿದ್ದರು. ಸಹೋದರನ ಬೆನ್ನಲ್ಲೇ ಇದೀಗ ಮುಖ್ಯ ಆರೋಪಿ ರವೀಂದ್ರಕುಮಾರ್ ಹಾಗೂ ಆತನ ಪತ್ನಿ ರಮಾಳನ್ನು ಖೆಡ್ಡಾಗೆ ಕೆಡವಲಾಗಿದೆ.
ಕಳೆದ 20 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ರಮವಾಗಿ ವರ್ಗಾವಣೆಯಾದ 8.40 ಕೋಟಿ ರೂಪಾಯಿ ಹಣ ಎಲ್ಲೆಲ್ಲಿ ಹೂಡಿಕೆಯಾಗಿದೆ? ಈ ಹಗರಣದಲ್ಲಿ ಪ್ರಾಧಿಕಾರದ ಇತರೆ ಅಧಿಕಾರಿಗಳ ಕೈವಾಡವಿದೆಯೇ? ಎಂಬಿತ್ಯಾದಿ ಮಹತ್ವದ ಮಾಹಿತಿಗಳನ್ನು ಕಲೆಹಾಕಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.