'ಇಡಿ ದಾಳಿ ಸುಮ್ಮನೆ ನಡೆಯಲ್ಲ': ಸತೀಶ್ ಜಾರಕಿಹೊಳಿ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ?

Published : Sep 12, 2026, 06:27 PM IST
Janardhana Reddy

ಸಾರಾಂಶ

ಗಂಗಾವತಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲಿನ ಇಡಿ ದಾಳಿ ಸಮಂಜಸವಾಗಿದ್ದು, ಅದು ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದ್ದಾರೆ. ಸೂಕ್ತ ದಾಖಲೆಗಳು ಮತ್ತು ಆಧಾರಗಳಿದ್ದರೆ ಮಾತ್ರ ಇಡಿ ದಾಳಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಗಂಗಾವತಿ (ಸೆ.12): ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿ ಸಮಂಜಸವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ನಗರಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಯಾವುದೇ ಕಾರಣವಿಲ್ಲದೆ ದಾಳಿ ನಡೆಸುವುದಿಲ್ಲ. ಸೂಕ್ತ ದಾಖಲೆಗಳು ಹಾಗೂ ಆಧಾರಗಳಿದ್ದರೆ ಮಾತ್ರ ದಾಳಿ ನಡೆಸಲಾಗುತ್ತದೆ.

ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಆಧಾರಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು.

‘ನಮ್ಮ ಮೇಲಿನ ದಾಳಿಯೂ ರಾಜಕೀಯ ಪ್ರೇರಿತ ಎಂದರ್ಥ’

ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದಾದರೆ, ಈ ಹಿಂದೆ ತಮ್ಮ ಮೇಲಾದ ಇಡಿ ದಾಳಿಯೂ ರಾಜಕೀಯ ಪ್ರೇರಿತ ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಜನಾರ್ದನ ರೆಡ್ಡಿ ವ್ಯಂಗ್ಯವಾಡಿದರು.

ಇಡಿ ದಾಳಿ ನಡೆದಿದೆ ಎಂದರೆ ಅಕ್ರಮ ಅಥವಾ ಅವ್ಯವಹಾರದ ಕುರಿತು ತನಿಖೆಯ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ಇನ್ನೂ ನಾಲ್ಕೈದು ಸಚಿವರ ಮೇಲೆ ಇಡಿ ದಾಳಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಾದರೆ ಆ ಸಚಿವರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ ಎಂಬುದನ್ನು ಮುಖ್ಯಮಂತ್ರಿಯವರೇ ಒಪ್ಪಿಕೊಂಡಂತಾಗುತ್ತದೆ ಎಂದು ಟೀಕಿಸಿದರು.

‘ಒಂದು ಕೋಟಿ ಪಡೆದು ಡಿವೈಎಸ್ಪಿ ಪೋಸ್ಟಿಂಗ್’ ಆರೋಪ

ಪೊಲೀಸ್ ಅಧಿಕಾರಿಗಳ ಪೋಸ್ಟಿಂಗ್‌ನಲ್ಲಿ ಸಚಿವ ಶಿವರಾಜ ತಂಗಡಗಿ ಅವರು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆರೋಪದ ಬಗ್ಗೆಯೂ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದರು. ತಮ್ಮದೇ ಪಕ್ಷದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಒಂದು ಕೋಟಿ ರೂಪಾಯಿ ಪಡೆದು ಡಿವೈಎಸ್ಪಿ ಹುದ್ದೆಗೆ ಪೋಸ್ಟಿಂಗ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇಂತಹ ಆರೋಪವನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ಹೇಳಿದರು. ಆರೋಪ ಗಂಭೀರವಾಗಿರುವುದರಿಂದ ಸಚಿವ ಶಿವರಾಜ ತಂಗಡಗಿ ಅವರು ಪ್ರಕರಣವನ್ನು ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ವಹಿಸಬೇಕಿತ್ತು. ಆದರೆ ತನಿಖೆಗೆ ಒಪ್ಪಿಸುವ ಬದಲು ‘ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ’ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಜನಾರ್ದನ ರೆಡ್ಡಿ ಟೀಕಿಸಿದರು.

‘ಆರೋಪ ಸತ್ಯವೋ, ಸುಳ್ಳೋ ತನಿಖೆಯಿಂದ ಬಹಿರಂಗವಾಗಲಿ’

ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯವೋ ಅಥವಾ ಸುಳ್ಳೋ ಎಂಬುದು ತನಿಖೆಯಿಂದಲೇ ಬಹಿರಂಗವಾಗಬೇಕು ಎಂದು ಜನಾರ್ದನ ರೆಡ್ಡಿ ಹೇಳಿದರು. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ತಾವೇ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಅವರು ತಿಳಿಸಿದರು. ಆರೋಪಗಳಿಗೆ ಸೂಕ್ತ ತನಿಖೆ ನಡೆದರೆ ವಾಸ್ತವಾಂಶ ಏನೆಂಬುದು ಹೊರಬರಲಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.

PREV
Read more Articles on
click me!

Recommended Stories

ED Raid: ಪ್ರಧಾನಿ ಮೋದಿ ಹೇಳಿದ್ದನ್ನೇ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ; ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ಹೇಳಿಕೆ!
ಬೆಂಗಳೂರು ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ