* ಆನೆಗೊಂದಿಯ ಭೋಜನ ಶಾಲೆ ನಿರ್ಮಾಣಕ್ಕೆ ಬಂದಿದ್ದ ಸಂಸದರ ಅನುದಾನ
* ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಸಿಗದ ಅನುಮತಿ
* ಪ್ರಾಧಿಕಾರ ನಿರಾಕರಣೆ
ರಾಮಮೂರ್ತಿ ನವಲಿ
ಗಂಗಾವತಿ(ಜೂ.04): ತಾಲೂಕಿನ ಆನೆಗೊಂದಿಯ ದುರ್ಗಾ ಬೆಟ್ಟದಲ್ಲಿರುವ ದುರ್ಗಾದೇವಿ ದೇವಸ್ಥಾನದ ಭೋಜನ ಶಾಲೆ ನಿರ್ಮಾಣಕ್ಕೆ ಹಂಪಿ ಪ್ರಾಧಿಕಾರ ಅನುಮತಿ ನೀಡದ ಕಾರಣ ಸಂಸದ ಕರಡಿ ಸಂಗಣ್ಣ ನೀಡಿರುವ 10 ಲಕ್ಷ ಅನುದಾನ ವಾಪಸ್ ಆಗಿದೆ.
2014- 15ನೇ ಸಾಲಿನಲ್ಲಿ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದುರ್ಗಾದೇವಿ ದೇವಸ್ಥಾನ ಭೋಜನ ಶಾಲೆ ನಿರ್ಮಾಣಕ್ಕೆ ಸಂಸದರು 10 ಲಕ್ಷ ಅನುದಾನ ನೀಡಿದ್ದರು. ಈ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದರು. ಈ ಕಾರಣಕ್ಕಾಗಿ ಸಂಸದರು ಸುಸಜ್ಜಿತ ಭೋಜನ ಶಾಲೆ ನಿರ್ಮಾಣವಾಗಲಿ ಎನ್ನುವ ಉದ್ದೇಶಕ್ಕೆ ಅನುದಾನ ನೀಡಿದ್ದರು. ಆದರೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಕಟ್ಟಡಕ್ಕೆ ಅನುಮತಿ ನೀಡದ ಕಾರಣ ಅನುದಾನ ವಾಪಸ್ಸಾಗಿದೆ.
ಕೊಪ್ಪಳ ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ರೈತರ ವಿರೋಧ
ಪ್ರಾಧಿಕಾರ ನಿರಾಕರಣೆ:
ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಅವರು 2015ರ ಮಾ. 23ರಂದು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಆನೆಗೊಂದಿಯ ಐತಿಹಾಸಿಕ ದುರ್ಗಾದೇವಿ ದೇವಸ್ಥಾನದ ಉಚಿತ ವಸತಿನಿಲಯ ಎರಡು ಕೊಠಡಿಗಳ ನಿರ್ಮಾಣಕ್ಕೆ 10 ಲಕ್ಷ ಅನುದಾನ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಪ್ರಾಧಿಕಾರವು ಕಾಮಗಾರಿ ಅನುಷ್ಠಾನಗೊಳಿಸಲು ಪರವಾನಗಿ ನೀಡಲು ನಿರಾಕರಿಸಿದ್ದು, ಈ ಕಾಮಗಾರಿಗಳ ಬದಲಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಅರ್ಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸಂಸದರಿಗೆ ತಿಳಿಸಿದ್ದಾರೆ.
ಈಗ ಎಲ್ಲದಕ್ಕೂ ಅನುಮತಿ:
ಹಂಪಿ ಪ್ರಾಧಿಕಾರದ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿಗಳು ಸೇರಿದಂತೆ 15 ಗ್ರಾಮಗಳು ಒಳಪಡುತ್ತವೆ. ಇಲ್ಲಿ ಏನೇ ಕಾಮಗಾರಿ ಕೈಗೊಂಡರೆ ಹಂಪಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆಯ ಅನುಮತಿ ಬೇಕೆ ಬೇಕು. ಆದರೆ ಈಗ ಪ್ರಾಧಿಕಾರವು ಪಂಪಾಸರೋವರ ಮತ್ತು ದುರ್ಗಾದೇವಿಯ ಜೀರ್ಣೋದ್ಧಾರಕ್ಕೆ ಏಕಾಏಕಿಯಾಗಿ ಅನುಮತಿ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ಗಂಗಾವತಿ: ನಿಧಿ ಆಸೆಗೆ ಹಿಂದೂ ಆರಾಧನಾ ಸ್ಥಳಗಳು ಬಲಿ?
ಪ್ರಾಧಿಕಾರ ಅಡ್ಡಿ:
ದುರ್ಗಾದೇವಿ ದೇವಸ್ಥಾನದಲ್ಲಿ ಗೋಶಾಲೆ ಇದ್ದು, ಇಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗೋವುಗಳಿವೆ. ಇದಕ್ಕೆ ಗೋಶಾಲೆ ನಿರ್ಮಾಣಕ್ಕೆ ಪ್ರಾಧಿಕಾರ ಅನುಮತಿ ನೀಡದ ಕಾರಣ ಅನಧಿಕೃತವಾಗಿ ಶೆಡ್‌ಗಳನ್ನು ಹಾಕಲಾಗಿದೆ. ಕಳೆದ ವರ್ಷ ದುರ್ಗಾ ಬೆಟ್ಟದಲ್ಲಿರುವ ದೇವಸ್ಥಾನದ ಅರ್ಚಕನನ್ನು ಚಿರತೆ ಕೊಂದ ಉದಾಹರಣೆಗಳಿವೆ. ಗೋಶಾಲೆಯನ್ನು ಗಂಗಾವತಿ ನಗರ ಮತ್ತು ವಿವಿಧ ಜಿಲ್ಲೆಗಳ ಭಕ್ತರು ನೀಡಿದ ಕಾಣಿಕೆಯಿಂದ ನಿರ್ವಹಣೆ ಕಾರ್ಯ ನಡೆದಿದೆ. ಏನೇ ಇದ್ದರೂ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಕಾನೂನು ಉಲ್ಲಂಘಿಸಿ ಆದೇಶ ನೀಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಂಪಾ ಸರೋವರದಲ್ಲಿರುವ ವಿಜಯಲಕ್ಷ್ಮೀ ದೇವಿ ವಿಗ್ರಹ ಸೇರಿದಂತೆ ಗರ್ಭಗುಡಿ ತೆರವು ಮಾಡಿರುವುದು ತಪ್ಪು. ಕಾಮಗಾರಿ ಕೈಗೊಳ್ಳಲು ಖಾಸಗಿಯವರಿಗೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಅನುಮತಿ ನೀಡುವುದಕ್ಕೂ ತಾರತಮ್ಯ ಮಾಡಿದೆ. ಈ ಹಿಂದೆ ಕೊಪ್ಪಳ ಸಂಸದರು ದುರ್ಗಾದೇವಿಯ ಭೋಜನ ಶಾಲೆಯ ಕೊಠಡಿಗಳಿಗೆ .10 ಲಕ್ಷ ಅನುದಾನ ನೀಡಿದ್ದರೂ ಪ್ರಾಧಿಕಾರ ಅನುಮತಿ ನೀಡದ ಕಾರಣ ಅನುದಾನ ವಾಪಸಾಗಿದೆ. ಪ್ರಾಧಿಕಾರ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಅಂತ ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ತಿಳಿಸಿದ್ದಾರೆ.