
ಗಂಗಾವತಿ (ಸೆ.01): ನಿಧಿ ಸಿಗಬಹುದು ಎಂಬ ಅನುಮಾನದಲ್ಲಿ ಮನೆಯೊಂದರೊಳಗೆ ಬರೋಬ್ಬರಿ 50 ಅಡಿ ಆಳದ ಗುಂಡಿ ತೋಡಿರುವ ಘಟನೆ ತಾಲೂಕಿನ ವಡ್ಡರಹಟ್ಟಿಯಲ್ಲಿ ಬೆಳಕಿಗೆ ಬಂದಿದೆ. ಮನೆಯ ಮಾಲೀಕರು ಬೆಂಗಳೂರಿನಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಬಿಹಾರ ಮೂಲದ ಗೌಂಡಿ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಾಸ್ತು ಕೆಲಸಕ್ಕೆಂದು ಬಂದವರು ಮಾಡಿದ್ದೇನು?
ವಡ್ಡರಹಟ್ಟಿ ಗ್ರಾಮದ ನಿವಾಸಿ ಹಾಗೂ ಮರಳಿ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ನಾಗಬಿಂದು ಪ್ರಕಾಶ ಅವರ ಮನೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯ ವಾಸ್ತು ಸರಿಪಡಿಸುವ ಹಾಗೂ ನವೀಕರಣ ಕಾಮಗಾರಿಗಾಗಿ ಆರು ಮಂದಿ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಕಳೆದ ಒಂದು ತಿಂಗಳಿಂದ ಮನೆಯ ಮಾಲೀಕರು ಬೆಂಗಳೂರಿನಲ್ಲಿ ವಾಸವಾಗಿದ್ದ ವೇಳೆ, ಕಾರ್ಮಿಕರು ವಾಸ್ತು ಕಾಮಗಾರಿ ನಡೆಸುವ ಬದಲು ಮನೆಯೊಳಗೆ ಆಳವಾದ ಗುಂಡಿ ತೋಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಮನೆಯೊಳಗೆ 50 ಅಡಿ ಆಳದ ಗುಂಡಿ!
ಸ್ಥಳೀಯರ ಪ್ರಕಾರ, ಕಾರ್ಮಿಕರು ರಾತ್ರಿ ವೇಳೆ ಮನೆಯೊಳಗೆ ಗುಂಡಿ ತೋಡುತ್ತಿದ್ದರು ಎನ್ನಲಾಗಿದೆ. ಅಗೆದ ಮಣ್ಣನ್ನು ಹೊರಗೆ ಸಾಗಿಸದೆ, ಮನೆಯಲ್ಲೇ ಸುಮಾರು 25ಕ್ಕೂ ಹೆಚ್ಚು ಚೀಲಗಳಲ್ಲಿ ತುಂಬಿ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಗ್ರಾಮಸ್ಥರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದ್ದು, ಮನೆಯೊಳಗೆ ನಿಧಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತೇ ಎಂಬ ಪ್ರಶ್ನೆ ಮೂಡಿದೆ.
ಚೈನ್ ಶಬ್ದ ಕೇಳಿ ಅನುಮಾನ!
ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಮನೆಯೊಳಗಿಂದ ವಿಚಿತ್ರ ಶಬ್ದ ಕೇಳಿಬಂದಿದೆ ಎನ್ನಲಾಗಿದೆ. ಸುಮಾರು 50 ಅಡಿ ಆಳಕ್ಕೆ ತೋಡಲಾಗಿದ್ದ ಗುಂಡಿಯಿಂದ ಮಣ್ಣನ್ನು ಚೈನ್ ಸಹಾಯದಿಂದ ಮೇಲಕ್ಕೆ ಎತ್ತುವ ಸಂದರ್ಭದಲ್ಲಿ ಶಬ್ದ ಕೇಳಿದ್ದು, ಇದರಿಂದ ಸ್ಥಳೀಯರಿಗೆ ಅನುಮಾನ ಬಂದಿದೆ. ಮನೆಯ ಮಾಲೀಕರು ಸ್ಥಳದಲ್ಲಿಲ್ಲದಿರುವುದನ್ನು ಗಮನಿಸಿದ ಗ್ರಾಮಸ್ಥರು, ಮನೆಯೊಳಗೆ ನಡೆಯುತ್ತಿರುವ ಚಟುವಟಿಕೆ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ 112ಕ್ಕೆ ಕರೆ ಮಾಡಿ ದೂರು ನೀಡಲಾಗಿದೆ.
6 ಮಂದಿ ಪೊಲೀಸರ ವಶಕ್ಕೆ
ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರು ಮಂದಿ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಾವು ಬಿಹಾರ ಮೂಲದ ಗೌಂಡಿ ಕಾರ್ಮಿಕರು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಮನೆಯ ವಾಸ್ತು ಸರಿಯಾಗಿಲ್ಲದ ಹಿನ್ನೆಲೆಯಲ್ಲಿ ಗುಂಡಿ ತೋಡಿ ಸರಿಪಡಿಸುವಂತೆ ತಮಗೆ ಸೂಚಿಸಲಾಗಿತ್ತು. ಅದಕ್ಕಾಗಿ ಗುಂಡಿ ತೋಡಿದ್ದೇವೆ, ನಮಗೆ ಯಾವುದೇ ನಿಧಿಯ ಬಗ್ಗೆ ಮಾಹಿತಿ ಇಲ್ಲ ಎಂದು ಕಾರ್ಮಿಕರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಮನೆಯೊಳಗೆ 50 ಅಡಿ ಆಳದ ಗುಂಡಿ, ರಾತ್ರಿ ವೇಳೆ ಕಾಮಗಾರಿ ಹಾಗೂ ಅಗೆದ ಮಣ್ಣನ್ನು ಚೀಲಗಳಲ್ಲಿ ಸಂಗ್ರಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಈ ಅಗೆತ ನಿಜವಾಗಿಯೂ ನಿಧಿ ಹುಡುಕಾಟಕ್ಕಾಗಿಯೇ ನಡೆದಿತ್ತೇ ಅಥವಾ ವಾಸ್ತು ಕಾಮಗಾರಿಯ ಭಾಗವಾಗಿತ್ತೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ. ಈ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಆರು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ ಯಾತನೂರು ತಿಳಿಸಿದ್ದಾರೆ.