
ಗಂಗಾವತಿ (ಕೊಪ್ಪಳ): ತಾಲೂಕಿನ ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿಯ ಆಂಜನೇಯಸ್ವಾಮಿಗೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಕುಟುಂಬಸ್ಥರು ಸಮರ್ಪಣೆ ಮಾಡಿರುವ ಪ್ರಭಾವಳಿ, ಕಿರೀಟ, ಗದೆ ಸೇರಿದಂತೆ 12 ಸಾಮಗ್ರಿಗಳು ಚಿನ್ನಲೇಪಿತ ತಾಮ್ರದಿಂದ ಕೂಡಿದ್ದಾಗಿವೆ. ಎಲ್ಲವೂ ಚಿನ್ನದಿಂದ ಕೂಡಿಲ್ಲ ಎಂದು ಕಿಷ್ಕಿಂದಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.
ಕಿಷ್ಕಿಂದಾ ಅಂಜನಾದ್ರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ದೇವಾಲಯಕ್ಕೆ ಸಮರ್ಪಣೆಯಾಗಿರುವ ಸಾಮಾನುಗಳನ್ನು ಲೋಹ ತಜ್ಞರಿಂದ ಪರೀಕ್ಷೆ ಮಾಡಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹೈದರಾಬಾದ್ ಮೂಲದ ಎಎಂಆರ್ ಕಂಪನಿಯ ಮಹೇಶ ರೆಡ್ಡಿ ಹಾಗೂ ಕುಟುಂಬಸ್ಥರು ಮೇ 8ರಂದು ಪ್ರಭಾವಳಿ ಗದೆ, ಕಿರೀಟ ಇತರ ಪೂಜಾ ಸಾಮಗ್ರಿಗಳನ್ನು ಸಮರ್ಪಣೆ ಮಾಡಿದ್ದರು.
ಒಂದೂವರೆ ಕೇಜಿ ಚಿನ್ನದಿಂದ ಮಾಡಲಾದ ಅಂದಾಜು ₹2.30 ಕೋಟಿ ಮೌಲ್ಯದ ಆಭರಣಗಳು ಇವು ಎಂದು ಹೇಳಲಾಗಿತ್ತು. ಆದರೆ, ಇವು ಚಿನ್ನಲೇಪಿತ ತಾಮ್ರದಿಂದ ಕೂಡಿವೆ ಎಂದು ಲೋಹ ಪರಿಶೋಧಕರು ದೃಢಪಡಿಸಿದ್ದು, ತಾಮ್ರಕ್ಕೆ ಚಿನ್ನದ ತಗಡು ಲೇಪನ ಮಾಡಲಾಗಿದೆ. ಎಲ್ಲವೂ ಚಿನ್ನದ ಸಾಮಗ್ರಿ ಅಲ್ಲ. ದಾನ ನೀಡಿದ ದಾನಿಗಳನ್ನು ಸಂಪರ್ಕಿಸಿ ಆಂಜನೇಯನಿಗೆ ಸಮರ್ಪಣೆ ಮಾಡಿದ ಸಾಮಗ್ರಿಗಳ ಮೌಲ್ಯ ಹಾಗೂ ರಸೀದಿಯನ್ನು ದೇವಾಲಯದ ಕಮಿಟಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.