ಮನೆಯಿಂದ ಆಚೆಯೇ ಬರದ ಜನ| ಬಿಕೋ ಎನ್ನುತ್ತಿರುವ ರಸ್ತೆಗಳು| ಕರ್ಫ್ಯೂ ಮಧ್ಯೆಯೂ ಅಲ್ಲಲ್ಲಿ ಮದುವೆಗಳು| ಜಿಲ್ಲಾ ಕೇಂದ್ರ ಕೊಪ್ಪಳವಂತೂ ಸಂಪೂರ್ಣ ಸ್ತಬ್ಧವಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಬೆಳಗ್ಗೆಯೇ ಬಂದ್ ಆಗಿದ್ದ ಬಸ್‌ಗಳು, ವಾಹನಗಳು ಹಾಗೂ ಬೈಕ್ ಸವಾರರು ಸೇರಿದಂತೆ ಯಾರೊಬ್ಬರು ರಸ್ತೆಯತ್ತ ಸುಳಿಯಲೇ ಇಲ್ಲ|
ಕೊಪ್ಪಳ(ಮೇ.25): ನಗರ ಸೇರಿದಂತೆ ಜಿಲ್ಲಾದ್ಯಂತ ಬಿಕೋ ಎಂದ ರಸ್ತೆಗಳು. ಕಣ್ಣು ಹಾಯಿಸಿದಷ್ಟು ರಸ್ತೆಗಳು ಖಾಲಿ ಖಾಲಿ. ವಾಹನಗಳ ಓಡಾಟವೂ ಇಲ್ಲ. ಹೀಗಾಗಿ ನಗರದಿಂದ ಹಿಡಿದು ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ರಣ.. ರಣ... ಎನ್ನುವ ಭಾವನೆ.
ಹೌದು, ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ವಾಹನ ಸಂಚಾರ, ಜನಸಂದಣಿ ಸೇರಿದಂತೆ ಯಾವುದೂ ಇರಲಿಲ್ಲ. ಕೇವಲ ನಗರ ಪ್ರದೇಶವಷ್ಟೇ ಅಲ್ಲ ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊಪ್ಪಳ: ಕೊರೋನಾ ಸೋಂಕಿತನ ಸಂಪರ್ಕದ ವ್ಯಕ್ತಿಯ ಹುಡುಕಲು ಹರಸಾಹಸ
ಮುಗಿಬಿದ್ದ ಜನ:
ಕರ್ಫ್ಯೂ ಇದ್ದರೂ ಮಾರುಕಟ್ಟೆಯಲ್ಲಿ ಮಾಂಸ ಮಾರಾಟ ಬೆಳಗ್ಗೆಯೇ ಆರಂಭವಾಗಿತ್ತು. ಆದರೆ, ಕೆಲವೇ ಹೊತ್ತಿನಲ್ಲಿ ಮಾಂಸ ಖಾಲಿಯಾಗಿದ್ದರಿಂದ ಗ್ರಾಹಕರು ಪರದಾಡಿದ ದೃಶ್ಯ ಕಂಡು ಬಂದಿತು. ಜಮಾಯಿಸಿದ್ದ ಜನರನ್ನು ಪೊಲೀಸರು ಚದುರಿಸಿದರು. ಇನ್ನು ಮದ್ಯದ ಅಂಗಡಗಳು ಬಂದ್ ಆಗಿದ್ದರೂ ಬಾರ್ ಅಕ್ಕಪಕ್ಕದಲ್ಲಿ ಕದ್ದುಮುಚ್ಚಿ ವ್ಯವಹಾರ ನಡೆಯುತ್ತಿರುವುದು ಕಂಡು ಬಂದಿದೆ. ಹೊರಗಡೆ ಮೊದಲೇ ಸ್ಟಾಕ್ ಮಾಡಿಕೊಂಡು, ಕಳ್ಳದಂಧೆ ನಡೆಸಲಾಗುತ್ತಿತ್ತು.
ಕೊಪ್ಪಳ ಸ್ತಬ್ಧ:
ಜಿಲ್ಲಾ ಕೇಂದ್ರ ಕೊಪ್ಪಳವಂತೂ ಸಂಪೂರ್ಣ ಸ್ತಬ್ಧವಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಬೆಳಗ್ಗೆಯೇ ಬಂದ್ ಆಗಿದ್ದ ಬಸ್‌ಗಳು, ವಾಹನಗಳು ಹಾಗೂ ಬೈಕ್ ಸವಾರರು ಸೇರಿದಂತೆ ಯಾರೊಬ್ಬರು ರಸ್ತೆಯತ್ತ ಸುಳಿಯಲೇ ಇಲ್ಲ. ಹೀಗಾಗಿ, ಜವಾಹರ ರಸ್ತೆ, ಹೆದ್ದಾರಿ, ಭಾಗ್ಯನಗರ ರಸ್ತೆ ಸೇರಿದಂತೆ ಎಲ್ಲವೂ ಬಂದ್ ಆಗಿತ್ತು. ಕೆಲವೊಂದು ರಸ್ತೆಗಳು ಬಂದ್ ಆಗಿದ್ದರಿಂದ ಆ್ಯಬುಲೆನ್ಸ್ ದಾಟಲು ಸಮಸ್ಯೆಯಾಯಿತು. ಕೊನೆಗೆ ಬಂದ್ ಮಾಡಿದ ರಸ್ತೆಗಳನ್ನು ತಾವೇ ತೆರವು ಮಾಡಿಕೊಂಡು ಹೋಗಿರುವ ಘಟನೆಗಳು ನಡೆದವು. ಆದರೂ ಇಷ್ಟುದಿನಗಳ ಕಫä್ರ್ಯನಲ್ಲಿ ಭಾನುವಾರ ಅತ್ಯಂತ ಕಟ್ಟುನಿಟ್ಟಾಗಿ ಆಯಿತು ಎಂದು ವಿಶ್ಲೇಷಣೆ ಮಾಡಲಾಯಿತು.
ಮದುವೆ ಸಮಾರಂಭ:
ನಗರ ಸೇರಿದಂತೆ ಜಿಲ್ಲಾದ್ಯಂತ ಸುಮಾರು 10 ಮದುವೆ ಸಮಾರಂಭ ನಡೆದವು. ಆದರೆ, ಯಾವುದೇ ನಿಯಂತ್ರಣ ಇರಲಿಲ್ಲ. ಕೇವಲ 50 ಜನ ಸೇರಬೇಕಾಗಿದ್ದರೂ ಅಧಿಕ ಸಂಖ್ಯೆಯಲ್ಲಿಯೇ ಜನ ಸೇರಿದ್ದು ಕಂಡು ಬಂದಿತು.