ಬೋನು ಸಿದ್ಧ, ಹುಲಿ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ: ತೆಂಬಾದಲ್ಲಿ ಮುಂದೇನಾಗುತ್ತೆ?

Published : Aug 27, 2026, 06:06 PM IST
Tiger

ಸಾರಾಂಶ

ಗಂಗಾವತಿಯ ತೆಂಬಾ ಅರಣ್ಯದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದೆ. ಇದೀಗ ಅರಣ್ಯ ಇಲಾಖೆ ಬೋನು ಇಟ್ಟು ಕಾಯುತ್ತಿದೆ. ಆಕಳಿನ ಕಳೇಬರದ ಬಳಿ ಮತ್ತೆ ಹುಲಿ ಬರುವ ನಿರೀಕ್ಷೆಯಲ್ಲಿರುವ ಅಧಿಕಾರಿಗಳು, ಇನ್ನೆರಡು-ಮೂರು ದಿನಗಳಲ್ಲಿ ಹುಲಿ ಬೋನಿಗೆ ಬೀಳಬಹುದು ಎಂದು ಅಂದಾಜಿಸಿದ್ದಾರೆ. ಅಷ್ಟಕ್ಕೂ ಹುಲಿ ಸೆರೆಯಾಗುತ್ತಾ?

ರಾಮಮೂರ್ತಿ ನವಲಿ

ಗಂಗಾವತಿ (ಆ.27): ತಾಲೂಕಿನ ತೆಂಬಾ ಅರಣ್ಯ ಪ್ರದೇಶದಲ್ಲಿ ಕಳೆದ ಒಂದು ವಾರದ ಹಿಂದೆ ಕಾಣಿಸಿಕೊಂಡಿದ್ದ ಹುಲಿ ಇದೀಗ ಮತ್ತೆ ಅದೇ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ. ಬುಧವಾರ ರಾತ್ರಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಹುಲಿಯ ಚಲನವಲನ ದಾಖಲಾಗಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಗಂಗಾವತಿ ತಾಲೂಕಿನ ಏಳು ಗುಡ್ಡಗಳ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹುಲಿಯ ಓಡಾಟ ಕಂಡುಬಂದಿದೆ. ಕಡೇಬಾಗಿಲು, ಸಾಣಾಪುರ, ಸಂಗಾಪುರ, ಹಿರೇಬೆಣಕಲ್, ಜಂಗ್ಲಿ ಹಾಗೂ ರಂಗಾಪುರ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಅಲ್ಲದೆ, ನಾಲ್ಕು ಆಕಳುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಕೊಂದು ಹಾಕಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಇದೀಗ ಕಾರ್ಯಾಚರಣೆ ತೀವ್ರಗೊಳಿಸಿದೆ. ನಾಗರಹೊಳೆ ಹಾಗೂ ದಾಂಡೇಲಿ ಅರಣ್ಯ ಪ್ರದೇಶಗಳಿಂದ ಇಟಿಎಫ್ (ETF) ತಂಡಗಳನ್ನು ಕರೆಸಲಾಗಿದ್ದು, ಸಿಬ್ಬಂದಿ ಸ್ಥಳದಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಮತ್ತೆ ಹುಲಿ ಪ್ರತ್ಯಕ್ಷ

ಹುಲಿಯ ಚಲನವಲನದ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ವಿವಿಧ ಪ್ರದೇಶಗಳಲ್ಲಿ 25ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಅದರಂತೆ, ತೆಂಬಾ ಅರಣ್ಯ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳ ಜೊತೆಗೆ ಎರಡು ಬೋನುಗಳನ್ನು ಕೂಡ ಇರಿಸಲಾಗಿದೆ.ಬುಧವಾರ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದು ತೆಂಬಾ ಅರಣ್ಯ ಪ್ರದೇಶದ ಸಿಬ್ಬಂದಿ ತಿಳಿಸಿದ್ದಾರೆ.

ಆಕಳಿನ ಕಳೇಬರವೇ ಹುಲಿಗೆ ಬಲೆ?

ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿ ಆಕಳನ್ನು ಬೇಟೆಯಾಡಿ ಸಂಪೂರ್ಣವಾಗಿ ತಿನ್ನದೆ ಬಿಟ್ಟಿರುವುದು ಅರಣ್ಯ ಇಲಾಖೆಯ ಗಮನಕ್ಕೆ ಬಂದಿದೆ. ತಾನು ಬಿಟ್ಟುಹೋದ ಬೇಟೆಯನ್ನು ಮತ್ತೆ ತಿನ್ನಲು ಹುಲಿ ಅದೇ ಸ್ಥಳಕ್ಕೆ ಮರಳುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಕಾರ್ಯತಂತ್ರ ರೂಪಿಸಿದ್ದಾರೆ.

ಹೀಗಾಗಿ, ಆಕಳಿನ ಕಳೇಬರದ ಬಳಿ ಇರಿಸಲಾಗಿರುವ ಬೋನಿನತ್ತ ಹುಲಿ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮುಂದಿನ ಎರಡು-ಮೂರು ದಿನಗಳಲ್ಲಿ ಹುಲಿ ಬೋನಿಗೆ ಬೀಳುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯಲ್ಲಿದೆ ಅರಣ್ಯ ಇಲಾಖೆ.

ಗಂಗಾವತಿ ಭಾಗದಲ್ಲಿ ಹುಲಿ ಕಾಣಿಸಿಕೊಳ್ಳುವುದು ಹೊಸದಲ್ಲ!

ಗಂಗಾವತಿ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ ಎಂದು ಎಚ್.ಆರ್. ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ರವಿ ಎನ್. ಚವ್ಹಾಣ ಅಭಿಪ್ರಾಯಪಟ್ಟಿದ್ದಾರೆ.

ಶಿವಮೊಗ್ಗದ ಪಶ್ಚಿಮ ಘಟ್ಟಗಳಿಂದ ತುಂಗಭದ್ರಾ ನದಿ ಪ್ರದೇಶದ ಮೂಲಕ ಗಂಗಾವತಿ ಮಾರ್ಗವಾಗಿ ಶ್ರೀಶೈಲಂವರೆಗೂ ಹಿಂದೆ ಹುಲಿಗಳ ಸಂತತಿ ಇತ್ತು ಎಂದು ಅವರು ಹೇಳಿದ್ದಾರೆ. ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಹಿಂದಿನಿಂದಲೂ ಹುಲಿಗಳಿದ್ದವು ಎಂಬುದಕ್ಕೆ ಇಲ್ಲಿನ ಹಲವು ಗ್ರಾಮಗಳ ಹೆಸರುಗಳೇ ಸಾಕ್ಷಿ ಎಂದು ಅವರು ವಿವರಿಸಿದ್ದಾರೆ.

ಹುಲಿಕೆರೆ, ಹುಲಿ ಹೈದರ್, ಹುಲಿಗೇರಾ, ಹುಲ್ಕಿಹಾಳ, ಹುಲಿಯಾಪುರ, ಹುಲಗಿ ಹಾಗೂ ಹುಲಕುಂಟಿ ಸೇರಿದಂತೆ ಹುಲಿ ಹೆಸರನ್ನು ಒಳಗೊಂಡಿರುವ ಹಲವು ಗ್ರಾಮಗಳಿರುವುದು ಈ ಭಾಗದಲ್ಲಿ ಹಿಂದೆ ಹುಲಿಗಳ ಓಡಾಟವಿದ್ದುದಕ್ಕೆ ಪುರಾವೆಯಂತಿದೆ ಎಂಬುದು ಅವರ ಅಭಿಪ್ರಾಯ. ಸದ್ಯ ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿಯ ಚಲನವಲನ ಸಿಸಿ ಕ್ಯಾಮರಾದಲ್ಲಿ ಮತ್ತೆ ಸೆರೆಯಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಹುಲಿ ಸೆರೆ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಅಂದು ಸಿದ್ದರಾಮಯ್ಯ, ಪರಮೇಶ್ವರ್ ಭೇಟಿ; ವ್ಯವಸ್ಥೆ ವಿರುದ್ಧ ಯುದ್ಧ ಸಾರಿ ಗೆದ್ದಿದ್ದ ರಾಬಿಯಾ, ಮಕ್ಕಳಿಗೆ ವಿಷವಿಟ್ಟು ಸಾವನ್ನಪ್ಪಿದ್ದೇಕೆ?
ಸಿಜೆಐ ಸೂರ್ಯಕಾಂತ್‌, ಬಿಸಿಐ ಅಧ್ಯಕ್ಷ ಭಾಗವಹಿಸುವಿಕೆಗೆ ವಿರೋಧ; ಬೆಂಗಳೂರಿನ NLSIU 34ನೇ ವಾರ್ಷಿಕ ಘಟಿಕೋತ್ಸವ ರದ್ದು