ಈವರೆಗೆ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ನೀರಿನ ಸಮಸ್ಯೆ ನಗರ ವ್ಯಾಪ್ತಿಗೂ ಆವರಿಸಿದೆ. ಶುದ್ಧ ಕುಡಿಯುವ ನೀರಿನ ಕೊರತೆ ಜೊತೆಗೆ ನಿತ್ಯ ಬಳಕೆಗೂ ನೀರಿಲ್ಲದೆ ಪರದಾಡುವ ಸ್ಥಿತಿ ಜಿಲ್ಲಾಕೇಂದ್ರದಲ್ಲಿ ಎದುರಾಗಿದೆ. ಸಮಸ್ಯೆ ಪರಿಹಾರಕ್ಕೆ ಶೀಘ್ರ ಗಮನ ಹರಿಸದಿದ್ದರೆ ಪರಿಸ್ಥಿತಿ ತೀವ್ರಗೊಳ್ಳುವ ಸೂಚನೆಗಳು ಗೋಚರಿಸತೊಡಗಿವೆ.
ಚಿಕ್ಕಬಳ್ಳಾಪುರ(ಆ.15): ಜಿಲ್ಲೆಯ ಆರೂ ತಾಲೂಕುಗಳ ಒಟ್ಟು 353 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಇದರಲ್ಲಿ ಅತಿ ಹೆಚ್ಚು ಚಿಂತಾಮಣಿ ತಾಲೂಕಿನಲ್ಲಿದ್ದರೆ, ಅತಿ ಕಡಿಮೆ ಗುಡಿಬಂಡೆ ತಾಲೂಕಿನಲ್ಲಿ ಸಮಸ್ಯೆ ಇತ್ತು. ಆದರೆ ಪ್ರಸ್ತುತ ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರಕ್ಕೆ ನೀರೊದಗಿಸುತ್ತಿದ್ದ ಜಕ್ಕಲಮಡಗು ಜಲಾಶಯ ಬತ್ತಿಹೋದ ಕಾರಣ ಸಮಸ್ಯೆ ತೀವ್ರರೂಪ ತಾಳಿದ್ದು, ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಶುದ್ಧ ನೀರಿನ ಘಟಕಗಳು ಬಂದ್!
ಜಿಲ್ಲೆಯ ಕುಡಿಯುವ ನೀರಿನ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಫೆä್ಲೕರೈಡ್ ಅಂಶ ಇದೆ ಎಂಬ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದ ಹಲವು ಹಳ್ಳಿಗಳಿಗೆ ಸರ್ಕಾರದಿಂದಲೇ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ನಗರ ವ್ಯಾಪ್ತಿಗೆ ಸರ್ಕಾರ ಶುದ್ಧ ನೀರಿನ ಘಟಕಗಳನ್ನು ನೀಡದ ಕಾರಣ ನಗರ ವ್ಯಾಪ್ತಿಯ ಜನರಿಗೂ ಶುದ್ಧ ನೀರು ನೀಡುವ ಉದ್ಧೇಶದಿಂದ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧ್ಯಕ್ಷ ಡಾ.ಕೆ. ಸುಧಾಕರ್ ಅವರು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದರು.
ಚಿಕ್ಕಬಳ್ಳಾಪುರ ನಗರದಲ್ಲಿ ಒಟ್ಟು 31 ವಾರ್ಡುಗಳಿದ್ದು, ಇದರಲ್ಲಿ 13 ವಾರ್ಡುಗಳಲ್ಲಿ ತಮ್ಮ ನೇತೃತ್ವದ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್‌ನಿಂದ ಶುದ್ಧನೀರಿನ ಘಟಕಗಳನ್ನು ನಿರ್ಮಿಸಿದ್ದರು. ಆದರೆ ಪ್ರಸ್ತುತ ನೀರಿನ ಕೊರತೆಯಿಂದಾಗಿ ಈ ಘಟಕಗಳಲ್ಲಿ ಹಲವು ಮುಚ್ಚಲ್ಪಟ್ಟಿದ್ದು, ಈವರೆಗೆ ಉಚಿತವಾಗಿ ಶುದ್ಧ ನೀರು ಬಳಸುತ್ತಿದ್ದ ನಾಗರಿಕರಿಗೆ ದಿಕ್ಕು ತೋಚದಂತಾಗಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್‌ನಿಂದ ಹಾಕಿರುವ ಒಟ್ಟು 13 ಶುದ್ಧ ನೀರಿನ ಘಟಕಗಳಲ್ಲಿ ಕೇವಲ 5 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 8 ಘಟಕಗಳು ನೀರಿನ ಕೊರತೆಯಿಂದ ಮುಚ್ಚಲ್ಪಟ್ಟಿವೆ. ಹೀಗಾಗಿ ನಾಗರಿಕರು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ಖಾಸಗಿಯವರಿಂದ ನೀರು ಖರೀದಿಸಲಾಗದೆ ಫ್ಲೋರೈಡ್ ನೀರನ್ನೇ ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ದಿನ ಬಳಕೆ ನೀರಿಗೂ ತೊಂದರೆ:
ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಒಟ್ಟು 109 ಕೊಳವೆ ಬಾವಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಈ ಕೊಳವೆ ಬಾವಿಗಳ ನೀರನ್ನೇ ಇಡೀ ನಗರಕ್ಕೆ ಸರಬರಾಜು ಮಾಡಲು ನಗರಸಭೆ ಮುಂದಾಗಿದೆ. ಆದರೆ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
ಇನ್ನು ಕಂದವಾರ ಕೆರೆ ಪಕ್ಕದಲ್ಲಿ ಕೊರೆದಿರುವ ಹಲವು ಕೊಳವೆ ಬಾವಿಗಳಲ್ಲಿ ನೀರಿದ್ದರೂ ಅವುಗಳಿಗೆ ಪಂಪ್ ಮೋಟಾರ್ ಅಳವಡಿಸದೆ ನಿರ್ಲಕ್ಷ್ಯ ಮಾಡಲಾಗಿದೆ ಹಾಗೂ ನಗರ ವ್ಯಾಪ್ತಿಯಲ್ಲಿಯೂ ಹಲವು ಕಡೆ ಬಲಾಢ್ಯರ ಕುತಂತ್ರದಿಂದಾಗಿ ನೀರಿರುವ ಕೊಳವೆ ಬಾವಿಗಳು ಮೂಲೆಗುಂಪಾಗಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿವೆ.
ಕೋಲಾರ: ಕಾಲೇಜಿನಿಂದ ಹೊರಗೆಳೆದು ಉಪನ್ಯಾಸಕಗೆ ಥಳಿತ
ಈ ಕುರಿತು ನಗರಸಭೆ ಗಮನಕ್ಕೆ ಈಗಾಗಲೇ ತರಲಾಗಿದ್ದು, ಪ್ರಶಾಂತನಗರದ 4ನೇ ವಾರ್ಡಿನಲ್ಲಿ ಮೂಲೆಗುಂಪಾಗಿರುವ ಕೊಳವೆ ಬಾವಿ ಮತ್ತು ಕಂದವಾರ ಕೆರೆಯ ಆಯಕಟ್ಟಿನಲ್ಲಿ ಕೊರೆದ ನೀರಿರುವ ಕೊಳವೆ ಬಾವಿಗಳನ್ನು ನಗರಕ್ಕೆ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳೇ ಮಧ್ಯೆಪ್ರವೇಶ ಮಾಡಿ ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.