ಆರೆಸ್ಸೆಸ್‌ ಪಥಸಂಚಲನದಲ್ಲಿ ಭಾಗಿ: 10 ತಿಂಗಳ ಬಳಿಕ ಶಿಕ್ಷಕರ ಸಸ್ಪೆಂಡ್

Published : Aug 28, 2026, 06:47 AM IST
RSS

ಸಾರಾಂಶ

ಯಾದಗಿರಿ ಜಿಲ್ಲೆಯಲ್ಲಿ RSS ಪಥಸಂಚಲನದಲ್ಲಿ ಭಾಗವಹಿಸಿದ್ದ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಇದು ರಾಜಕೀಯ ಕಾರ್ಯಕ್ರಮವಲ್ಲ, ಸಾಂಸ್ಕೃತಿಕ ಕಾರ್ಯಕ್ರಮ ಎಂದು ಶಿಕ್ಷಕರು ಸಮಜಾಯಿಷಿ ನೀಡಿದರೂ, ಕರ್ನಾಟಕ ನಾಗರಿಕ ಸೇವಾ ನಿಯಮ ಉಲ್ಲಂಘನೆ ಆರೋಪದ ಮೇಲೆ ಇಲಾಖೆ ಈ ಕ್ರಮ ಕೈಗೊಂಡಿದೆ.

ಯಾದಗಿರಿ (ಆ.28): ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದ್ದ ಬೆನ್ನಲ್ಲೇ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಥಸಂಚಲನದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಎದುರಿಸುತ್ತಿದ್ದ ಜಿಲ್ಲೆಯ ಶಿಕ್ಷಕರಿಬ್ಬರನ್ನು ಅಮಾನತುಗೊಳಿಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಹುಣಸಗಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಹ ಶಿಕ್ಷಕ ಗುರುರಾಜ್‌ ಜೋಶಿ, ಸುರಪುರದ ಕುಪ್ಪಿಯ ಸರ್ಕಾರಿ ಶಾಲೆಯ ಎಚ್‌ಎಂ ಅಣ್ಣಾಸಾಹೇಬ ಅವರನ್ನು ಅಮಾನತು ಮಾಡಿ ಆ.20ರಂದು ಶಿಕ್ಷಣ ಇಲಾಖೆ ಆದೇಶಿಸಿದೆ.

ಕಳೆದ ವರ್ಷ ಅ.12ರಂದು ವಿಜಯಪುರ ಜಿಲ್ಲೆ ತಾಳಿಕೋಟೆಯಲ್ಲಿ ಹಾಗೂ 2025 ಅ.10ರಂದು ಹುಣಸಗಿಯಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಇತ್ತು. ಇದನ್ನು ವರದಿಯಾಧರಿಸಿ, ಇಲಾಖೆ ಕಾರಣ ಕೇಳಿ ಶಿಕ್ಷಕರಿಬ್ಬರಿಗೆ ನೋಟಿಸ್‌ ನೀಡಿತ್ತು.

ಸರ್ಕಾರಿ ನೌಕರರಾದ ಇವರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿ, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಜುಮ್ಮಣ್ಣ ಗುಡಿಮನಿ, ಆಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ದೂರಿದ್ದರು. ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂತಹ ಯಾವುದೇ ಸಂಘ ಸಂಸ್ಥೆಗಳ ಸದಸ್ಯರಾಗಿರುವಂತಿಲ್ಲ, ಚಳವಳಿಯಲ್ಲಿ ಭಾಗವಹಿಸುವಂತಿಲ್ಲ ಎಂದು ಇಲಾಖೆ ನೋಟಿಸ್‌ ನೀಡಿತ್ತು. ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಕಾರ್ಯದರ್ಶಿ, ಕಿಶೋರ್ ಅವರ ಟಿಪ್ಪಣಿ ಮೇರೆಗೆ, ಕಲಬುರಗಿ ಅಪರ ಆಯುಕ್ತರ ಕಚೇರಿ ಕ್ರಮಕ್ಕೆ ಸೂಚಿಸಿತ್ತು.

ಕಾರಣ ಕೇಳಿ ನೋಟಿಸಿಗೆ ಉತ್ತರಿಸಿದ್ದ ಶಿಕ್ಷಕರಾದ ಗುರುರಾಜ ಜೋಶಿ ಹಾಗೂ ಅಣ್ಣಾಸಾಹೇಬ ದೇಶಮುಖ, ಆರ್‌ಎಸ್‌ಎಸ್‌ ಪಥಸಂಚಲನವು ಕೆಲಸದ ವೇಳೆಯಲ್ಲಿ ನಡೆದಿಲ್ಲ, ಅದು ರಾಜಕೀಯ ಕಾರ್ಯಕ್ರಮ ಆಗಿರಲಿಲ್ಲ, ಕಾರ್ಯಕ್ರಮ ರವಿವಾರ ನಡೆದಿದ್ದು, ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದರಿಂದ ಭಾಗವಹಿಸಿದ್ದೇವು ಎಂದು ತಿಳಿಸಿದ್ದರು.

ಆದರೆ, ಈ ಉತ್ತರ ಸಮಂಜಸವಲ್ಲ ಎಂಬ ಕಾರಣ ನೀಡಿ, ‘ಜವಾಬ್ದಾರಿಯುತ ಶಿಕ್ಷಕರ ಹುದ್ದೆಯಲ್ಲಿದ್ದು, ಸಮಾಜಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮಾದರಿ ಆಗಬೇಕಾದ ನೀವು, ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿ, ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣಾ ಕಾಯ್ದಿರಿಸಿ ಅಮಾನತ್ತಿನಲ್ಲಿರಿಸಲಾಗಿದೆ’ ಎಂದು ಆದೇಶ ಹೊರಡಿಸಲಾಗಿದೆ.

PREV
Read more Articles on
click me!

Recommended Stories

65 ತೆರಿಗೆ ಸಂಗ್ರಾಹಕರು, ಗುಮಾಸ್ತರು, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ
ಇಂದು ಅರ್ಧ ಬೆಂಗಳೂರಿಗೆ ನೀರಿನ ಪೂರೈಕೆ ಸ್ಥಗಿತ