
ಗಂಗಾವತಿ (ಅ.14): ತುಂಗಭದ್ರಾ ನದಿಯಲ್ಲಿ ನೀರು ಕುಡಿಯಲು ತೆರಳಿದ್ದ ಕುರಿಗಾಹಿಯ ಮೇಲೆ ಮೊಸಳೆ ದಾಳಿ ನಡೆಸಿದ ಘಟನೆ ಗಂಗಾವತಿ ತಾಲೂಕಿನ ಕೊರಮ್ಮ ಕ್ಯಾಂಪ್ ಸಮೀಪ ಬುಧವಾರ ಬೆಳಿಗ್ಗೆ ನಡೆದಿದೆ. ಮೊಸಳೆಯ ದಾಳಿಯಿಂದ ಕುರಿಗಾಹಿಯ ಕಾಲಿಗೆ ತೀವ್ರ ಗಾಯವಾಗಿದ್ದು, ಕೊಪ್ಪಳದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡ ಕುರಿಗಾಹಿಯನ್ನು ಕನಕಗಿರಿ ತಾಲೂಕಿನ ರಾಮದುರ್ಗ ಗ್ರಾಮದ ಚಂದ್ರಶೇಖರ್ ನಿಂಗಪ್ಪ ಬಿಲಕಂಟಿ ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ ಚಂದ್ರಶೇಖರ್ ಅವರು ಕೊರಮ್ಮ ಕ್ಯಾಂಪ್ ಸಮೀಪದ ತುಂಗಭದ್ರಾ ನದಿ ತೀರದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಈ ಸಂದರ್ಭದಲ್ಲಿ ನೀರು ಕುಡಿಯಲು ನದಿಗೆ ಇಳಿದಾಗ ಮೊಸಳೆ ಏಕಾಏಕಿ ದಾಳಿ ನಡೆಸಿದೆ. ಮೊಸಳೆ ಅವರ ಕಾಲನ್ನು ಹಿಡಿದು ಎಳೆಯಲು ಮುಂದಾಗಿದ್ದು, ಅವರು ಅಪಾಯಕ್ಕೆ ಸಿಲುಕಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಮತ್ತೊಬ್ಬ ಕುರಿಗಾಹಿ ತಕ್ಷಣ ನೆರವಿಗೆ ಧಾವಿಸಿ, ಮೊಸಳೆಯ ಹಿಡಿತದಲ್ಲಿದ್ದ ಚಂದ್ರಶೇಖರ್ ಅವರನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಅವರ ಕೂಗಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಈ ಪ್ರಯತ್ನದಿಂದ ಚಂದ್ರಶೇಖರ್ ಅವರು ಮೊಸಳೆಯ ದಾಳಿಯಿಂದ ಪಾರಾಗಿದ್ದಾರೆ. ಆದರೆ, ಅವರ ಕಾಲಿಗೆ ತೀವ್ರ ಗಾಯಗಳಾಗಿವೆ. ಘಟನೆಯ ಮಾಹಿತಿ ತಿಳಿದ ಅರಣ್ಯಾಧಿಕಾರಿ ಬಸವರಾಜ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯದ ಕುರಿತು ಮಾಹಿತಿ ಪಡೆದಿದ್ದಾರೆ. ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದಾರೆ.
ತುಂಗಭದ್ರಾ ನದಿ ಪಾತ್ರದಲ್ಲಿ ಮೊಸಳೆಗಳ ಸಂಚಾರ ಇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿ ತೀರದ ಪ್ರದೇಶಗಳಿಗೆ ತೆರಳುವಾಗ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಅನಿವಾರ್ಯ ಸಂದರ್ಭಗಳಲ್ಲಿ ನದಿಯ ಸಮೀಪ ಹೋಗಬೇಕಾದರೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.