ವಿವಿಧ ಬಗೆಯ ಕೃಷಿ ಪ್ರಯೋಗದಲ್ಲಿ ಕೋಲಾರದ ಜಿಲ್ಲೆಯು ಎತ್ತಿದ ಕೈ. ಬಹುಪಾಲು ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ರೈತರು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಕೃಷಿಯ ಬಗ್ಗೆ ಚಿಂತನೆ ಮಾಡಿ ಕಾರ್ಯಗತಗೊಳಿಸುತ್ತಾರೆ.
ಕೋಲಾರ (ಜು.04): ವಿವಿಧ ಬಗೆಯ ಕೃಷಿ ಪ್ರಯೋಗದಲ್ಲಿ ಕೋಲಾರದ ಜಿಲ್ಲೆಯು ಎತ್ತಿದ ಕೈ. ಬಹುಪಾಲು ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ರೈತರು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಕೃಷಿಯ ಬಗ್ಗೆ ಚಿಂತನೆ ಮಾಡಿ ಕಾರ್ಯಗತಗೊಳಿಸುತ್ತಾರೆ. ಅಂತಹ ಯಶೋಗಾಥೆಗೆ ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಬೆಂಗಳೂರಿನ ಬಿಎಂಟಿಸಿ ಸಂಸ್ಥೆಯ ನಿರ್ವಾಹಕ ವೇಣುಗೋಪಾಲ ಹೊಸ ಸೇರ್ಪಡೆ. ತಮಗಿರುವ ಮೂರು ಎಕರೆಯಲ್ಲಿ ೭ ವರ್ಷಗಳ ಹಿಂದೆ ನೇರಳೆ ಗಿಡ ನಾಟಿ ಮಾಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಭರ್ಜರಿ ಆದಾಯ ಗಳಿಸುತ್ತಿದ್ದಾರೆ.
ಗಿಡ ನಾಟಿ ಮಾಡಿದ ಮೂರು ವರ್ಷಕ್ಕೆ ಫಸಲು ಬಿಡಲಾರಂಭಿಸಿದ್ದು, ಲಕ್ಷಕ್ಕೆ ಮೊದಲ ಫಸಲು ಮಾರಾಟ ಮಾಡಿದ್ದಾರೆ. ನಂತರ ಎರಡು ವರ್ಷಗಳಿಗೆ ಉತ್ತಮ ಆದಾಯ ಮಾಡಿಕೊಂಡಿದ್ದಾರೆ. ಇದೀಗ ಮೂರು ವರ್ಷಗಳಲ್ಲಿ ಒಟ್ಟು ತೋಟದಲ್ಲಿ ಲಕ್ಷಾಂತರ ರು. ಆದಾಯ ಗಳಿಸಿದ್ದಾರೆ. ಇತರೆ ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಹೋಲಿಕೆ ಮಾಡಿದರೆ ನೇರಳೆ ಗಿಡಕ್ಕೆ ಖರ್ಚು ಕಡಿಮೆ. ಈ ಹಿಂದೆ ಬೇರೆ ಬೆಳೆಗಳಲ್ಲಿ ಕಾರ್ಮಿಕರಿಗೆ ದುಬಾರಿ ಕೂಲಿ ಕೊಡಬೇಕಿತ್ತು. ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಆದರೆ ನೇರಳೆ ಬೆಳೆಗೆ ಯಾವುದೇ ದುಬಾರಿ ಬಂಡವಾಳವಿಲ್ಲ. ಕಡಿಮೆ ಖರ್ಚಿನಲ್ಲಿ ವಾರ್ಷಿಕ ಬೆಳೆಯಾದ ನೇರಳೆಯಿಂದ ಉತ್ತಮ ಫಸಲು ಬರುತ್ತಿದೆ.
30 ಕೋಟಿ ಖರ್ಚಾದರೂ ಹಾವೇರಿಗೆ ನೀರು ಬರಲಿಲ್ಲ: ಸಚಿವ ಶಿವಾನಂದ ಪಾಟೀಲ್
ಇನ್ನು ಒಂದು ಸಸಿ ಸರಾಸರಿ ೪೦ ಕೆಜಿ ಹಣ್ಣು ಬಿಡುತ್ತದೆ. ಕೆಲವೊಂದು ನೇರಳೆ ಮರಗಳು ೬೦ ಕೆಜಿವರೆಗೂ ಸಹ ಹಣ್ಣು ಬಿಡುತ್ತವೆ. ಅಲ್ಲದೇ ನೇರಳೆ ಬೆಳೆಗೆ ವಾರ್ಷಿಕ ಖರ್ಚು ೨೦ ರಿಂದ ೩೦ ಸಾವಿರ ರುಪಾಯಿ ಮಾತ್ರ ಬರುತ್ತದೆ. ಹೂ ಬಿಡುವ ಹಂತದಲ್ಲಿ ಎರಡು ಮೂರು ಬಾರಿ ಔಷಧಿಯನ್ನು ಸಿಂಪಡಣೆ ಮಾಡಿದರೆ ಸಾಕು, ಮತ್ತೆ ಯಾವುದೇ ರೀತಿಯ ಖರ್ಚು ಇರುವುದಿಲ್ಲ. ಬೇಸಿಗೆಯಲ್ಲಿ ಸ್ವಲ್ಪ ನೀರು ಹಾಯಿಸಿದರೆ ಉತ್ತಮ ಫಸಲು ಪಡೆಯಬಹುದು ಎಂದು ರೈತ ವೇಣುಗೋಪಾಲ ಅವರು ಹೇಳಿದರು. ಔಷಧೀಯ ಗುಣಗಳನ್ನು ಹೊಂದಿರುವ ನೇರಳೆಗೆ ಎಲ್ಲೆಡೆ ಭಾರೀ ಬೇಡಿಕೆ ಇದೆ.
ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ ೧೦೦ ರಿಂದ ೧೫೦ ರುಪಾಯಿವರೆಗೂ ಬೆಲೆ ಇದೆ. ಒಟ್ಟು ತೋಟದ ಫಸಲನ್ನು ಮೂರು ವರ್ಷಗಳವರೆಗೆ ಲಕ್ಷಾಂತರ ರು.ಗಳಿಗೆ ಮಾರಾಟ ಮಾಡಲಾಗಿದೆ. ಇದು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭದ ಬೆಳೆಯಾಗಿದೆ. ತೋಟಗಾರಿಕೆ ಇಲಾಖೆಯಿಂದಲೂ ಸಹ ನೇರಳೆ ಗಿಡಗಳಿಗೆ ಸಹಾಯಧನ ಪಡೆಯದೇ, ಸ್ವಂತ ಹಣದಲ್ಲಿ ಲಾಭವನ್ನು ಕಾಣಲಾಗುತ್ತಿದೆ. ಜಂಬುನೇರಳೆ ತಳಿಗೆ ಸೇರಿದ ನೇರಳೆ ಹಣ್ಣು ಸಕ್ಕರೆ ಕಾಯಿಲೆಯಿರುವ ರೋಗಿಗಳಿಗೆ ಅತ್ಯವಶ್ಯಕವಾದ ಹಣ್ಣಾಗಿದ್ದು, ಇದರಲ್ಲಿ ಸಕ್ಕರೆ ಕಾಯಿಲೆ ತಡೆಯುವ ಔಷಧೀಯ ಗುಣಹೊಂದಿರುವ ಜಂಬುನೇರಳೆ ಹಣ್ಣುಗಳಿಗೆ ಭಾರೀ ಬೇಡಿಕೆಯಾಗಿದೆ.
ಡಿ.ಕೆ.ಸುರೇಶ್ ಸೋಲಿಂದ ಕ್ಷೇತ್ರದ ಜನರಿಗೆ ಪಶ್ಚಾತ್ತಾಪ: ಶಾಸಕ ಎಚ್.ಸಿ.ಬಾಲಕೃಷ್ಣ
ಕೋಲಾರ, ಚಿಕ್ಕಬಳ್ಳಾಪುರ ಸೇರಿ ನೆರೆಯ ಆಂಧ್ರ ಹಾಗೂ ತಮಿಳು ನಾಡುಗಳಲ್ಲಿ ಜಂಬು ನೇರಳೆ ಹಣ್ಣಿಗೆ ಭಾರೀ ಬೇಡಿಕೆಯಿದೆ. ಒಟ್ಟಾರೆ ನಾನಾ ರೀತಿಯ ತರಕಾರಿ ಬೆಳೆ ಬೆಳೆದು ರೈತರು ಕೈ ಸುಟ್ಟಿಕೊಳ್ಳುವ ಬದಲಿಗೆ ಕಡಿಮೆ ಬಂಡವಾಳದ ನೇರಳೆ ಬೆಳೆ ಬೆಳೆಯುವುದರಿಂದ ಉತ್ತಮ ಆದಾಯ ಪಡೆಯಬಹುದು ಎಂಬುದು ರೈತ ವೇಣುಗೋಪಾಲರ ಮಾತಾಗಿದೆ.