ಆಲಮಟ್ಟಿ- ಚಿತ್ರದುರ್ಗ ರೈಲ್ವೆ ಮಾರ್ಗಕ್ಕೆ ಕೊಪ್ಪಳ ಸೇರ್ಪಡೆ

By Kannadaprabha News  |  First Published Jul 14, 2022, 8:45 AM IST

*  ಸಂಸದ ಸಂಗಣ್ಣ ಕರಡಿ ಕಾಳಜಿ
*  ನಾನಾ ರೈಲ್ವೆ ಯೋಜನೆ ಸಾಕಾರ
*  ಕಾಮಗಾರಿ ಶೀಘ್ರ ಪೂರ್ಣ 
 


ಕೊಪ್ಪಳ(ಜು.14): ಬಹುಜನರ ಬೇಡಿಕೆಯಾಗಿರುವ ಆಲಮಟ್ಟಿ- ಚಿತ್ರದುರ್ಗ ನೇರ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಒಂದೆರಡು ವಾರದಲ್ಲಿ ರೈಲ್ವೆ ಇಲಾಖೆಗೆ ವರದಿ ಸಲ್ಲಿಕೆಯಾಗಲಿದೆ. ಈ ನೂತನ ರೈಲ್ವೆ ಮಾರ್ಗಕ್ಕೆ ಕೊಪ್ಪಳವನ್ನೂ ಸೇರ್ಪಡೆಗೊಳಿಸಲಾಗಿದೆ.

ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ಕಚೇರಿಯಲ್ಲಿ ಬುಧವಾರ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ರೈಲ್ವೆ ಮಹಾಪ್ರಬಂಧಕ ಸಂಜೀವ್‌ ಕಿಶೋರ್‌ ಹಾಗೂ ರೈಲ್ವೆ ಇಲಾಖೆ ಪ್ರಮುಖ ಅಧಿಕಾರಿಗಳೊಂದಿಗೆ ಸಭೆಯೂ ಜರುಗಿದೆ. ಆಲಮಟ್ಟಿ- ಚಿತ್ರದುರ್ಗ ರೈಲ್ವೆ ಮಾರ್ಗಕ್ಕೆ ಈ ಹಿಂದೆಯೇ ಸರ್ವೇ ಕಾರ್ಯ ಜರುಗಿದ್ದು, ಆದರೆ ಈ ಸರ್ವೇಯಲ್ಲಿ ಕೊಪ್ಪಳವನ್ನು ಸೇರ್ಪಡೆಗೊಳಿಸಿರಲಿಲ್ಲ. ಆದರೆ ಸಂಸದ ಸಂಗಣ್ಣ ಕರಡಿ ಅವರ ಮನವಿ ಮೇರೆಗೆ ಈ ನೂತನ ಮಾರ್ಗಕ್ಕೆ ಕೊಪ್ಪಳವನ್ನು ಸೇರ್ಪಡೆಗೊಳಿಸಿ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ. ಒಂದೆರಡು ವಾರದಲ್ಲಿ ಸರ್ವೆ ವರದಿ ಇಲಾಖೆಗೆ ಸಲ್ಲಿಕೆಯಾಗಲಿದೆ.

Latest Videos

undefined

ಕೊಪ್ಪಳ: ಗವಿಮಠಕ್ಕೆ 1.08 ಕೋಟಿ ಚೆಕ್‌ ನೀಡಿದ ಆನಂದ ಸಿಂಗ್‌ ಪುತ್ರ

ನೂತನ ರೈಲ್ವೆ ಯೋಜನೆ:

ದರೋಜಿ- ಗಂಗಾವತಿ ನೂತನ ರೈಲ್ವೆ ಮಾರ್ಗದ ಸರ್ವೇ ಕಾರ್ಯಕ್ಕೆ ರೈಲ್ವೆ ಇಲಾಖೆ ಈಗಾಗಲೆ ಮಂಜೂರಾತಿ ನೀಡಿದ್ದು, ಐತಿಹಾಸಿಕ ತಾಣಗಳ ಸಂಪರ್ಕ ಹಾಗೂ ಉದ್ಯಮಕ್ಕೆ ಅನುಕೂಲವಾಗುವಂತೆ ಯೋಜನೆಯನ್ನು ಮಾರ್ಪಡಿಸಿ, ದರೋಜಿ- ಗಂಗಾವತಿ ರೈಲ್ವೆ ಮಾರ್ಗವನ್ನು ಬಾಗಲಕೋಟೆಯವರೆಗೂ ವಿಸ್ತರಿಸುವಂತೆ ಮಾಡಲಾಗಿದೆ. ಇದಕ್ಕೆ ರೈಲ್ವೆ ಇಲಾಖೆ ಮಹಾಪ್ರಬಂಧಕರು ತಾತ್ವಿಕವಾಗಿ ಸಮ್ಮತಿ ಸಹ ಸೂಚಿಸಿದ್ದಾರೆ. ಶೀಘ್ರದಲ್ಲಿಯೇ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆ ಸಹ ಇದೆ.

ಕಾಮಗಾರಿ ಪ್ರಗತಿಯಲ್ಲಿ:

ಗದಗ- ವಾಡಿ ರೈಲ್ವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಬರುವ ಜನವರಿ ವೇಳೆಗೆ ತಳಕಲ್‌ನಿಂದ ಲಿಂಗನಬಂಡಿವರೆಗೆ ರೈಲು ಸಂಚರಿಸಲು ಮಾರ್ಗ ಸಿದ್ಧವಾಗಲಿದೆ. ಆದರೆ, ತಳಕಲ್‌ನಿಂದ ಕೇವಲ ಲಿಂಗಲಬಂಡಿವರೆಗೆ ರೈಲು ಸಂಚರಿಸುವ ರೀತಿ ಆಗುವ ಬದಲು ಬರುವ ಫೆಬ್ರವರಿ ವೇಳೆಗೆ ಕನಿಷ್ಟ ತಳಕಲ್‌ನಿಂದ ಕುಷ್ಟಗಿ ವರೆಗಾದರೂ ರೈಲು ಸಂಚರಿಸುವಂತೆ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಫೆಬ್ರವರಿ ವೇಳೆಗೆ ಕುಷ್ಟಗಿ ವರಗೂ ಮಾರ್ಗಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಹೊಸಪೇಟೆ: ತುಂಗಭದ್ರಾ ಡ್ಯಾಂ ಒಳ ಹರಿವಿನ ಅಬ್ಬರ, ಪ್ರವಾಹ ಭೀತಿ

ಕಾಮಗಾರಿ ಶೀಘ್ರ ಪೂರ್ಣ:

ಮುನಿರಾಬಾದ್‌- ಮೆಹಬೂಬ್‌ನಗರ ರೈಲ್ವೆ ಮಾರ್ಗದಲ್ಲಿ ರೈಲು ಇದೀಗ ಗಂಗಾವತಿ ಮಾರ್ಗವಾಗಿ ಕಾರಟಗಿಯವರೆಗೆ ಸಂಚರಿಸಲು ಅನುವಾಗಿದ್ದು, ಬರುವ ಫೆಬ್ರವರಿ ವೇಳೆಗೆ ಸಿಂಧನೂರುವರೆಗೂ ರೈಲು ಸಂಚರಿಸುವ ರೀತಿ ಕಾಮಗಾರಿ ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಗಂಗಾವತಿ- ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲಿಗೆ ಬನ್ನಿಕೊಪ್ಪದಲ್ಲಿ ನಿಲುಗಡೆ ನೀಡುವಂತೆ ಮಾಡಿದ ಸಂಸದ ಸಂಗಣ್ಣ ಕರಡಿ ಅವರ ಮನವಿಗೆ ರೈಲ್ವೆ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.

ಆಲಮಟ್ಟಿ- ಚಿತ್ರದುರ್ಗ ನೇರ ರೈಲ್ವೆ ಮಾರ್ಗದ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಈ ನೂತನ ರೈಲ್ವೆ ಮಾರ್ಗಕ್ಕೆ ಕೊಪ್ಪಳವನ್ನೂ ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ ಜಿಲ್ಲೆಯ ದರೋಜಿ- ಗಂಗಾವತಿ ನೂತನ ರೈಲ್ವೆ ಯೋಜನೆ, ಗದಗ-ವಾಡಿ ರೈಲ್ವೆ ಯೋಜನೆ, ಮುನಿರಾಬಾದ್‌- ಮೆಹಬೂಬ್‌ನಗರ ರೈಲ್ವೆ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವಶ್ಯಕವಾದ ಹಾಗೂ ಕಾಮಗಾರಿ ವೇಗಕ್ಕೆ ಗಮನಹರಿಸಿದ್ದೇನೆ ಅಂತ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.  

click me!