
ಶಿವಮೊಗ್ಗ (ಅ.20): ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ಶೇ. 80ರಷ್ಟು ಪೂರ್ಣಗೊಂಡಿದೆ. ಅದರಲ್ಲಿಯೂ ಯಾರು ಜಾತಿಗಣತಿಯನ್ನು ವಿರೋಧ ಮಾಡಿದ ಬಿಜೆಪಿ ನಾಯಕರ ಜಿಲ್ಲೆ ಹಾಗೂ ಕ್ಷೇತ್ರದಲ್ಲಿಯೇ ಶೇ.91ಕ್ಕಿಂತ ಅಧಿಕ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಮೀಕ್ಷೆ ಬಹಳ ಚೆನ್ನಾಗಿ ನಡೆದಿದೆ. ಬೆಂಗಳೂರಿನ ಜನರು ಇನ್ನಷ್ಟು ಸರಿಯಾಗಿ ಸ್ಪಂದಿಸಬೇಕಿದೆ. ಆದರೆ, ಬೆಂಗಳೂರಿನ ಹೊರತಾದ ಜಿಲ್ಲೆಗಳಲ್ಲಿ ಸಮೀಕ್ಷೆಯು ಯಶಸ್ವಿಯಾಗಿ ಮುಗಿದಿದೆ. ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 91.29 ರಷ್ಟು ಸಮೀಕ್ಷೆ ಅಧಿಕೃತವಾಗಿ ಮುಗಿದಿದೆ. ಎಲ್ಲಾ ಜಿಲ್ಲೆಗಳಲ್ಲಿ ನಿಗದಿತ ಅವಧಿಯೊಳಗೆ ಶೇ. 90ರಷ್ಟು ಗಣತಿ ಮುಗಿಸಬೇಕು ಎಂದು ಸಂಪುಟದಲ್ಲಿ ಆದೇಶ ನೀಡಲಾಗಿತ್ತು. ಆ ಗುರಿ ಬಹುತೇಕ ಈಡೇರಿದೆ ಎಂದು ಹೇಳಿದರು.
ಈ ಸಮೀಕ್ಷೆ ಕೇವಲ ಜಾತಿ ಗಣತಿ ಅಲ್ಲ, ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶವನ್ನೂ ಹೊಂದಿದೆ. ಕಳೆದ ಬಾರಿಗಿಂತಲೂ ಈ ಬಾರಿ ಸಮೀಕ್ಷೆಯ ಗಣತಿ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ, ಯಾರು ಯಾರೂ ಈ ಸಮೀಕ್ಷೆಗೆ ವಿರೋಧ ಮಾಡಿದ್ದರೋ, ಅವರ ಕ್ಷೇತ್ರಗಳಲ್ಲಿಯೇ ಸಮೀಕ್ಷೆ ಪ್ರಮಾಣ ಹೆಚ್ಚಾಗಿರುವುದು ಗಮನಾರ್ಹ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ಸಮೀಕ್ಷೆ ವಿರೋಧಿಸಿದ್ದರು. ಆದರೆ, ಅವರ ಕ್ಷೇತ್ರವಾದ ಶಿಕಾರಿಪುರದಲ್ಲೇ ಶೇ. 91 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ' ಎಂದು ಹೇಳಿದರು.
ಮಕ್ಕಳ ಶಿಕ್ಷಣದ ಮಹತ್ವದ ದೃಷ್ಟಿಯಿಂದ, ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕರನ್ನು ಪುನಃ ಗಣತಿ ಕಾರ್ಯಕ್ಕೆ ಬಳಸಿಕೊಳ್ಳುವುದಿಲ್ಲ. ಮಕ್ಕಳ ಶಿಕ್ಷಣವು ಅಷ್ಟೇ ಮುಖ್ಯ. ಶಾಲೆಗಳು ಪುನರಾರಂಭಗೊಳ್ಳುವ ದೃಷ್ಟಿಯಿಂದ ಶಿಕ್ಷಕರನ್ನು ಗಣತಿಗೆ ನೇಮಿಸುವುದಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಇನ್ನು ಸಂಸದ ರಾಘವೇಂದ್ರ ಅವರಿಗೆ ಕೇವಲ ವಿರೋಧ ಮಾಡುವುದಷ್ಟೇ ಗೊತ್ತು. ಅವರೇ ಅವರ ಕ್ಷೇತ್ರದಲ್ಲಿ ಟೋಲ್ ಹಾಕಲು ಪರ್ಮಿಷನ್ ಕೊಟ್ಟಿದ್ದರು. ಆದರೆ, ಈಗ ಅವರೇ ಅದನ್ನು ವಿರೋಧ ಮಾಡುತ್ತಿದ್ದಾರೆ.