ಕೊಪ್ಪಳಕ್ಕೂ ಕಾಲಿಟ್ಟಿತೇ ಕೊರೋನಾ? ಆತಂಕದಲ್ಲಿ ಜನತೆ..!

By Kannadaprabha NewsFirst Published Apr 16, 2020, 7:47 AM IST
Highlights
ಪಾಸ್‌ಗಾಗಿ ಕೊಪ್ಪಳಕ್ಕೆ ಆಗಮಿಸಿದ ಮುಂಬೈ ಮೂಲಕ ಮಹಿಳೆ|ಹುಬ್ಬಳ್ಳಿ ಮುಲ್ಲಾ ಓಣಿಯ 194 ರೋಗಿಯ ಜತೆ ಮುಂಬೈನಿಂದ ಹುಬ್ಬಳ್ಳಿಗೆ ಪ್ರಯಾಣ|ಮಹಿಳೆಯನ್ನು ಐಸೋಲೇಶನ್‌ ಕ್ವಾರಂಟೈನ್‌ ಮಾಡಲಾಗಿದೆ| ಈಕೆ ತಂಗಿದ್ದ ಶಾಂತರಾಮ್‌ ಅವರ ಕುಟುಂಬದವರನ್ನು ಹೋಂ ಕ್ವಾರಂಟೈನ್‌| 
ಕೊಪ್ಪಳ(ಏ.16): ಕೊರೋನಾ ಸೋಂಕಿತ ವ್ಯಕ್ತಿಯು ಪ್ರಯಾಣ ಬೆಳಸಿದ ಬಸ್ಸಿನಲ್ಲಿಯೇ ಸಂಚರಿಸಿದ ಮುಂಬೈ ಮೂಲದ ಮಹಿಳೆ ಕೊಪ್ಪಳದ ಭಾಗ್ಯನಗರದಲ್ಲಿ ತಂಗಿದ್ದರು. ಇವರು ಮುಂಬೈಗೆ ತೆರಳಲು ಪಾಸ್‌ ಪಡೆಯಲು ಕೊಪ್ಪಳ ಎಸ್ಪಿ ಕಚೇರಿಗೆ ಬಂದಾಗ ಇದೆಲ್ಲವೂ ಗೊತ್ತಾಗಿದೆ. ಹೀಗಾಗಿ, ಕೊಪ್ಪಳಕ್ಕೂ ಕಾಲಿಟ್ಟಿತೆ ಕೊರೋನಾ ಎನ್ನುವ ಆತಂಕ ಎದುರಾಗಿದೆ.

ಮಾ. 19ರಂದು ಮುಂಬೈನಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ ಧಾರವಾಡದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದೇ ಬಸ್ಸಿನಲ್ಲಿ ಪ್ರಯಾಣ ಬೆಳಸಿದ್ದ ಶಿಖಾ ಶೇಖ್‌ ಅವರು ಆಟೋ ಮೂಲಕ ಹುಬ್ಬಳ್ಳಿಯಲ್ಲಿನ ಲಕ್ಷ್ಮೀ ಭಟ್‌ ಅವರ ಮನೆಯಲ್ಲಿ ವಾಸ ಮಾಡಿದ್ದಾಳೆ.

ಪೊಲೀಸರ ಕಣ್ತಪ್ಪಿಸಿ ಜನರ ಓಡಾಟ: ಗಂಗಾವತಿಯಲ್ಲಿ ದ್ರೋಣ್‌ ಕಣ್ಗಾವಲು

ಈಕೆ ಹಾಲಿನ ವಾಹನದ ಮೂಲಕ ಏ. 13ರಂದು ರಾತ್ರಿ ಕೊಪ್ಪಳಕ್ಕೆ ಆಗಮಿಸಿ, ಭಾಗ್ಯನಗರದ ಕದಂಬನಗರದ ಶಾಂತರಾಮ್‌ ಅವರ ನಿವಾಸಕ್ಕೆ ತೆರಳಿದ್ದಾಳೆ. ಏ. 14ರಂದು ಬೆಳಗ್ಗೆ ಗುರುಬಸವರಾಜ ಹೊಳಗುಂದಿ ಅವರ ಸ್ಕೂಟರ್‌ನಲ್ಲಿ ಎಸ್ಪಿ ಕಚೇರಿಗೆ ಆಗಮಿಸಿ, ಮುಂಬೈಗೆ ತೆರಳಲು ಪಾಸ್‌ ಪಡೆಯಲು ಯತ್ನಿಸಿದ್ದಾರೆ. ಈ ವೇಳೆ ಮಾಹಿತಿ ಗೊತ್ತಾಗಿದ್ದರಿಂದ ಈಕೆಯನ್ನು ಐಸೋಲೇಶನ್‌ ಕ್ವಾರಂಟೈನ್‌ ಮಾಡಲಾಗಿದೆ. ಈಕೆ ತಂಗಿದ್ದ ಶಾಂತರಾಮ್‌ ಅವರ ಕುಟುಂಬದವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಕ್ರಿಮಿನಲ್‌ ಪ್ರಕರಣ:

ಈಕೆಯನ್ನು ಕರೆತಂದಿದ್ದ ಗುರುಬಸವರಾಜ ಕ್ವಾರಂಟೈನ್‌ ಮಾಡಲು ಯತ್ನಿಸಿದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದಾನೆ. ಹೀಗಾಗಿ, ಈತನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲು ಡಿ.ಸಿ. ಅವರು ತಹಸೀಲ್ದಾರ ಅವರಿಗೆ ಸೂಚಿಸಿದ್ದಾರೆ.

ಅಲ್ಲದೇ ಗುರುಬಸವರಾಜ ಹೊಳಗುಂದಿ ಮುಂಬೈಗೆ ತೆರಳಲು ಶಿಖಾ ಶೇಖ್‌ ಅವರಿಗೆ ಪಾಸ್‌ ಕೊಡಿಸುವುದಾಗಿ ಹೇಳಿ ಕರೆಯಿಸಿಕೊಂಡಿದ್ದಾನೆ. ಈ ಕಾರಣಕ್ಕಾಗಿಯೇ ಆಕೆ ಆಗಮಿಸಿ, ಭಾಗ್ಯನಗರದಲ್ಲಿ ತಂಗಿದ್ದಾಳೆ. ಆದರೆ, ಮುಂಬೈನಿಂದ ಆಗಮಿಸಿ, ಹುಬ್ಬಳ್ಳಿಯಲ್ಲಿ ತಂಗಿದ್ದರೂ ಮಾಹಿತಿ ನೀಡದೆ ಮುಚ್ಚಿಟ್ಟಿದ್ದಳೇ ಎನ್ನುವುದು ಸದ್ಯದ ಕುತೂಹಲ.

ಮಾಹಿತಿ ನೀಡಲು ಮನವಿ:

ಶಿಖಾ ಶೇಖ್‌, ಗುರುಬಸವರಾಜ ಹೊಳಗುಂದಿ ಹಾಗೂ ಶಾಂತರಾಮ್‌ ಅವರ ಕುಟುಂಬದವರ ಜೊತೆಗೆ ಸಂಪರ್ಕಕ್ಕೆ ಬಂದಿದ್ದರೆ ಅಥವಾ ಸಂಚಾರ ಮಾಡಿದ್ದರೆ ಅಂಥ ವ್ಯಕ್ತಿಗಳು ಅವರ ಮನೆಯಿಂದ ಹೊರಗೆ ಬಾರದೆ ಕಡ್ಡಾಯವಾಗಿ ಕ್ವಾರಂಟೈನ್‌ ಆಗತಕ್ಕದ್ದು. ಸಂಪರ್ಕ ಹೊಂದಿದವರಲ್ಲಿ ಕೆಮ್ಮು, ನೆಗಡಿ, ಉಸಿರಾಟ ಸಂಬಂಧಿ ಕಾಯಿಲೆಗಳ ಲಕ್ಷಣಗಲು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಚಿಕಿತ್ಸೆಯನ್ನು ಪಡೆಯತಕ್ಕದ್ದು. ಹೆಚ್ಚಿನ ವಿವರಗಳಿಗೆ ಕರೋನಾ ಸಹಾಯವಾಣಿ ಸಂಖ್ಯೆ 104 ಮತ್ತು 08539-225001 ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಕೋರಿಕೊಂಡಿದ್ದಾರೆ.
 
click me!