
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.10): ಚರ್ಮ ರೋಗದಿಂದ ದೇಹವೆಲ್ಲ ಅಂದಗೆಟ್ಟು ಹೋಗಿದೆ. ಅಷ್ಟೇ ಅಲ್ಲ ಈಗ 8 ವರ್ಷಗಳಿಂದ ಕಣ್ಣು ಸಹ ಕಾಣುತ್ತಿಲ್ಲ. ಹೋಗಲಿ ಸರ್ಕಾರದ ಸೌಲಭ್ಯವನ್ನಾದರೂ ಪಡೆಯಬೇಕು ಎಂದರೂ ಆಧಾರ ಕಾರ್ಡ್‌ಗೆ ಮೊಬೈಲ್ ನಂಬರ್‌ಲಿಂಕ್ ಸಹ ಆಗುತ್ತಿಲ್ಲ, ಆಧಾರ್ ಕಾರ್ಡ್ ಯಂತ್ರ ಅವರ ಮುಖ ಮತ್ತು ಕೈಬೆರಳಿನ ಗೆರೆಗಳನ್ನು ಸಹ ಗುರುತಿಸದೇ ಇರುವುದರಿಂದ ತಾಂತ್ರಿಕ ಸಮಸ್ಯೆಯಾಗಿ ಈ ನತದೃಷ್ಟನ ಬದುಕೇ ದಯನೀಯವಾಗಿದೆ.
ಹೌದು, ಇವರ ಹೆಸರು ಬಸವರಾಜ ನಾಗೂರು, 26 ವರ್ಷದ ಯುವಕ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಿ ಗ್ರಾಮದ ನಿವಾಸಿ. ಇವರಿಗೆ ಓರ್ವ ಸಹೋದರ ಇದ್ದು, ಅವರಿಂದ ಪ್ರತ್ಯೇಕವಾಗಿ ತಂದೆ ಶೇಖಪ್ಪ ಹಾಗೂ ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ತಾಯಿಗೂ ಇತ್ತೀಚೆಗೆ ಪಾರ್ಶವಾಯು ತಗುಲಿರುವುದರಿಂದ ಅವರ ಕುಟುಂಬ ಕರುಣಾಜನಕ ಸ್ಥಿತಿಯಲ್ಲಿದೆ. ಅವರಿಗೆ ಅವರೇ ಆಸರೆ ಎಂಬಂತಾಗಿದೆ.
ಲಿಂಕ್ ಆಗದ ಆಧಾರ್:
26 ವರ್ಷದ ಇವರಿಗೆ ಆಧಾರ್ ಕಾರ್ಡ್ ಇದೆ. ಪ್ರಾರಂಭದಲ್ಲಿ ಚರ್ಮ ರೋಗ ಅಷ್ಟಾಗಿ ಇದ್ದಿಲ್ಲವಾದ್ದರಿಂದ ಆಧಾರ ಕಾರ್ಡ್ ದೊರೆಯಿತು. ಆದರೆ 8 ವರ್ಷಗಳ ಹಿಂದೆ ಆಧಾರ್‌ಗೆ ಮೊಬೈಲ್ ನಂಬರ್‌ಲಿಂಕ್ ಕಡ್ಡಾಯ ಮಾಡಲಾಗಿದೆ. ಅವರು ನಂಬರ್ ಲಿಂಕ್ ಮಾಡಿಸಲು ಯತ್ನಿಸುತ್ತಲೇ ಇದ್ದು, ಕಚೇರಿ ಸುತ್ತಾಡುತ್ತಲೇ ಇದ್ದಾರೆ. ಆದರೆ, ಲಿಂಕ್ ಆಗುತ್ತಿಲ್ಲ. ಚರ್ಮ ರೋಗದಿಂದ ಕೈ, ಕಾಲು ಸೇರಿದಂತೆ ಇಡೀ ದೇಹ ಅಂದಗೆಟ್ಟು ಹೋಗಿದೆ. ಕೈಬೆರಳುಗಳು ಸಹ ಮುರುಟ (ಸುಕ್ಕುಗಟ್ಟಿ) ದಂತಾಗಿವೆ. ಹೀಗಾಗಿ, ಬೆರಳುಗಳ ಗೆರೆಗಳು ಗುರುತಿಸು ಸಾಧ್ಯವಾಗದೆ ಅವರ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್‌ಲಿಂಕ್ ಮಾಡಲು ಆಗುತ್ತಿಲ್ಲ. ಕಣ್ಣು ಸ್ಕ್ಯಾನ್ ಮಾಡಿಯಾದರೂ ನೀಡಲು ಅವಕಾಶ ಇದೆ. ಆದರೆ, ಕಳೆದ 8 ವರ್ಷಗಳಿಂದ ಕಣ್ಣು ಸಹ ಕಾಣದಾಗಿರುವುದ ರಿಂದ ಅವುಗಳನ್ನು ಸ್ಕ್ಯಾನ್ ಮಾಡಿದರೂ ಆಧಾರ್ ಕಾರ್ಡ್ ಅಪ್‌ಡೇಟ್ ಆಗುತ್ತಿಲ್ಲ.
ಸೌಲಭ್ಯಗಳಿಂದ ವಂಚಿತ:
ಇದರಿಂದಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆಧಾರ್ ಕಾರ್ಡ್ ಮೊಬೈಲ್ ನಂಬರ್‌ಲಿಂಕ್ ಮಾಡಿಸಿಕೊಂಡು ಬನ್ನಿ ಎನ್ನುತ್ತಾರೆ. ಹೀಗಾಗಿ, ಅವರ ಹಳೆಯ ಆಧಾರ್ ಕಾರ್ಡ್ ಅಪ್‌ಡೇಟ್ ಇಲ್ಲದಿರುವುದರಿಂದ ಆಧಾರ್ ಇದ್ದು ಇಲ್ಲದಂತಾಗಿದೆ. ಇಂಥ ಮಗನೊಂದಿಗೆ ತಂದೆ ಶೇಖಪ್ಪ ಆಧಾರ್ ಕಚೇರಿಗೆ ಸುತ್ತಾಡಿ ಸುತ್ತಾಡಿ ಸುಸ್ತಾಗಿದ್ದಾರೆ. ಪ್ರತಿಬಾರಿಯೂತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದು ಹೇಳಿ ಕಳುಹಿಸುತ್ತಾರೆ.
ವಿಶೇಷ ಪ್ರಕರಣವೆಂದು ಪರಿಗಣಿಸಬೇಕು:
ಈ ತರಹದ ಸಮಸ್ಯೆ ಇರುವವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್‌ಲಿಂಕ್ ಮಾಡಿದರೆ ಅನುಕೂಲವಾಗುತ್ತದೆ. ಇದಕ್ಕೆ ಅವಕಾಶ ಇದ್ದರೂ ಮೇಲಧಿಕಾರಿಗಳ ಯಾರು ಸಹ ಇವರ ನೆರವಿಗೆ ಬರುತ್ತಿಲ್ಲ. ಬದಲಾಗಿ ಸಬೂಬು ನೀಡಿ ಕಳುಹಿಸುತ್ತಾರೆ. ಸರ್ಕಾರವಾದರೂ ಇಂಥವರ ನೆರವಿಗೆ ಧಾವಿಸಬೇಕಾಗಿದೆ. ಕರುಣಾಜನಕ ಸ್ಥಿತಿಯಲ್ಲಿ ಇರುವ ಬಸವರಾಜಗೆ ಸಹಕಾರ ನೀಡಬೇಕಿದೆ.
ಕೊಪ್ಪಳದಲ್ಲಿ ಹಿಟ್ನಾಳ್ ಬ್ರದರ್ಸ್ ಬೆಂಬಲಿಗರ ರೌಡಿಸಂ! ಕಾಂಗ್ರೆಸ್ ಮತ ಹಾಕುವಂತೆ ಬಿಜೆಪಿ ಮುಖಂಡನ ಮೇಲೆ ಹಲ್ಲೆ!
ಕೈ ಚೆಲ್ಲಿದ ವೈದ್ಯರು:
ಹುಟ್ಟಿದಾಗಿನಿಂದಲೇ ಅವರಿಗೆ ಚರ್ಮರೋಗ ಇದೆ. ವೈದ್ಯರ ಬಳಿ ನಿರಂತರವಾಗಿ ತೋರಿಸಿದರೂ ಪ್ರಯೋಜನವಾ ಗಿಲ್ಲ. ಇದನ್ನು ಏನು ಮಾಡಲು ಆಗುವುದಿಲ್ಲ ಎಂದು ವೈದ್ಯರು ಕೈ ಚೆಲ್ಲಿದ್ದಾರೆ. ಇದರಿಂದಾಗಿ ದೇಹ ಅಂದಗೆಡುತ್ತಿದೆ ಮತ್ತು ಶಕ್ತಿ ಕಳೆದು ಕೊಳ್ಳುತ್ತಿರುವುದರಿಂದ ಬಸವರಾಜಗೆ ದಿಕ್ಕು ತೋಚದಂತಾಗಿದೆ. ಆಸರೆಯಾಗಿದ್ದ ತಂದೆ. ತಾಯಿಗೂ ವಯಸ್ಸಾಗಿದ್ದರಿಂದ ಮುಂದಿನ ಜೀವನ ಹೇಗೆಂದು ಚಿಂತೆಯಲ್ಲಿ ಮುಳುಗಿದ್ದಾರೆ. ನೆರವು ನೀಡುವವರು 7483369755 ಸಂಖ್ಯೆಗೆ ಸಂಪರ್ಕಿಸಬಹುದು.
ನನ್ನ ಸ್ಥಿತಿ ಯಾರಿಗೂ ಬರಬಾರದು. ಹೇಗೋ ಜೀವನ ನಡೆಸಬೇಕು ಎಂದರೆ ಆಧಾರ್ ಕಾರ್ಡ್ ಮೊಬೈಲ್ ನಂಬರ್‌ಹ ಲಿಂಕ್ ಆಗುತ್ತಿಲ್ಲ. ತಂದೆ- ತಾಯಿಗೂ ವಯಸ್ಸಾಗು ತ್ತಿದೆ. ನನ್ನನ್ನು ದೇವರೇ ಕಾಪಾಡಬೇಕು. ಯಾರಾದರೂ ಸಹಾಯ ಮಾಡಿದರೆ ಬದುಕುತ್ತೇನೆ ಎಂದು ಸಂತ್ರಸ್ತ ಬಸವರಾಜ ತಿಳಿಸಿದ್ದಾರೆ.