
ಗಂಗಾವತಿ (ಸೆ.20): ಗಣೇಶ ಮೂರ್ತಿಯ ಮುಂದೆ ಹಚ್ಚಿದ್ದ ದೀಪವನ್ನು ಕಾಯುತ್ತಿದ್ದ 13 ವರ್ಷದ ಬಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಆರೋಪದ ಘಟನೆ ಗಂಗಾವತಿ ನಗರದ ಮುಜಾವರ ಕ್ಯಾಂಪಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮುಜಾವರ ಕ್ಯಾಂಪಿನ ಮಹ್ಮದ್ ರಿಯಾಜ್ ರಫೀಕ್ ಸಾಬ್ (13) ತೀವ್ರವಾಗಿ ಗಾಯಗೊಂಡಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ (20) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?
ಮುಜಾವರ ಕ್ಯಾಂಪಿನಲ್ಲಿ ಯುವಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಗಣೇಶನ ಮುಂದೆ ಹಚ್ಚಿದ್ದ ದೀಪವನ್ನು ಕಾಯಲು ಅದೇ ಕ್ಯಾಂಪಿನ ಮಹ್ಮದ್ ರಿಯಾಜ್‌ನನ್ನು ನೇಮಿಸಲಾಗಿತ್ತು ಎನ್ನಲಾಗಿದೆ. ಈ ವೇಳೆ ಹಮಾಲರ ಕಾಲೋನಿಯ ಸಂತೋಷ ಎಂಬ ಯುವಕ ಬಾಲಕನ ಮೇಲೆ ಪೆಟ್ರೋಲ್ ಸುರಿದು, ಊದಿನಕಡ್ಡಿಯಿಂದ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಪರಿಣಾಮ ಬಾಲಕನಿಗೆ ತೀವ್ರ ಗಾಯಗಳಾಗಿವೆ. ಘಟನೆ ಬಳಿಕ ಗಾಯಗೊಂಡ ರಿಯಾಜ್‌ನನ್ನು ತಕ್ಷಣ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ಕೃತ್ಯಕ್ಕೆ ನಿಖರ ಕಾರಣವೇನು ಎಂಬುದು ಸದ್ಯ ತಿಳಿದುಬಂದಿಲ್ಲ.
ಯುವಕನ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ. ಪೊಲೀಸರು ಸಂತೋಷನನ್ನು ಬಂಧಿಸಿ, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಘಟನೆ ನಡೆದ ಬಳಿಕ ಮುಜಾವರ ಕ್ಯಾಂಪಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಅದೇ ಮಧ್ಯರಾತ್ರಿ ವಿಸರ್ಜನೆ ಮಾಡಲಾಗಿದೆ. ಸದ್ಯ ಗಂಗಾವತಿ ನಗರದಲ್ಲಿ ಈ ಬಾರಿ 150ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಈಗಾಗಲೇ 60ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ ನಡೆದಿದೆ. ಮುಜಾವರ ಕ್ಯಾಂಪ್ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.