ಅಂಚೆ ಲಕೋಟೆ ಮೇಲೆ ರಾರಾಜಿಸಲಿದೆ ಕೊಪ್ಪಳದ ಕಿನ್ನಾಳ ಕಲೆ

By Kannadaprabha NewsFirst Published Aug 30, 2021, 8:42 AM IST
Highlights

*  ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿಯೂ ಕಿನ್ನಾಳ ಕಲೆ ಸೊಬಗು
*  ಕಿನ್ನಾಳ ಕಲೆಯುಳ್ಳ ಅಂಚೆ ಲಕೋಟೆ ನಾಳೆ ಬಿಡುಗಡೆ
*  ಜಾಗತಿಕ ಟಚ್‌ ಕೊಡಲು ಯೋಜನೆ 
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.30):  ಜಗತ್ತಿಗೆ ಬಣ್ಣದ ಪರಿಚಯವೇ ಇಲ್ಲದ ಕಾಲದಲ್ಲಿಯೇ ಮೆರೆಯುತ್ತಿದ್ದ ಯ ಸೊಬಗನ್ನು ಈಗ ಕೇಂದ್ರ ಸರ್ಕಾರ ಮೆರೆಸಲು ಮುಂದಾಗಿದೆ. ಅದಕ್ಕೊಂದು ಜಾಗತಿಕ ಟಚ್‌ ಕೊಡಲು ಯೋಜನೆಯನ್ನು ರೂಪಿಸಿದ್ದು, ಆ.31ರಂದು ಜಾರಿಯಾಗಲಿದೆ. ಭಾರತ ಸರ್ಕಾರದ ಅಂಚೆ ಇಲಾಖೆಯ ಲಕೋಟೆಯ ಮೇಲೆ ಇನ್ನು ಮುಂದೆ ಕಿನ್ನಾಳ ಕಲೆಯ ಸೊಬಗು ರಾರಾಜಿಸಲಿದೆ.

ಈಗಾಗಲೇ ಇದಕ್ಕೆ ಕೇಂದ್ರ ಸರ್ಕಾರ ಮತ್ತು ಅಂಚೆ ಇಲಾಖೆ ಅಸ್ತು ಎಂದಿದ್ದು, ಗಣರಾಜ್ಯೋತ್ಸವದಲ್ಲಿ ದೆಹಲಿಯಲ್ಲಿ ಸ್ತಬ್ಧಚಿತ್ರ ಪ್ರದರ್ಶನದ ವೇಳೆಯಲ್ಲಿ ರಾರಾಜಿಸಿದ ಕಿನ್ನಾಳ ಕಲೆ ಇನ್ನು ಮುಂದೆ ಅಂಚೆ ಲಕೋಟೆಯ ಮೇಲೆ ಮಿಂಚಲಿದೆ.
ಕಿನ್ನಾಳ ಕಲೆ ಕೇವಲ ರಾಜ್ಯ, ದೇಶಕ್ಕೆ ಸೀಮಿತವಾಗಿಲ್ಲ, ಸಾಗರದಾಚೆಯೂ ಅದು ಖ್ಯಾತಿಯನ್ನು ಹೊಂದಿದೆ. ಈಗಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಿನ್ನಾಳ ಕಲೆಯ ಕಲಾಕೃತಿಗಳು ಬಹುಬೇಡಿಕೆ ಇದೆ. ಇದಕ್ಕೊಂದು ರಾಷ್ಟ್ರಮಟ್ಟದ ಗೌರವ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಕಿನ್ನಾಳ ಕಲೆಯ ಹೆಮ್ಮೆಗೆ ಮತ್ತೊಂದು ಗರಿಯಾಗಿದೆ.

ಈಗಾಗಲೇ ಕೇಂದ್ರ ಸರ್ಕಾರವೇ ಕರಕುಶಲ ಅಭಿವೃದ್ಧಿ ನಿಗಮದ ಮೂಲಕ ಅಂತಾರಾಷ್ಟ್ರೀಯ ಆನ್‌ಲೈನ್‌ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಟ್ಟಬೆನ್ನಲ್ಲೇ ಈಗ ಅಂಚೆ ಇಲಾಖೆ ಮತ್ತು ಕೇಂದ್ರ ಸರ್ಕಾರದ ಲಕೋಟೆಯ ಮೇಲೆ ಕಿನ್ನಾಳ ಕಲೆಯ ಆಯ್ದ ಚಿತ್ರಗಳನ್ನು ಬಿಂಬಿಸಿ, ಅದರ ಮಹತ್ವದ ಸಾರುವ ಬರಹವನ್ನು ಮುದ್ರಿಸಲಾಗುತ್ತದೆ.

ಈಗಾಗಲೇ ಅಧಿಕೃತವಾಗಿ ಲಕೋಟೆ ಬಿಡುಗಡೆ ಕಾರ್ಯಕ್ರಮವನ್ನು ಕಿನ್ನಾಳ ಗ್ರಾಮದಲ್ಲಿಯೇ ಆ. 30ರಂದು ಹಮ್ಮಿಕೊಂಡಿದ್ದು, ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ಪರಣ್ಣ ಮುನವಳ್ಳಿ, ಗದಗ-ಕೊಪ್ಪಳ ಜಿಲ್ಲಾ ಅಂಚೆ ಇಲಾಖೆಯ ಅಧೀಕ್ಷಕ ಚಿದಾನಂದ ಪದ್ಮಸಾಲಿ ಅವರು ಭಾಗವಹಿಸುವರು.

ಕಿನ್ನಾಳ ಎಂಬ ಚೆಂದದ ಕುಸುರಿ ಕಲೆ: ಕುಟುಂಬಕ್ಕೆ ಕಡಿಮೆಯಾಗದಿರಲಿ ಬೆಲೆ

ಮತ್ತಷ್ಟು ವಿಸ್ತರಣೆ

ಪ್ರಾರಂಭದಲ್ಲಿ ಅಂಚೆ ಲಕೋಟೆಯಲ್ಲಿ ಕಿನ್ನಾಳ ಕಲೆ ರಾರಾಜಿಸಲಿದ್ದು, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿಯೂ ಇದರ ಸೊಬಗು ಅನಾವರಣಗೊಳಿಸುವ ಫೋಟೋಗಳನ್ನು ಹಾಕುವ ಯೋಜನೆಯೂ ಇದೆ. ಆದರೆ, ಇದು ಇನ್ನಷ್ಟುದಿನಗಳ ಬಳಿಕ ಜಾರಿಯಾಗಲಿದೆ ಎನ್ನಲಾಗುತ್ತಿದೆ. ಈ ಮೂಲಕ ಕಿನ್ನಾಳ ಕಲೆ ಕೇಂದ್ರ ಸರ್ಕಾರ ಬಹುದೊಡ್ಡ ಗೌರವವನ್ನು ನೀಡಿ, ಅದನ್ನು ವಿಶ್ವವ್ಯಾಪಿ ಮಾಡುವ ಯತ್ನ ಮಾಡಲಾಗುತ್ತಿದೆ.

ಇತಿಹಾಸ

ಕಿನ್ನಾಳ ಕಲೆಯದ್ದು ದೊಡ್ಡ ಇತಿಹಾಸವೇ ಇದೆ. ನಾಗರಿಕತೆ ಬೆಳೆಯುವ ಮುನ್ನವೇ ಈ ಕಲೆ ಬೆಳದಿದೆ ಎಂದು ಹೇಳಲಾಗುತ್ತಿದೆ. ವಿಶ್ವಕ್ಕೆ ಬಣ್ಣ ಪರಿಚಯ ಅಷ್ಟಕಷ್ಟೆಇದ್ದ ಕಾಲದಲ್ಲಿಯೇ ಇದು ರಾರಾಜಿಸಿದೆ. ಇದರ ಇತಿಹಾಸ ಸುಮಾರು ಸಾವಿರಾರು ವರ್ಷಗಳಷ್ಟುಹಳೆಯದಾಗಿದ್ದರೂ ಇದಕ್ಕೊಂದು ಅಧಿಕೃತ ಮುದ್ರೆ ಸಿಕ್ಕಿದ್ದು ಮಾತ್ರ ವಿಜಯನಗರ ಕಾಲದಲ್ಲಿ. ವಿಜಯನಗರ ಕಾಲದಲ್ಲಿ ಕಿನ್ನಾಳ ಕಲೆಯನ್ನು ಚಿತ್ರಗಾರರ ಕಲೆ ಎಂದು ಕರೆಯಲಾಗುತ್ತಿತ್ತು ಮತ್ತು ಇದಕ್ಕೆ ರಾಜಾಶ್ರಯ ಲಭಿಸಿತ್ತು. ಆದರೆ, ವಿಜಯನಗರ ಸಾಮ್ರಾಜ್ಯ ಅವನತಿಯಾದಾಗ ಚಿತ್ರಗಾರರ ಕುಟುಂಬಗಳು ಚದುರಿ ಹೋದವು. ಆಗ ಅದರಲ್ಲಿ ಕೆಲವರು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಿನಿಂದ ಇದು ಕಿನ್ನಾಳ ಕಲೆ ಎಂದು ಪ್ರಸಿದ್ಧಿಯಾಯಿತು.

ಸಾಗರದಾಚೆಯೂ ಇದು ಪಸರಿಸಿದೆ. ನಾನಾ ದೇಶದವರು ಕಿನ್ನಾಳ ಕಲೆಯ ತರಬೇತಿ ಪಡೆಯಲು ಈಗಲೂ ಬರುತ್ತಿದ್ದಾರೆ ಎನ್ನುವುದು ಅದರ ಮಹತ್ವವನ್ನು ಸಾರುತ್ತದೆ.

ನಮ್ಮೂರ ಕಲೆ ಈಗ ದೇಶವ್ಯಾಪಿ ಪ್ರಜ್ವಲಿಸಲಿದೆ. ದೇಶದ ಅಂಚೆ ಲಕೋಟೆಯ ಮೇಲೆ ಕಿನ್ನಾಳ ಕಲೆ ಅನಾವರಣವಾಗಲಿದೆ. ಅದರ ಮಹತ್ವದ ಬರಹವೂ ಇರಲಿದೆ ಎನ್ನುವುದು ನಮ್ಮ ಹೆಮ್ಮೆ ಎಂದು ಕಿನ್ನಾಳ ಗ್ರಾಪಂ ಸದಸ್ಯ ಅಶೋಕಪ್ಪ ತಿಳಿಸಿದ್ದಾರೆ. 

ಕಿನ್ನಾಳ ಕಲೆ ಅಂಚೆ ಲಕೋಟೆ ಆ. 31ರಂದು ಬಿಡುಗಡೆಯಾಗಲಿದೆ. ದೇಶದಾದ್ಯಂತ ಇನ್ನು ಮುಂದೆ ಅಂಚೆ ಇಲಾಖೆಯ ಲಕೋಟೆಯ ಮೇಲೆ ಕಿನ್ನಾಳ ಕಲೆಯ ಚಿತ್ರ ಮುದ್ರಿತವಾಗುತ್ತದೆ ಎಂದು ಕಿನ್ನಾಳ ಅಂಚೆ ಇಲಾಖೆ ಸಬ್‌ ಪೋಸ್ಟ್‌ ಮಾಸ್ಟರ್‌ ಜಿ.ಎನ್‌. ಹಳ್ಳಿ ಹೇಳಿದ್ದಾರೆ.  
 

click me!