ರೇಣುಕಾಸ್ವಾಮಿ ಕೇಸ್: ಕೋರ್ಟ್‌ನಲ್ಲಿ ಮತ್ತೊಬ್ಬ ಸಾಕ್ಷಿ ಕೂಡ ಯು-ಟರ್ನ್, ಪ್ರಕರಣದಲ್ಲಿ ಸಾಲು ಸಾಲು ಸಾಕ್ಷಿಗಳು ಉಲ್ಟಾ!

Published : Nov 24, 2026, 01:36 PM IST
actor darshan thoogudeepa

ಸಾರಾಂಶ

ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣ ಕೋರ್ಟ್‌ನಲ್ಲಿ ಸಾಕ್ಷಿ ಉಲ್ಟಾ ಹೊಡೆದಿದ್ದಾನೆ. ಶೆಡ್‌ನಲ್ಲಿ ಏನೂ ನೋಡಿಲ್ಲ ಎಂದಿದ್ದು, ಈ ಮೂಲಕ ಮತ್ತೊಬ್ಬ ಸಾಕ್ಷಿ ಪ್ರಕರಣದಲ್ಲಿ ತದ್ವಿರುದ್ಧ ಹೇಳಿಕೆ ನೀಡಿದಂತಾಗಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್‌ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬನಾದ ಪಟ್ಟಣಗೆರೆ ಶೆಡ್‌ನ ಕೆಲಸಗಾರ ಮಲ್ಲಿಕಾರ್ಜುನ ಎಂಬುವವರು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಉಲ್ಟಾ ಸಾಕ್ಷಿ ನುಡಿದಿದ್ದಾರೆ. ಇದರಿಂದಾಗಿ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ಕಾನೂನು ಹೋರಾಟದಲ್ಲಿ ಕೊಂಚ ನಿರಾಳತೆ ಸಿಕ್ಕಂತಾಗಿದೆ.

ನ್ಯಾಯಾಲಯದಲ್ಲಿ ನಡೆದಿದ್ದೇನು?

ಬೆಂಗಳೂರಿನ 59ನೇ ಸಿಸಿಹೆಚ್ (ಸೆಷನ್ಸ್) ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣದ ಸಾಕ್ಷಿಗಳ ವಿಚಾರಣೆ ಬಿರುಸಿನಿಂದ ಸಾಗುತ್ತಿದೆ. ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಶೆಡ್ ಕೆಲಸಗಾರ ಮಲ್ಲಿಕಾರ್ಜುನ ಅವರ ಸಾಕ್ಷ್ಯವನ್ನು ದಾಖಲಿಸಿಕೊಳ್ಳಲಾಯಿತು.

ತನಿಖೆಯ ಹಂತದಲ್ಲಿ ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ ಘಟನೆಯ ಕುರಿತು ಮಹತ್ವದ ಹೇಳಿಕೆ ನೀಡಿದ್ದ ಮಲ್ಲಿಕಾರ್ಜುನ, ಇಂದು ನ್ಯಾಯಾಧೀಶರ ಎದುರು ಸಂಪೂರ್ಣವಾಗಿ ಯು-ಟರ್ನ್ ಹೊಡೆದಿದ್ದಾನೆ. "ಶೆಡ್‌ನಲ್ಲಿ ಏನಾಯಿತು ಎಂಬುದನ್ನು ನಾನು ಕಣ್ಣಾರೆ ನೋಡಿಲ್ಲ" ಎಂದು ಹೇಳಿಕೆ ನೀಡುವ ಮೂಲಕ ಉಲ್ಟಾ ಸಾಕ್ಷಿ ನುಡಿದಿದ್ದಾನೆ.

ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಎಸ್‌ಪಿಪಿ ಮನವಿ

ಸಾಕ್ಷಿದಾರ ಮಲ್ಲಿಕಾರ್ಜುನ ತಮ್ಮ ಹಿಂದಿನ ಹೇಳಿಕೆಗೆ ತದ್ವಿರುದ್ಧವಾಗಿ ಸಾಕ್ಷ್ಯ ನುಡಿದ ತಕ್ಷಣ ಎಚ್ಚೆತ್ತುಕೊಂಡ ವಿಶೇಷ ಸಾರ್ವಜನಿಕ ಅಭಿಯೋಜಕರು (SPP), ಇವರನ್ನು 'ಭಾಗಶಃ ಪ್ರತಿಕೂಲ ಸಾಕ್ಷಿ' ಎಂದು ಘೋಷಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ, ಮಲ್ಲಿಕಾರ್ಜುನ ಅವರ ಪಾಟೀಸವಾಲನ್ನು ಮುಂದಿನ ಸೋಮವಾರ, ಅಂದರೆ ನವೆಂಬರ್ 30ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಾಲು ಸಾಲು ಸಾಕ್ಷಿಗಳ ಯು-ಟರ್ನ್

ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನಡೆದ ವಿಚಾರಣೆಗಳಲ್ಲೂ ಪ್ರಮುಖ ಸಾಕ್ಷಿದಾರರು ತಮ್ಮ ನಿಲುವು ಬದಲಿಸಿದ್ದರು.

ಪಟ್ಟಣಗೆರೆ ಶೆಡ್‌ನ ಸೆಕ್ಯುರಿಟಿ ಗಾರ್ಡ್ ಆಗಿದ್ದ ನರೇಂದ್ರ ಸಿಂಗ್, ತನಿಖೆ ವೇಳೆ ಆರೋಪಿಗಳನ್ನು ನೋಡಿರುವುದಾಗಿ ಹೇಳಿದ್ದರು. ಆದರೆ ಕೋರ್ಟ್ ವಿಚಾರಣೆ ವೇಳೆ ಉಲ್ಟಾ ಹೊಡೆದು ಪ್ರತಿಕೂಲ ಸಾಕ್ಷಿಯಾಗಿದ್ದಾನೆ. ಪ್ರಕರಣದ ಮತ್ತೊಬ್ಬ ಪ್ರಮುಖ ಸಾಕ್ಷಿ ಕಿರಣ್ ಕೂಡ ತಮ್ಮ ಹಿಂದಿನ ಹೇಳಿಕೆಗೆ ವ್ಯತಿರಿಕ್ತವಾಗಿ ಸಾಕ್ಷ್ಯ ನುಡಿದಿದ್ದಾನೆ.

ಇವರೆಲ್ಲರ ಪಾಟೀಸವಾಲು ಕೂಡ ನವೆಂಬರ್ 30ರಂದೇ ನಡೆಯಲಿದ್ದು, ಅಂದು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯುವ ನಿರೀಕ್ಷೆಯಿದೆ.

'ಪ್ರತಿಕೂಲ ಸಾಕ್ಷಿ' ಎಂದರೇನು?

ಕಾನೂನು ಪ್ರಕ್ರಿಯೆಯಲ್ಲಿ ತನಿಖಾಧಿಕಾರಿಗಳ ಮುಂದೆ ಒಂದು ಹೇಳಿಕೆ ನೀಡಿ, ನ್ಯಾಯಾಲಯದ ವಿಚಾರಣೆ ವೇಳೆ ಅದಕ್ಕೆ ವಿರುದ್ಧವಾಗಿ ಹೇಳಿಕೆ ನೀಡುವವರನ್ನು 'ಪ್ರತಿಕೂಲ ಸಾಕ್ಷಿ' ಎಂದು ಕರೆಯಲಾಗುತ್ತದೆ. ಹೀಗೆ ಸಾಕ್ಷಿಗಳು ಉಲ್ಟಾ ಹೊಡೆದಾಗ, ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಅನುಮತಿ ಪಡೆದು ಆ ಸಾಕ್ಷಿಯನ್ನೇ ಪಾಟೀಸವಾಲಿಗೆ ಒಳಪಡಿಸುತ್ತಾರೆ. "ತನಿಖೆ ವೇಳೆ ಒಂದು ಹೇಳಿಕೆ ನೀಡಿ, ಈಗ ಏಕೆ ಬದಲಾಯಿಸುತ್ತಿದ್ದೀರಿ? ಇದರ ಹಿಂದೆ ಯಾರದ್ದಾದರೂ ಒತ್ತಡ ಅಥವಾ ಆಮಿಷವಿದೆಯೇ?" ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ಸತ್ಯವನ್ನು ಹೊರತೆಗೆಯಲು ವಕೀಲರು ಪ್ರಯತ್ನಿಸುತ್ತಾರೆ. ಪ್ರಮುಖ ಸಾಕ್ಷಿಗಳೇ ಒಬ್ಬೊಬ್ಬರಾಗಿ ಉಲ್ಟಾ ಹೊಡೆಯುತ್ತಿರುವುದು ಪ್ರಾಸಿಕ್ಯೂಷನ್ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು, ನವೆಂಬರ್ 30ರಂದು ನಡೆಯಲಿರುವ ಪಾಟೀಸವಾಲಿನಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಆಂಧ್ರ, ತಮಿಳುನಾಡು ಬಿಟ್ಟು ಸ್ಯಾಟಲೈಟ್‌ ಉತ್ಪಾದನಾ ಕೇಂದ್ರಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ Pixxel
ಹೆಬ್ಬಾಳ-ಸರ್ಜಾಪುರ ಮೆಟ್ರೋ ಕೆಂಪು ಮಾರ್ಗ ಕಾಮಗಾರಿ ಮತ್ತೆ ವಿಳಂಬ, 2031ರ ಬದಲು 2033ಕ್ಕೆ ಓಪನ್ ಸಾಧ್ಯತೆ!