ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕೇರಳದಲ್ಲಿ ಬಂಧನ!

Published : Jan 26, 2026, 07:19 PM IST
Rajeev Gowda Arresh Amrutha Gowda Happy

ಸಾರಾಂಶ

ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಪ್ರಾಣ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಚಿಕ್ಕಬಳ್ಳಾಪುರ ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ಬ್ಯಾನರ್ ತೆರವುಗೊಳಿಸಿದ್ದಕ್ಕೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ ಈ ಪ್ರಕರಣದಲ್ಲಿ 12 ದಿನ ಬಳಿಕ ಬಂಧನವಾಗಿದೆ.

ಚಿಕ್ಕಬಳ್ಳಾಪುರ (ಜ.26): ಶಿಡ್ಲಘಟ್ಟ ಪಟ್ಟಣದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮಗ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಪೋಸ್ಟರ್ ಅನ್ನು ರಸ್ತೆಗೆ ಅಡ್ಡಲಾಗಿ ಕಟ್ಟಿದ್ದರಿಂದ ತೆರವುಗೊಳಿಸಿದ್ದ ಪೌರಾಯುಕ್ತೆ ಅಮೃತಾ ಗವಡ ಅವರಿಗೆ ನಿಮಗೆ ರಸ್ತೆಯಲ್ಲೇ ಬೆಂಕಿ ಹಚ್ಚಿ ಸುಟ್ಟು ಹಾಕ್ತೀನಿ ಎಂದು ಪ್ರಾಣ ಬೆದರಿಕೆ ಹಾಗೂ ಇತರೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡನನ್ನು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ಹಲವು ದಿನಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಇದೀಗ ಸಿಕ್ಕಿಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಎಂಎಲ್‌ಎ ಕ್ಯಾಂಡಿಡೇಟ್ ಆಗಿದ್ದ ರಾಜೀವ್ ಗೌಡ, ಅಧಿಕಾರ ದರ್ಪ ಮತ್ತು ರಾಜಕಾರಣದ ಶಕ್ತಿಯನ್ನು ಬಳಸಿಕೊಂಡು ಕೆಎಎಸ್ ಶ್ರೇಣಿಯ ಅಧಿಕಾರಿ ಆಗಿರುವ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅವ್ಯಾಚ್ಯ ಪದಗಳಿಂದ ನಿಂದನೆ ಮಾಡಿದ್ದರು. ಒಬ್ಬ ಹಿರಿಯ ಅಧಿಕಾರಿ ಎಂಬುದನ್ನೂ ನೋಡದೇ ಕೇವಲ ಬ್ಯಾನರ್ ತೆರವು ಮಾಡಿದ ವಿಚಾರಕ್ಕೆ ಪ್ರಾಣ ಬೆದರಿಕೆಯನ್ನೂ ಹಾಕಿದ್ದರು. ಇದಾದ ನಂತರ ತನ್ನ ತಪ್ಪಿನ ಅರಿವಾದರೂ ಪೌರಾಯುಕ್ತೆ ಮೇಲೆ ಹಲವು ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದರು. ಇತ್ತ ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ ವಿರುದ್ಧ ಪ್ರತಿಭಟನೆಗಳು ಶುರುವಾದರು. ಆಗ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನೊಂದಿಗೆ ನೇರ ಸಂಪರ್ಕದಲ್ಲಿ ಮಾತನಾಡಿದ್ದ ರಾಜೀವ್‌ ಗೌಡ, ಪೌರಾಯಕ್ತೆ ಅಮೃತಾ ಗೌಡ ಅವರಿಗೆ ಕ್ಷಮೆ ಕೇಳಿದ್ದರು.

ರಾಜೀವ್ ಗೌಡ ವಿರುದ್ಧ 2 ಕೇಸ್

ರಾಜಕೀಯ ದರ್ಪ ತೋರುವವರಿಗೆ ಬುದ್ಧಿ ಕಲಿಸಬೇಕಾದರೆ ಕಾನೂನು ಕ್ರಮ ಆಗಲೇಬೇಕು ಎಂಬ ನಿಟ್ಟಿನಲ್ಲಿ ಮಹಿಳಾ ಅಧಿಕಾರಿ ಬೆಂಬಲಕ್ಕೆ ನಿಂತಿದ್ದ ಸುವರ್ಣ ನ್ಯೂಸ್ ಪೊಲೀಸ್ ಠಾಣೆಗೆ ದೂರು ನೀಡಲು ಬೆಂಬಲ ನೀಡಿತ್ತು. ಆಗ ಅಮೃತಾ ಗೌಡ ಅವರು ಸ್ಥಳೀಯ ಪುರಸಭೆಯ ಸಹೋದ್ಯೋಗಿಗಳೊಂದಿಗೆ ಚರ್ಚೆ ಮಾಡಿ ದೂರು ದಾಖಲಿಸಿದ್ದರು. ಒಟ್ಟಾರೆ, ರಾಜೀವ್ ಗೌಡ ವಿರುದ್ಧ ಎರಡು ದೂರುಗಳು ದಾಖಲಾಗಿದ್ದವು. ಈ ಎರಡೂ ದೂರುಗಳು ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ತಲೆಮರೆಸಿಕೊಂಡಿದ್ದನು. ಪೊಲೀಸರ ಕೈಗೆ ಸಿಗದೇ ಕೋರ್ಟ್‌ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಎರಡು ಬಾರಿಯೂ ಜಾಮೀನು ಅರ್ಜಿಗಳನ್ನು ಕೋರ್ಟ್ ರದ್ದುಗೊಳಿಸಿತ್ತು.

ಇದರ ಬೆನ್ನಲ್ಲಿಯೇ ತಾನು ಅರೆಸ್ಟ್‌ ಆಗುತ್ತೇನೆ ಎಂಬ ಭಯದಿಂದ ರಾಜೀವ್ ಗೌಡ ರಾಜ್ಯದ ಗಡಿಯನ್ನು ದಾಟಿ ಹೊರಭಾಗದಲ್ಲಿಯೇ ಸುತ್ತಾಡುತ್ತಿದ್ದನು. ಜಾಮೀನಿ ಅರ್ಜಿಗಳು ತಿರಸ್ಕೃತಗೊಳ್ಳುತ್ತಿದ್ದಂತೆ ರಾಜೀವ್ ಗೌಡ ಅವರ ಕುಟುಂಬದ ಎಲ್ಲರ ಮೊಬೈಲ್‌ ಫೋನುಗಳು ಸ್ವಿಚ್ ಆಫ್ ಆಗಿದ್ದವು. ಇಂದು ಮಂಗಳೂರಿನಲ್ಲಿ ರಾಜೀವ್ ಗೌಡ ಇರುವ ಸುಳಿವು ಪಡೆದು ತೆರಳಿದ್ದ ಚಿಕ್ಕಬಳ್ಳಾಪುರ ಪೊಲೀಸರು ತನ್ನನ್ನು ಬಂಧಿಸಲು ಬರುತ್ತಿದ್ದಾರೆ ಎಂಬ ಸುಳಿವು ರಾಜೀವ್ ಗೌಡನಿಗೆ ಸಿಕ್ಕಿದೆ.

ಚಿಕ್ಕಬಳ್ಳಾಪುರಕ್ಕೆ ಕರೆತರುತ್ತಿರುವ ಪೊಲೀಸರು

ಕೂಡಲೇ ಕಾರನ್ನು ಕೇರಳ ಗಡಿಯಲ್ಲಿ ಬಿಟ್ಟು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ ರಾಜೀವ್ ಗೌಡ ಯಾವ ಕಡೆಗೆ ಹೋಗಿದ್ದಾರೆ ಎಂಬುದನ್ನು ಹುಡುಕಲು ಪ್ರಯತ್ನಿಸಿದರಾದರೂ ರೈಲ್ವೆ ಸ್ಟೇಷನ್ ಸಿಸಿಟಿವಿ ಸಮಸ್ಯೆಯಿಂದ ವಿಫಲಗೊಂಡಿತ್ತು. ಆದರೆ, ಬಂಧನದ ಪ್ರಯತ್ನ ಬಿಡದೇ ಮೂರು ತಂಡಗಳಾಗಿ ಕೇರಳ, ಗೋವಾ ಕಡೆಗೆ ಹೋಗುವ ರೈಲುಗಳನ್ನು ಬೆನ್ನಟ್ಟಿದ ಪೊಲೀಸರು ಕೇರಳ ಗಡಿಯಲ್ಲಿ ರಾಜೀವ್‌ ಗೌಡನನ್ನು ಬಂಧಿಸಿದ್ದಾರೆ. ಇದೀಗ ಚಿಕ್ಕಬಳ್ಳಾಪುರಕ್ಕೆ ರಾಜೀವ್‌ಗೌಡನನ್ನು ಕರೆತರುತ್ತಿದ್ದಾರೆ.

ಪೌರಾಯುಕ್ತೆ ಅಮೃತಾ ಗೌಡ ಹೇಳಿದ್ದೇನು?

ಕಳೆದ 12 ದಿನಗಳ ಕಾಲ ರಾಜೀವ್ ಗೌಡ ಅವರು ತಲೆಮರೆಸಿಕೊಂಡಿದ್ದರು. ಪೊಲೀಸರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರೂ, ಸಿಗದೇ ತಪ್ಪಿಸಿಕೊಂಡಿದ್ದು ಇದೀಗ ಅದರಲ್ಲಿ ಯಶಸ್ವಿ ಆಗಿದ್ದಾರೆ. ಅವರ ಬಂಧನ ಆಗುತ್ತದೆ ಎಂಬ ನಂಬಿಕೆ ನನಗಿತ್ತು. ಒಂದೆರಡು ದಿನ ತಡವಾಗಬಹುದು ಎಂದೆನಿಸಿತ್ತು. ಪೊಲೀಸ್ ಇಲಾಖೆಗೆ ನಮ್ಮದೊಂದೇ ಕೇಸ್ ಇರುವುದಿಲ್ಲ. ಬೇರೆ ಬೇರೆ ಕೇಸುಗಳೂ ಇರುತ್ತವೆ. ಅವರೂ ಕೂಡ ನಿದ್ದೆಗಟ್ಟು ತುಂಬಾ ಎಫರ್ಟ್ ಹಾಕಿ ಕೆಲಸ ಮಾಡಿದ್ದರ ಫಲವೇ ಇದೀಗ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ನಡೆದಾಗ ನನಗೆ ನೈತಿಕವಾಗಿ ಬೆಂಬಲಕ್ಕೆ ಬಂದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ. ಇಂತಹ ಪರಿಸ್ಥಿತಿಗಳು ಯಾವ ಮಹಿಳಾ ಅಧಿಕಾರಿಗೂ ಆಗಬಾರದು, ಒಂದು ವೇಳೆ ಬೆದರಿಕೆ ಬಂದರೆ ಕಾನೂನು ಕ್ರಮಕ್ಕೆ ದೂರು ನೀಡಬೇಕು ಎಂದು ತಿಳಿಸಿದರು.

PREV
Read more Articles on
click me!

Recommended Stories

ವಿಜಯಪುರ: ಗಣರಾಜ್ಯೋತ್ಸ ವ ದಿನದಂದೇ ಚಿನ್ನದಂಗಡಿ ಲೂಟಿ, ಸಿನಿಮೀಯ ಶೈಲಿಯಲ್ಲಿ ಕಂಟ್ರಿ ಪಿಸ್ತೂಲ್ ತೋರಿಸಿ ದರೋಡೆ!
ರೆಸ್ಟೋರೆಂಟ್‌ಗಳ ಜೊತೆ ಡೀಲ್‌: ಬಂಬಲ್ ಟಿಂಡರ್‌ ಅಲ್ಲಿ ಸಿಕ್ಕ ಹುಡುಗಿರ ಕರ್ಕೊಂಡು ಹೋಟೆಲ್‌ಗೆ ಹೋದ್ರೆ ಗೋವಿಂದ