ಅಜ್ಜಿಗೆ ಕಾರು ಗುದ್ದಿ ರಾಜಕೀಯ ದರ್ಪ ತೋರಿದ ಕಾಂಗ್ರೆಸ್ ಮುಖಂಡ; ಜನರೇ ನಾಲ್ಕು ಇಕ್ಕೋವಷ್ಟರಲ್ಲಿ ಪೊಲೀಸರು ಬಂದ್ರು!

Published : Jan 26, 2026, 07:38 PM IST
Kolar Congress Leader Muniraju

ಸಾರಾಂಶ

ಕೋಲಾರದಲ್ಲಿ ಕಾಂಗ್ರೆಸ್ ಮುಖಂಡ ಮುನಿರಾಜು ಅವರ ಕಾರು ವೃದ್ಧೆಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದೆ. ಅಪಘಾತದ ನಂತರ, ಸಹಾಯ ಮಾಡುವ ಬದಲು ಮುಖಂಡ ಮತ್ತು ಅವರ ಬೆಂಬಲಿಗರು ಸಾರ್ವಜನಿಕರ ಮೇಲೆ ದರ್ಪ ತೋರಿದ್ದು, ಇದರಿಂದ ಕುಪಿತಗೊಂಡ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.

ಕೋಲಾರ (ಜ.24): ಕೋಲಾರ ಜಿಲ್ಲಾ ಕೇಂದ್ರದ ಸಾರಿಗೆ ಇಲಾಖಾ ಕಚೇರಿ (ಆರ್‌ಟಿಓ) ಬಳಿ ವೇಗವಾಗಿ ಬಂದ ಕಾರೊಂದು ಪಾದಾಚಾರಿ ವೃದ್ದೆಗೆ ಡಿಕ್ಕಿ ಹೊಡೆದಿದ್ದು, ಘಟನೆಯ ನಂತರ ಕಾಂಗ್ರೆಸ್ ಮುಖಂಡ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು ಬೆಂಬಲಿಗರು ಸ್ಥಳೀಯ ಜನರ ಮೇಲೆ ದರ್ಪ ಪ್ರದರ್ಶಿಸಿದ ಘಟನೆ ನಡೆದಿದೆ. ನಂತರ, ಜನರೆಲ್ಲರೂ ಸೇರಿ ಮುನಿರಾಜು ಹಾಗೂ ಬೆಂಬಲಿಗರಿಗೆ ಮೈಚಳಿ ಬಿಡಿಸಿ ಕಳಿಸಿದ್ದಾರೆ.

ಘಟನೆಯ ವಿವರ:

ಬಂಗಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮುನಿರಾಜು ಅವರಿಗೆ ಸೇರಿದ ಕಾರು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೃದ್ದೆಯ ಒಂದು ಕಾಲು ಮುರಿದಿದ್ದು, ತಲೆ ಹಾಗೂ ಮೈಕೈಗೆ ಗಂಭೀರ ಗಾಯಗಳಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ವೃದ್ದೆಯ ಕಡೆಯವರು ಕಾರನ್ನು ತಡೆದು ನಿಲ್ಲಿಸಿದ್ದಾರೆ.

ಮಾನವೀಯತೆ ಮರೆತ ಮುಖಂಡನ ದರ್ಪ

ಅಪಘಾತದಿಂದ ತೀವ್ರ ನೋವಿನಲ್ಲಿದ್ದ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸುವ ಬದಲು, ಪ್ರಶ್ನಿಸಲು ಬಂದ ವೃದ್ದೆಯ ಕಡೆಯವರ ಮೇಲೆ ಮುನಿರಾಜು ಹಾಗೂ ಅವರ ಬೆಂಬಲಿಗರು ವಾಗ್ವಾದಕ್ಕಿಳಿದಿದ್ದಾರೆ. ಅಧಿಕಾರದ ಮದದಲ್ಲಿ ಸಾರ್ವಜನಿಕರ ಮೇಲೆ ದರ್ಪ ಪ್ರದರ್ಶಿಸಿದ ಮುಖಂಡ ಮುನಿರಾಜು, ಪ್ರಶ್ನೆ ಮಾಡಿದ ಜನರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 'ತಪ್ಪು ಮಾಡಿದ್ದರೂ ಕ್ಷಮೆ ಕೇಳುವ ಬದಲು ಅಧಿಕಾರ ತೋರಿಸುತ್ತಿದ್ದಾರೆ' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ದಾಖಲು:

ಗಂಭೀರವಾಗಿ ಗಾಯಗೊಂಡಿರುವ ವೃದ್ದೆಯನ್ನು ತಕ್ಷಣವೇ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆಡಳಿತ ಪಕ್ಷದ ಮುಖಂಡನ ಈ ನಡೆ ಈಗ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

PREV
Read more Articles on
click me!

Recommended Stories

ಕನಕಪುರದಲ್ಲಿ ಕನಕೋತ್ಸವ: ಡಿಕೆ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿ, ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೋಕ್, ಕೇಂದ್ರ ಸಚಿವರಿಗೆ ಡಿಕೆಶಿ ಸವಾಲು
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕೇರಳದಲ್ಲಿ ಬಂಧನ!