'ಹೀಗೆ ಹೇಳೋರು ಮೊದಲೇ ದೂರ ಇರಬೇಕಿತ್ತು' ಸಿದ್ದರಾಮಯ್ಯಗೆ ಆಪ್ತ ಮಹದೇವಪ್ಪ ಟಾಂಗ್, ಹಳಸಿತಾ ಗೆಳೆತನಾ?

Published : Sep 20, 2026, 08:06 PM IST
hc mahadevappa and siddaramaiah

ಸಾರಾಂಶ

ಚುನಾವಣಾ ವ್ಯವಸ್ಥೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಹೆಚ್‌ಸಿ ಮಹದೇವಪ್ಪ ತಿರುಗೇಟು ನೀಡಿರುವ ಅವರು, ಸೈದ್ಧಾಂತಿಕತೆ ವಿಚಾರದಲ್ಲಿ ಅಧಿಕಾರ ತಮಗೆ ಮುಖ್ಯವಲ್ಲ ಎಂದಿದ್ದಾರೆ. ಇದರಿಂದ ಇಬ್ಬರು ಆಪ್ತರ ನಡುವಿನ ಸ್ನೇಹ ಹಳಸಿದೆಯೇ ಎಂಬ ಪ್ರಶ್ನೆ ಮೂಡಿದೆ.

ದಾವಣಗೆರೆ: ಮಾಜಿ ಸಚಿವ ಹೆಚ್‌ಸಿ ಮಹದೇವಪ್ಪ ಅವರು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯರ ಅತ್ಯಾಪ್ತರಲ್ಲಿ ಒಬ್ಬರು. ಡಿಕೆ ಶಿವಕುಮಾರ್ ಕ್ಯಾಬಿನೆಟ್‌ನಲ್ಲಿ ‍ಮಂತ್ರಿಗಿರಿ ಸಿಗದಿದ್ದಕ್ಕೆ ಸಿದ್ದರಾಮಯ್ಯರ ಮೇಲೆ ಮಹದೇವಪ್ಪ ಮುನಿಸಿಕೊಂಡಿದ್ದಾರೆ ಎಂಬ ಚರ್ಚೆ ರಾಜಕೀಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮಹದೇವಪ್ಪ ಅವರು ಪೋರಕ್ಷವಾಗಿ ಟಾಂಗ್ ನೀಡಿದ್ದಾರೆ. ಬೆನ್ನಲ್ಲೇ ಇಬ್ಬರ ನಡುವಿನ ಸ್ನೇಹ ಹಳಸಿತಾ ಎಂಬ ಪ್ರಶ್ನೆ ಎದ್ದಿದೆ.

ದಾವಣಗೆರೆಯಲ್ಲಿ ಹೆಚ್‌ಸಿ ಮಹದೇವಪ್ಪ ಅವರಿಗೆ ಮಾಧ್ಯಮಗಳು ಎದುರಾದವು. ಈ ವೇಳೆ ಇತ್ತೀಚೆಗೆ ಸಿದ್ದರಾಮಯ್ಯ ಅವರು ಚುನಾವಣೆ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ. ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಅದಕ್ಕೆ ಉತ್ತರಿಸಿದ ಮಾಜಿ ಸಚಿವರು.. ಈ ಪ್ರಶ್ನೆಗೆ ಅವರ ಬಳಿಯೇ ಉತ್ತರ ಕೇಳಬೇಕು ಎಂದರು.

ಈಗಾಗಲೇ ನಾವು ಇಂತಹ ವ್ಯವಸ್ಥೆಯಲ್ಲಿ ಬಂದು ಬಿಟ್ಟಿದ್ದೇವೆ. ಹೀಗೆ ಹೇಳುವರು ಮೊದಲೇ ಚುನಾವಣೆ ವ್ಯವಸ್ಥೆಯಿಂದ ದೂರ ಇರಬೇಕಿತ್ತು ಎಂದು ಹೇಳುವ‌ ಮೂಲಕ ಟಾಂಗ್ ಕೊಟ್ಟಿದ್ದಾರೆ. ಸಂವಿಧಾನ ಜಾರಿ ಬಂದಾಗಲೇ‌ ಕೃಪಲಾನಿಯಂತವರು ಅಂಬೇಡ್ಕರ್‍‌ಗೆ ಪ್ರಶ್ನೆ ಮಾಡಿದ್ದರು. ಹಣ ಕೊಟ್ಟು ಮತ ಖರೀದಿಸುತ್ತೇವೆ ಎಂದಿದ್ದರು. ಇಂತಹ ಚಿಂತನೆಗಳು‌‌ ಮೊದಲಿನಿಂದಲೂ ನಡೆದುಕೊಂಡು ಬಂದಿವೆ. ಇದು ಸುಧಾರಣೆ ಆಗಬೇಕಿದ್ದರೆ, ಚುನಾವಣಾ ಆಯೋಗ ಮಹತ್ವದ ಹೆಜ್ಜೆ ಇಡಬೇಕು. ತನಿಖಾ ಸಂಸ್ಥೆಗಳು ರಾಜಕೀಯ ದಾಳವಾಗಿ ಬಳಕೆ ಆದ್ರೆ ಪ್ರಜಾಪ್ರಭುತ್ವ ಕತ್ತು ಹಿಚುಕಿದಂತಾಗುತ್ತದೆ ಎಂದರು.

‘ಸೈದ್ಧಾಂತಿಕ ಅಂತಾ ಬಂದಾಗ ಅಧಿಕಾರ ಎಂಬುದು ನನ್ನ ಚಪ್ಪಲಿ’

ಮುಂದುವರಿದು.. ಸೈದ್ಧಾಂತಿಕ ಅಂತಾ ಬಂದಾಗ ಅಧಿಕಾರ ಎಂಬುದು ನನ್ನ ಚಪ್ಪಲಿ ಎಂದು ಹೇಳಿದ್ದೇ ನಾನು.ನಾನು ಜೆಡಿಎಸ್‌ನಲ್ಲಿ ಇದ್ದಾಗ ಸಿದ್ದರಾಮಯ್ಯ ಅವರನ್ನ ಪಕ್ಷದಿಂದ ಹೊರ ಹಾಕಿದ್ದರು. ನಾನು ಹುಬ್ಬಳ್ಳಿಗೆ ಅಹಿಂದಾ ಸಮಾವೇಶಕ್ಕೆ ಹೋಗುತ್ತಿದ್ದೆ. ಒಬ್ಬರ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಹೇಳಿ ಕಳುಸಿದ್ದರು. ಮಹದೇವಪ್ಪ ಒಳ್ಳೆಯ ನಾಯಕ, ಅವರನ್ನ ಕರೆಯಿರಿ ಸಚಿವ ಸ್ಥಾನ ನೀಡುವೆ ಎಂದಿದ್ದರು. ಆಗ ನಾನು ಸೈದ್ಧಾಂತಿಕತೆ ಅಂತಾ ಬಂದಾಗ ಅಧಿಕಾರ ಎಂಬುದು ನನ್ನ ಚಪ್ಪಲಿ ಎಂದು ಹೇಳಿದ್ದೆ ಎಂದು ತಮ್ಮ ಹಳೆಯ ಘಟನೆಯನ್ನ ಮೆಲುಕು ಹಾಕಿದರು.

ನಮ್ಮ ಸಿದ್ಧಾಂತಕ್ಕೆ ನಾವು ಬದ್ಧರಾಗಿರಬೇಕು. ಅಂಬೇಡ್ಕರ್ ಅವರು ನಮಗೆ ಪ್ರಜಾಪ್ರಭುತ್ವ ಕೊಟ್ಟಿದ್ದು. ದೇಶಕ್ಕೆ ಪ್ರಜಾಪ್ರಭುತ್ವ ತಂದು ಕೊಟ್ಟಿದ್ದು ಡಾ. ಅಂಬೇಡ್ಕರ್. ಇಂತಹ ಪ್ರಜಾಪ್ರಭುತ್ವ ಯಶಸ್ವಿಯಾಗಲು ಎಸ್ಸಿ ಎಸ್ಟಿ, ಹತ್ತಾರು ಜಾತಿಗಳು, ಅಲ್ಪಸಂಖ್ಯಾತ ಹಿಂದುಳಿದವರು ಒಂದಾಗಬೇಕು ಎಂದು ಕರೆ ನೀಡಿದರು.

PREV
Read more Articles on
click me!

Recommended Stories

ಪ್ರಚೋದನೆ ಕೊಟ್ಟಿದ್ದು ಇನ್ಸ್‌ಪೆಕ್ಟರ್, ಗೃಹ ಸಚಿವರ ಒತ್ತಡದಿಂದ ನನ್ನ ಮೇಲೆ ಕ್ರಮ ಎಂದ ಪ್ರತಾಪ್ ಸಿಂಹ
ಕೃಷಿ ಮಾಡುತ್ತಿದ್ದ 39 ವರ್ಷದ ಯುವಕನಿಗೆ ಸಿಗದ ಕನ್ಯೆ?: ಮನನೊಂದು ವಿಷ ಸೇವಿಸಿ ಆತ್ಮ*ತ್ಯೆ!