
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಉಂಟಾದ ವಿವಾದ ಇದೀಗ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಮತ್ತು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗದ ನಡುವೆ ನೇರ ಪೈಪೋಟಿಯ ರೂಪ ಪಡೆದಿದೆ. ಇಬ್ಬರ ನಡುವೆ ನಡೆದಿರುವ “ಲೆಟರ್ ವಾರ್” ಈಗ ರಾಜ್ಯದ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಯಲಬುರ್ಗಾ ಕ್ಷೇತ್ರದ ಶಾಸಕರೂ ಆಗಿರುವ ಹಾಗೂ ಸಿಎಂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ್ ರಾಯರೆಡ್ಡಿ ಅವರು ಇತ್ತೀಚೆಗೆ ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.ಈ ಪತ್ರದಲ್ಲಿ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲವು ಅಧಿಕಾರಿಗಳು ಮರಳು ದಂಧೆಗೆ ನೇರ ಅಥವಾ ಪರೋಕ್ಷವಾಗಿ ಸಾಥ್ ನೀಡುತ್ತಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ರಾಯರೆಡ್ಡಿ ಅವರ ಪ್ರಕಾರ, ತುಂಗಭದ್ರಾ ನದಿಯಿಂದ ಸುಮಾರು 85 ಕಿಲೋಮೀಟರ್ ದೂರದ ಪ್ರದೇಶಗಳಲ್ಲಿ ಪ್ರತಿದಿನ 100 ರಿಂದ 150 ಟ್ರಕ್ ಮರಳು ಮತ್ತು ಜಲ್ಲಿಕಲ್ಲು ಅಕ್ರಮವಾಗಿ ಸಾಗಾಟವಾಗುತ್ತಿದೆ. ಸುಮಾರು 200 ಕ್ಕೂ ಹೆಚ್ಚು ಜನರು ಈ ಅಕ್ರಮದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಅಕ್ರಮವನ್ನು ನಿಯಂತ್ರಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ ದಂಧೆಗೆ ಬೆನ್ನೆಲುಬಾಗಿದ್ದಾರೆ ಎಂದು ರಾಯರೆಡ್ಡಿ ಆರೋಪಿಸಿದ್ದಾರೆ. ಅವರು ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ, ಭೂ ವಿಜ್ಞಾನಿ ನವೀನಕುಮಾರ ಹಾಗೂ ಇತರ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿದ್ದು, ಈ ಅಧಿಕಾರಿಗಳು ಅಕ್ರಮ ಜಾಲದ ಪ್ರಮುಖ ಕಿಂಗ್‌ಪಿನ್‌ಗಳೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ಇಲಾಖೆಯ ಕೆಲ ಅಧಿಕಾರಿಗಳು 12–13 ವರ್ಷಗಳಿಂದ ಇದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರಿಂದ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯ 10ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಅವರನ್ನು ತಕ್ಷಣ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆ ಇಟ್ಟಿದ್ದಾರೆ.
ರಾಯರೆಡ್ಡಿಯವರ ಈ ಪತ್ರದ ನಂತರ, ಅಧಿಕಾರಿಗಳ ವರ್ಗದ ಹೆಸರಿನಲ್ಲಿ ಯಾವುದೇ ಸಹಿ ಇಲ್ಲದ ಒಂದು ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ ಅಧಿಕಾರಿಗಳು ಸಿಎಂ ಆರ್ಥಿಕ ಸಲಹೆಗಾರರಿಗೆ ನೇರವಾಗಿ 20 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪತ್ರದಲ್ಲಿ ರಾಯರೆಡ್ಡಿಯವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ತಮ್ಮ ಹಾಗೂ ತಮ್ಮ ಬೆಂಬಲಿಗರ ಕಾಮಗಾರಿಗಳಿಗೆ ಅಧಿಕಾರಿಗಳು ಅಕ್ರಮಕ್ಕೆ ಸಹಕಾರ ನೀಡದೆ ಇರುವುದು ಅವರ ಅಸಮಾಧಾನದ ಮೂಲ ಎಂದು ಪತ್ರದ ಅಂಶಗಳು ಸೂಚಿಸುತ್ತವೆ.
ರಾಯರೆಡ್ಡಿಯವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಮಾಡಿದ ಆರೋಪಗಳು ಹಾಗೂ ಅದಕ್ಕೆ ಅಧಿಕಾರಿಗಳ ವರ್ಗದಿಂದ ಬಂದ ಕೌಂಟರ್ ಲೆಟರ್ ಎರಡೂ ಇದೀಗ ಕೊಪ್ಪಳ ಜಿಲ್ಲೆಯ ರಾಜಕೀಯ ವಾತಾವರಣದ ಕಾವು ಹೆಚ್ಚಿಸಿದೆ. ಆಡಳಿತ ವ್ಯವಸ್ಥೆಯ ಒಳಗೇ ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ನಡುವಿನ ಈ ರೀತಿಯ ಪತ್ರ ಯುದ್ಧ ರಾಜ್ಯದಲ್ಲಿ ಅಪರೂಪವಾದದ್ದು. ಅಕ್ರಮ ಮರಳು ಗಣಿಗಾರಿಕೆ ಕುರಿತ ಈ ವಿವಾದಕ್ಕೆ ಶೀಘ್ರದಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಮುಂದಿನ ಹಂತದಲ್ಲಿ ಗಮನ ಸೆಳೆಯಲಿದೆ.