40 ಸಾವಿರ ಲಂಚ ಸ್ವೀಕರಿಸುವ ವೇಳೆ ಇಬ್ಬರು ಲೋಕಾಯುಕ್ತ ಬಲೆಗೆ: ಪೆಟ್ರೋಲ್ ಬಂಕ್ ಬಳಿ ಏನಾಯ್ತು?

Published : Oct 06, 2026, 05:44 PM IST
Gangavathi Lokayukta

ಸಾರಾಂಶ

ಗಂಗಾವತಿಯಲ್ಲಿ ಜಮೀನಿನ ಉತಾರಕ್ಕೆ ₹40 ಸಾವಿರ ಲಂಚ ಪಡೆಯುತ್ತಿದ್ದ VA ಹಾಗೂ ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆನೆಗೊಂದಿಯ ಪೆಟ್ರೋಲ್ ಬಂಕ್ ಬಳಿ ಲಂಚದ ಹಣ ಸ್ವೀಕರಿಸುವ ವೇಳೆ ದಾಳಿ ನಡೆದಿದೆ.

ಗಂಗಾವತಿ (ಅ.06): ಜಮೀನಿನ ಉತಾರ ಮಾಡಿಕೊಡಲು ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಆಡಳಿತಾಧಿಕಾರಿ (VA) ಹಾಗೂ ಗ್ರಾಮ ಸಹಾಯಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗಂಗಾವತಿ ತಾಲೂಕಿನ ಅಂಜನಹಳ್ಳಿ ಗ್ರಾಮದ ಈಶ್ವರ ಶ್ರೀರಾಮು ಎಂಬುವವರು ವಿಲ್ ಮೂಲಕ ತಮ್ಮ ಹೆಸರಿಗೆ ಬಂದಿದ್ದ ಜಮೀನಿನ ಉತಾರವನ್ನು ಮಾಡಿಸಿಕೊಳ್ಳಲು ಗಂಗಾವತಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ್, ತಂದೆ ಬಂಡಿ ಅಂಜನೇಯ ಎಂಬುವವರು ಸೇರಿ ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಈಶ್ವರ ಶ್ರೀರಾಮು ಅವರು ಅಕ್ಟೋಬರ್ 5ರಂದು ಕೊಪ್ಪಳ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ಬಲೆಗೆ ಬೀಳಿಸಲು ಕಾರ್ಯಾಚರಣೆ ರೂಪಿಸಿದ್ದರು.

ಅದರಂತೆ ಅಕ್ಟೋಬರ್ 6ರಂದು ಮಧ್ಯಾಹ್ನ ಸುಮಾರು 12.40ರ ವೇಳೆಗೆ ಆನೆಗೊಂದಿಯ ಪೆಟ್ರೋಲ್ ಬಂಕ್ ಬಳಿ ₹40 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ್ ಇಬ್ಬರೂ ಸಿಕ್ಕಿಬಿದ್ದಿದ್ದು, ಲಂಚದ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಲೋಕಾಯುಕ್ತ ತಂಡದಿಂದ ಕಾರ್ಯಾಚರಣೆ

ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ವಿಜಯ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸುನೀಲ್ ಮೇಗಲಮನಿ ಹಾಗೂ ಶೈಲಾ ಎಸ್. ಪ್ರಾಟೀಕರ್ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜಮೀನಿನ ಉತಾರ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಪಾಸ್‌ಪೋರ್ಟ್ ಅರ್ಜಿದಾರರೇ ಗಮನಿಸಿ: ಮಾರತಹಳ್ಳಿ ಪಾಸ್‌ಪೋರ್ಟ್ ಸೇವಾ ಕೇಂದ್ರ ವೈಟ್‌ಫೀಲ್ಡ್‌ಗೆ ಶಿಫ್ಟ್‌
ನೈಸ್ ವಿವಾದ: ಧೈರ್ಯವಿದ್ದರೆ ಜೇನುಕಲ್ ಸಿದ್ದೇಶ್ವರನ ಮುಂದೆ ನಿಂತು ಸತ್ಯ ಹೇಳಲಿ!: ರೇವಣ್ಣ ಸವಾಲ್