
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಜೀವನದಲ್ಲಿ ಎದುರಾದ ತೀವ್ರ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಲಾರದೆ, ಒಂದೇ ಕುಟುಂಬದ ಮೂವರು ಸದಸ್ಯರು ಸಾಮೂಹಿಕವಾಗಿ ಸಾವಿಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಇಡೀ ಗಂಗಾವತಿ ನಗರವೇ ಶಾಕ್ ಆಗಿದೆ.
ಗಂಗಾವತಿ ನಗರದ ಪ್ರಶಾಂತ ನಗರದ ವಸತಿ ಪ್ರದೇಶದ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. . ಮೃತರನ್ನು ಪ್ರಕಾಶ್ ರಾಯ್ಕರ್ (54 ವರ್ಷ), ಅವರ ಪತ್ನಿ ಪ್ರಭಾ (46 ವರ್ಷ) ಮತ್ತು ಅವರ 21 ವರ್ಷದ ಮಗ ಶಶಾಂಕ್ ರಾಯ್ಕರ್ ಎಂದು ಗುರುತಿಸಲಾಗಿದೆ. ಭವಿಷ್ಯದ ಬಗ್ಗೆ ನೂರೆಂಟು ಕನಸುಗಳನ್ನು ಕಾಣಬೇಕಿದ್ದ ಇನ್ನೂ ಸಣ್ಣ ವಯಸ್ಸಿನ ಮಗನೊಂದಿಗೆ ಇಡೀ ಕುಟುಂಬವೇ ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಸ್ಥಳೀಯರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.
ಸ್ಥಳೀಯ ಮೂಲಗಳಿಂದ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ಪ್ರಕಾಶ್ ರಾಯ್ಕರ್ ಅವರು ಗಂಗಾವತಿ ನಗರದಲ್ಲಿ ಸ್ವಂತ ಜ್ಯುವೆಲರಿ ಶಾಪ್ (ಚಿನ್ನಾಭರಣಗಳ ಅಂಗಡಿ) ನಡೆಸುತ್ತಿದ್ದರು. ಮೇಲ್ನೋಟಕ್ಕೆ ಇವರ ಈ ಸಾವಿನ ನಿರ್ಧಾರಕ್ಕೆ ಭಾರಿ ಪ್ರಮಾಣದ ಸಾಲಬಾಧೆಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವ್ಯಾಪಾರದಲ್ಲಿ ಉಂಟಾದ ನಷ್ಟ ಅಥವಾ ವೈಯಕ್ತಿಕ ಹಣಕಾಸಿನ ಬಿಕ್ಕಟ್ಟು ಅವರನ್ನು ತೀವ್ರ ಮಾನಸಿಕ ಖಿನ್ನತೆಗೆ ದೂಡಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಇಡೀ ಸುಖೀ ಕುಟುಂಬವನ್ನೇ ಬಲಿಪಡೆದ ಈ ಘಟನೆಯ ಅಸಲಿ ಮತ್ತು ನಿಖರವಾದ ಕಾರಣ ಏನು ಎಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ದಿ ಅವರು ಸಿಬ್ಬಂದಿಯೊಂದಿಗೆ ತಕ್ಷಣವೇ ಪ್ರಶಾಂತ ನಗರದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.
ಕೊಪ್ಪಳದ ಗಂಗಾವತಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪಪಿದ ಪ್ರಕರಣಕ್ಕೆ ಸಬಂಧಿಸಿ ಮಾತನಾಡಿರುವ ಎಸ್ಪಿ ಡಾ ರಾಮ್ ಎಲ್ ಅರಸಿದ್ದಿ, ಕುಟುಂಬದ ಸಾಮೂಹಿಕ ಆತ್ಮ*ತ್ಯೆಗೆ ಸಾಲ ಬಾಧೆಯೇ ಪ್ರಮುಖ ಕಾರಣ ಎಂದಿದ್ದಾರೆ. ಪ್ರಕಾಶ್ ರಾಯ್ಕರ್ ಮಾನ್ವಿ ಪಟ್ಟಣ ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲದ ಹಿನ್ನಲೆಯಲ್ಲಿ ಮಾರಿದ್ದ ಮನೆಯಲ್ಲಿಯೇ ಪ್ರಕಾಶ್ ಕುಟುಂಬ ಸಾಮೂಹಿಕವಾಗಿ ಮೃತಪಟ್ಟಿದೆ. ಮಾರಿದ್ದ ಮನೆಯ ಹಿಂದಿನ ಬಾಗಿಲು ಒಡೆದು ಒಳಗಡೆ ಹೋಗಿ ಮೂವರು ನೇಣಿಗೆ ಶರಣಾಗಿದ್ದಾರೆ. 2021 ರಲ್ಲಿ ಸಾಲದ ಹಿನ್ನಲೆಯಲ್ಲಿ ನಾಗರಾಜ ಎನ್ನುವರಿಗೆ ಪ್ರಕಾಶ್ ಮನೆ ಮಾರಿದ್ದರು. ಕಳೆದ ಫೆಬ್ರುವರಿವರೆಗೂ ಪ್ರಕಾಶ್ ರಾಯ್ಕರ್ ಕುಟುಂಬ ಮಾರಿದ್ದ ಮನೆಯಲ್ಲಿಯೇ ಇದ್ದರು. ಮನೆ ಖರೀದಿಸಿದ್ದ ನಾಗರಾಜ ಸಹ ಮಾನ್ವಿ ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸದ ಹಿನ್ನಲೆಯಲ್ಲಿ ನಾಗರಾಜ್ ಮನೆಯನ್ನು ಮಾನ್ವಿ ಪಟ್ಟಣ ಬ್ಯಾಂಕ್‌ನವರು ಸೀಜ್ ಮಾಡಿದ್ದರು. ಇದೀಗ ಸೀಜ್ ಮಾಡಿದ್ದ ಮನೆಯಲ್ಲಿಯೇ ಪ್ರಕಾಶ ರಾಯ್ಕರ್ ಕುಟುಂಬ ಸಾವು ಕಂಡಿದೆ. ಪ್ರಕಾಶ್ ರಾಯ್ಕರ್ ಅವರದ್ದು ಕೋಟಿಗಟ್ಟಲೆ ಸಾಲ ಇದೆ ಎನ್ನಲಾಗಿದೆ. ಪ್ರಕಾಶ್ ಅನೇಕ ಕಡೆ ಪ್ರಾರ್ಪಟಿ ಮಾಡಿ ಅವುಗಳನ್ನು ಮಾರಾಟ ಮಾಡಿದ್ದಾನೆ. ಪ್ರಕಾಶ್ ರಿಯಲ್ ಎಸ್ಟೇಟ್ ಮಾಡುತ್ತಿದ್ದ ಎನ್ನುವುದರ ಬಗ್ಗೆ ಗೊತ್ತಿಲ್ಲ. ಪ್ರಕಾಶ್ ರಾಯ್ಕರ್ ಸಹೋದರ ದೂರು ನೀಡುತ್ತಾರೆ. ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದ ಎಸ್ಪಿ ಡಾ ರಾಮ್ ಅರಸಿದ್ದಿ.