
ಬೆಂಗಳೂರು (ನ.22) : ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್‌ನ ಪ್ರತಿಭಾನ್ವಿತ ವರದಿಗಾರ್ತಿ ಹಾಗೂ ನಿರೂಪಕಿ ರೋಜಾ ಮನು ಪಾಟೀಲ್‌ಗೆ ಪ್ರತಿಷ್ಠಿತ 'ಕರ್ನಾಟಕ ರಾಜ್ಯ ಎಕ್ಸಲೆನ್ಸ್ 2026' (Karnataka State Excellence Award 2026) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸ್ವರ್ಣ ಭಾರತ ಫೌಂಡೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ರೋಜಾ ಮನು ಪಾಟೀಲ್ ಅವರು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಗುರುತಿಸಿ 'ಎಕ್ಸಲೆನ್ಸ್ ಇನ್ ಫಿಲಂ ಜರ್ನಲಿಸಂ, ರಿಪೋರ್ಟಿಂಗ್ ಹಾಗೂ ಆ್ಯಂಕರಿಂಗ್ (Excellence in Film Journalism, Reporting & Anchoring) ವಿಭಾಗದಲ್ಲಿ ಈ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ರೋಜಾ ಮನು ಪಾಟೀಲ್ ಅವರು ಸುವರ್ಣ ನ್ಯೂಸ್ ಡಿಜಿಟಲ್‌ನಲ್ಲಿ ತಮ್ಮ ವಿಭಿನ್ನ ನಿರೂಪಣೆ ಮತ್ತು ವರದಿಗಾರಿಕೆಯ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ಲೋಕದ ಹಲವು ಖ್ಯಾತ ಸೆಲೆಬ್ರಿಟಿಗಳ ವಿಶೇಷ ಸಂದರ್ಶನಗಳನ್ನು ನಡೆಸಿರುವ ಇವರು, ತೆರೆಯ ಮೇಲಿನ ತಾರೆಯರ ಯಶಸ್ಸಿನ ಹಾದಿಯ ಜೊತೆಗೆ ಅವರ ಕಠಿಣ ಪರಿಶ್ರಮ ಹಾಗೂ ತೆರೆ ಹಿಂದಿನ ನೋವಿನ ಕತೆಗಳನ್ನು ಅತ್ಯಂತ ಆಪ್ತವಾಗಿ ವೀಕ್ಷಕರ ಮುಂದೆ ಅನಾವರಣಗೊಳಿಸಿದ್ದಾರೆ.ಅಷ್ಟೇ ಅಲ್ಲದೆ, ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದ ಎಲೆಮರೆಯ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರ ಈ ಸಾಧನೆಗೆ ಸುವರ್ಣ ನ್ಯೂಸ್ ಬಳಗ ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರೋಜಾ ಮನು ಪಾಟೀಲ್, ಸಂತಸ ಹಂಚಿಕೊಂಡಿದ್ದಾರೆ. ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ ಎಂದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ವರದಿಗಾರಿಕೆ ಹಾಗೂ ನಿರೂಪಣೆ ಮಾಡಲು ಸ್ಫೂರ್ತಿ ನೀಡಿದೆ . ತಮ್ಮ ವೃತ್ತಿಪರ ಸಾಧನೆಯನ್ನು ಗುರುತಿಸಿ ಗೌರವಿಸಿದ ಸ್ವರ್ಣ ಭಾರತ ಫೌಂಡೇಶನ್ ಸಂಸ್ಥೆಗೂ, ಆರಂಭದಿಂದಲೂ ತಮ್ಮ ಕಾರ್ಯಕ್ರಮಗಳನ್ನು ಮೆಚ್ಚಿ ಬೆಂಬಲಿಸುತ್ತಾ ಬಂದಿರುವ ಸಮಸ್ತ ವೀಕ್ಷಕರಿಗೂ ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.