ಕೋಲಾರ (ಸೆ.22): ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಬಣ, ಕಾಂಗ್ರೆಸ್‌ನಿಂದ ಒಮ್ಮೆ ಉಚ್ಛಾಟನೆಗೊಂಡವರು ಮತ್ತೆ ಪಕ್ಷಕ್ಕೆ ಬರುವ ಅನಿವಾರ್ಯತೆ ಏನಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುನಿಯಪ್ಪ ಬಣದ ಮುಖಂಡರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಮನೆ ಮನೆ ಸುತ್ತಿ ಕೆಎಚ್ ಮುನಿಯಪ್ಪ ವಿರುದ್ಧ ಪ್ರಚಾರ ಮಾಡಿದ್ದ ಶ್ರೀನಿವಾಸಗೌಡ, ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಇಂತಹವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕೇ ಎಂದು ಪ್ರಶ್ನಿಸಿದರು.
undefined
ಶ್ರೀನಿವಾಸಗೌಡರನ್ನು ಮಂತ್ರಿ ಮಾಡಿದ್ದು ಕೆಎಚ್ಚೆಂ
ಕಾಂಗ್ರೆಸ್‌ನ ಕಿಸಾನ್ ಖೇತ್ ಅಧ್ಯಕ್ಷ ಊರು ಬಾಗಿಲು ಶ್ರೀನಿವಾಸ್ ಮಾತನಾಡಿ, 2004ರಲ್ಲಿ ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಸೇರುವ ಸಂದರ್ಭದಲ್ಲಿ ಕೆಎಚ್ ಮುನಿಯಪ್ಪ ಪಕ್ಷಕ್ಕೆ ಬರಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲಿಸಿ ಒಕ್ಕಲಿಗರ ಕೋಟಾದಲ್ಲಿ ಮಂತ್ರಿ ಮಾಡಿದ್ದರು. ಅಂದಿನ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನಲ್ಲಿ ನಾನೇ ಒಕ್ಕಲಿಗ ನಾಯಕ ಎಂದು ಹೇಳಿದವರು ಎರಡು ವರ್ಷದಲ್ಲೇ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಮುಂದಿನ ಚುನಾವಣೆಯಲ್ಲಿ ಸೋಲು ಅನುಭವಿಸಿದರು ಎಂದರು.
ಚುನಾವಣೆಗೂ ಮುನ್ನ ಆಪರೇಷನ್ ಪಾಲಿಟಿಕ್ಸ್, ಜೆಡಿಎಸ್ ತೊರೆಯಲು ಹೊರಟವರಿಗೆ ಎಚ್‌ಡಿಕೆ ಶಾಕ್..!
ಕೆಸಿ ವ್ಯಾಲಿ ಯೋಜನೆಗೆ ರೂಪುರೇಷೆ ನೀಡಿದ್ದು ಕೆ.ಎಚ್.ಮುನಿಯಪ್ಪ. ನಂತರ ರಮೇಶ್‌ಕುಮಾರ್ ಮಂತ್ರಿಯಾಗಿ ಯೋಜನೆಗೆ ಒತ್ತು ನೀಡಿದರು. ಕೃಷ್ಣಬೈರೇಗೌಡ ಸಚಿವರಾಗಿದ್ದಾಗ ಯೋಜನೆಗೆ ಮತ್ತಷ್ಟುಚಾಲನೆ ನೀಡಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ಯೋಜನೆಯನ್ನು ಜಾರಿಗೊಳಿಸಿದರು. ಕೆಸಿ ವ್ಯಾಲಿ ಯೋಜನೆಗೆ ನಿಮ್ಮ ಕೊಡುಗೆ ಏನು, ಆಗ ಎಲ್ಲಿದ್ದೀರಿ. ಈಗ ಕಾಂಗ್ರೆಸ್ ಮನೆಗೆ ಬೆಂಕಿ ಹಚ್ಚುವ ಕುತಂತ್ರ ನಡೆಸುತ್ತಿರುವ ನಿಮ್ಮನ್ನು ಕಾಂಗ್ರೆಸ್‌ಗೆ ಸೇರಿಸಬೇಕೇ ಎಂದು ಪ್ರಶ್ನೆ ಮಾಡಿದರು.
ಇವರ ಅಗತ್ಯ ಕಾಂಗ್ರೆಸ್‌ಗೆ ಇಲ್ಲ
ದೇಶದ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರನ್ನು ಎಲ್ಲ ನಾಯಕರು ಗೌರವದಿಂದ ಕಾಣುತ್ತಾರೆ. ಅಂತಹವರ ಬಗ್ಗೆ ಕುಟುಂಬ ರಾಜಕಾರಣ ಮಾಡುತ್ತೀರಿ ಎನ್ನುವ ಶ್ರೀನಿವಾಸಗೌಡ ಯಾವ ರಾಜಕಾರಣ ಮಾಡಲು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಕಾಂಗ್ರೆಸ್‌ಗೆ ಅವರ ಅಗತ್ಯ ಇಲ್ಲ , ಪಕ್ಷಕ್ಕೆ ಸೇರಿಸಿಕೊಳ್ಳಲು ಯಾರೂ ಇಲ್ಲಿ ಸಿದ್ಧರಿಲ್ಲ. ಮುಂದಿನ ದಿನಗಳಲ್ಲಿ ಮುನಿಯಪ್ಪ ವಿರುದ್ಧ ಲಘುವಾಗಿ ಮಾತನಾಡಿದರೆ ಬಹಿರಂಗವಾಗಿ ಎಲ್ಲ ಸಭೆಗಳಲ್ಲೂ ಬಹಿಷ್ಕರಿಸಬೇಕಾದೀತು ಎಂದು ಎಚ್ಚರಿಸಿದರು.
ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯಶಂಕರ್ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಅವರನ್ನು ಸೋಲಿಸಿ ಬಿಜೆಪಿಯ ಎಸ್. ಮುನಿಸ್ವಾಮಿ ಅವರನ್ನು ಗೆಲ್ಲಿಸಿದ್ದು ನಾವೇ ಎಂದು ಹೇಳಿದವರು ಶ್ರೀನಿವಾಸಗೌಡ ಈಗ ಮಗನಿಗೆ ಜಿಪಂಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಹೊರಟಿದ್ದಾರೆ. ಇವರಲ್ಲಿ ಯಾವ ರಾಜಕೀಯ ಸಿದ್ಧಾಂತ ಇದೆ ಎಂದು ಟೀಕಿಸಿದರು.
ಹೈಕಮಾಂಡ್‌ಗೆ ನಿಯೋಗ:
ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು ಮಾತನಾಡಿ, ಕೆಎಚ್‌ಎಂ ಆಶ್ರಯದಲ್ಲಿ ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಬಂದು ನಂತರ ಜೆಡಿಎಸ್ ಸೇರಿದರು. ಶ್ರೀನಿವಾಸಗೌಡರನ್ನು ಪಕ್ಷಕ್ಕೆ ಸೇರಿಸಬಾರದೆಂದು ಬ್ಲಾಕ್ ಅಧ್ಯಕ್ಷರುಗಳ ನಿಯೋಗ ಹೈಕಮಾಂಡ್ ಭೇಟಿ ಮಾಡುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ.ಮಂಜುನಾಥ್, ಕಾಂಗ್ರೆಸ್ ಎಸ್.ಸಿ ಘಟಕದ ರಾಜ್ಯ ಕಾರ್ಯದರ್ಶಿ ಎಚ್.ವಿ.ಕುಮಾರ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್ ಟಿ ಘಟಕದ ಅಧ್ಯಕ್ಷ ನಾಗರಾಜ್, ಅಲ್ಪಸಂಖ್ಯಾತ ಘಟಕದ ಮುಖಂಡ ಇಕ್ಬಾಲ್ ಅಹಮದ್ ಗೋಷ್ಠಿಯಲ್ಲಿ ಹಾಜರಿದ್ದರು.