ಕೋಲಾರ (ಡಿ.17): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ (Election) ಫಲಿತಾಂಶ ಬಂದು ಕಾಂಗ್ರೆಸ್ (Congress) ಅಭ್ಯರ್ಥಿ ಅನಿಲ್ ಕುಮಾರ್ (Anil Kumar) ಗೆಲುವು ಸಾಧಿಸಿದ ನಂತರವೂ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಶಮನಗೊಂಡಿಲ್ಲ. ಈ ಚುನಾವಣೆಯಲ್ಲಿ (Election) ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ (KH Muniyappa) ಹಾಗೂ ಅವರ ಬೆಂಬಲಿಗರು ಜೆಡಿಎಸ್ (JDS) ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದು ಹೈಕಮಾಂಡ್‌ಗೆ ಕಾಂಗ್ರೆಸ್ (Congress) ಶಾಸಕರು ಹಾಗೂ ಮುಖಂಡರು ದೂರುಗಳ ಸುರಿಮಳೆ ಸುರಿಸಿದ್ದಾರೆ.
ಎಂಎಲ್‌ಸಿ ಚುನಾವಣೆ (MLC Election) ನಡೆದ ಮಾರನೆ ದಿನವೇ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ (RL Jalappa) ಆರೋಗ್ಯ ವಿಚಾರಿಸಲು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭಾ ಸದಸ್ಯರೊಬ್ಬರು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ (Congress) ಅಭ್ಯರ್ಥಿ ಅನಿಲ್ ವಿರುದ್ಧ ಮತ ಚಲಾಯಿಸುವಂತೆ ಮತದಾರರಿಗೆ ಸೂಚನೆ ನೀಡಿದ್ದಲ್ಲದೆ, ಜೆಡಿಎಸ್ (JDS) ಪಕ್ಷಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಅವರ ಆಡಿಯೋ, ವಿಡಿಯೋ ತುಣುಕುಗಳು ಲಭ್ಯವಾಗಿವೆ ಎಂಬ ಮಾಹಿತಿಯನ್ನು ಸಿದ್ದರಾಮಯ್ಯ (Siddaramaiah) ಅವರಿಗೆ ತಿಳಿಸಿದ್ದಾರೆ.
ಶಿಸ್ತು ಕ್ರಮಕ್ಕೆ ಆಗ್ರಹ: ಇದರ ಬೆನ್ನಲ್ಲಿಯೇ ಬೆಳಗಾವಿಯ ಸುವರ್ಣ ಸೌಧದಲ್ಲಿ ಬುಧವಾರ ಕರೆಯಲಾಗಿದ್ದ ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ಸಭೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೆ.ಎಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಕೆಎಚ್‌ಎಂ ಉಚ್ಚಾಟನೆಗೆ ಶಾಸಕ ಒತ್ತಾಯ:
ಸಭೆಯಲ್ಲಿ ನೇರವಾಗಿ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಕೆಎಚ್‌ಎಂ ವಿರುದ್ಧ ದೂರುಗಳ ಸುರಿಮಳೆಗೈದರಲ್ಲದೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಶತಾಯಗತಾಯವಾಗಿ ಕಾಂಗ್ರೆಸ್ (Congress) ಅಭ್ಯರ್ಥಿಯನ್ನು ಸೋಲಿಸಬೇಕೆಂದು ಜಾತ್ಯಾತೀತ ಜನತಾದಳದ ಜೊತೆ ಕೈ ಜೋಡಿಸಿದ್ದಾರೆ. ಇದಲ್ಲದೆ ಕೋಲಾರ (Kolar) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಮ್ಮ ಬೆಂಬಲಿಗರು ಮತ ಚಲಾಯಿಸಬಾರದೆಂದು ಕೆಎಚ್‌ಎಂ ಸೂಚನೆ ನೀಡಿದ್ದಾರೆ. ಕೆಜಿಎಫ್ (KGF) ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರ ಪರಮಾಪ್ತರೇ ಆದ ಎನ್.ಆರ್.ವಿಜಯ್ ಕುಮಾರ್, ಆ.ಮು.ಲಕ್ಷ್ಮಿನಾರಾಯಣ್ ಅವರು ನೇರವಾಗಿ ಜೆಡಿಎಸ್ (JDS) ಅಭ್ಯರ್ಥಿಗೆ ವೋಟ್ ಹಾಕಿ ಎಂದು ಸೂಚನೆ ನೀಡಿರುವ ಆಡಿಯೋ, ವಿಡಿಯೋಗಳು ವೈರಲ್ ಆಗಿವೆ. ಇದಕ್ಕೆ ದಾಖಲೆಗಳು ಇವೆಯೆಂದು ಶಾಸಕ ನಾರಾಯಣ ಸ್ವಾಮಿ ಶಾಸಕಾಂಗ ಸಭೆಯಲ್ಲಿ ವಿವರಣೆ ನೀಡಿದರು ಎನ್ನಲಾಗಿದೆ.
ಶಾಸಕ ನಾರಾಯಣಸ್ವಾಮಿ ಶಾಸಕಾಂಗ ಸಭೆಯಲ್ಲಿ ದೂರು ನೀಡಿದ ವೇಳೆ ಕೆಜಿಎಫ್ (KGF) ಶಾಸಕಿ ರೂಪಕಲಾ, ಮಾಲೂರು ಶಾಸಕ ನಂಜೇಗೌಡ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ಹಾಜರಿದ್ದರು ಎನ್ನಲಾಗಿದೆ.
ಸೋಲಿನ ದ್ವೇಷದಿಂದ ಪಕ್ಷ ವಿರೋಧಿ ಚಟುವಟಿಕೆ:
ಬಿಜೆಪಿ ಮತ್ತು ಜೆಡಿಎಸ್‌ನವರು ಹಣದ ಹೊಳೆ ಮತ್ತು ನಮ್ಮ ಪಕ್ಷದವರಿಂದಲೇ ಬೆನ್ನಿಗೆ ಚೂರಿ ಹಾಕು ಪ್ರಯತ್ನಗಳ ನಡುವೆಯೂ ಎರಡೂ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಮಾಜಿ ಶಾಸಕರಾದ ಚಿಂತಾಮಣಿಯ ಸುಧಾಕರ್ (Sudhakar) ಮತ್ತು ಮುಳಬಾಗಲಿನ ಕೊತ್ತೂರು ಮಂಜುನಾಥ್ ನೆರವಿನಿಂದ ಅನಿಲ್ ಕುಮಾರ್ ಅವರನ್ನು ಗೆಲ್ಲಿಸಿಕೊಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರ ಬಗ್ಗೆ ಸಾರ್ವಜನಿಕವಾಗಿ ಇದ್ದ ಅಸಮಾಧಾನದ ಕಾರಣ ಸೋತರು. ಅದನ್ನೇ ದ್ವೇಷವಾಗಿ ತೆಗೆದುಕೊಂಡು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳು ನಡೆಸಿದ್ದಾರೆ. ಈ ಮಧ್ಯೆಯೂ ಅನಿಲ್ ಕುಮಾರ್ ಅವರನ್ನು ನಾವು ಗೆಲ್ಲಿಸಿಕೊಂಡಿದ್ದೇವೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನಷ್ಟುಶಕ್ತಿಯುತವಾಗಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಪಕ್ಷ ವಿರೋಧಿಗಳ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಸಮಾಧಾನ
ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ಎಸ್.ಎನ್.ನಾರಾಯಣಸ್ವಾಮಿ ಆವೇಷಭರಿತವಾಗಿ ದೂರುಗಳನ್ನು ಹೇಳುತ್ತಿದ್ದಾಗ ಮಧ್ಯ ಪ್ರವೇಶ ಮಾಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಈಗ ಆ ವಿಚಾರ ಬೇಡ ವಿಧಾನ ಮಂಡಲದಲ್ಲಿ ಸರ್ಕಾರದ ವಿರುದ್ಧ ನಮ್ಮ ಕಾರ್ಯತಂತ್ರಗಳ ಕುರಿತು ಚರ್ಚಿಸಬೇಕಾಗಿದೆ. ಚುನಾವಣೆ ಫಲಿತಾಂಶ ಕುರಿತು ಕೆಪಿಸಿಸಿ ಅಧ್ಯಕ್ಷರು ಪ್ರತ್ಯೇಕವಾಗಿ ಸಭೆ ಕರೆಯುತ್ತಾರೆ. ಆಗ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳೋಣ ಅಲ್ಲಿಯತನಕ ಸುಮ್ಮನಿರಪ್ಪ ಎಂದು ನಾರಾಯಣಸ್ವಾಮಿಯನ್ನು ಸಮಾಧಾನಪಡಿಸಿದರು ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮೂವರು ಪಕ್ಷದ ಕಾರ್ಯಾಧ್ಯಕ್ಷರು ಉಪಸ್ಥಿತರಿದ್ದರು ಎನ್ನಲಾಗಿದೆ.