ಕಳೆನಾಶಕ ಸಿಂಪಡನೆ ವೇಳೆ ಆಕಸ್ಮಿಕವಾಗಿ ದೇಹದೊಳಗೆ ವಿಷ ಸೇರಿಕೊಂಡ ಪರಿಣಾಮ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದಾಂಡೇಲಿಯ ಉಪವಲಯ ಅರಣ್ಯಾಧಿಕಾರಿ ದಾರುಣ ಸಾವು ಕಂಡಿದ್ದಾರೆ.
ಉತ್ತರ ಕನ್ನಡ (ಜು.8): ಕಳೆನಾಶಕ ಸಿಂಪಡನೆ ವೇಳೆ ಆಕಸ್ಮಿಕವಾಗಿ ದೇಹದೊಳಗೆ ಸೇರಿಕೊಂಡ ಪರಿಣಾಮ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದಾಂಡೇಲಿ ತಾಲ್ಲೂಕಿನ ಕುಳಗಿ ಉಪವಲಯ ಅರಣ್ಯಾಧಿಕಾರಿ ಯೋಗೇಶ್ ನಾಯ್ಕ(33) ಚಿಕಿತ್ಸೆ ಫಲಕಾರಿಯಾಗದೇ ಜು.7ರಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಯೋಗೇಶ್ ಅವರನ್ನು ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಮೂಲತಃ ಕುಮಟಾ ತಾಲ್ಲೂಕಿನ ಬಾಡ ಗ್ರಾಮದವರಾದ ಯೋಗೇಶ್ ನಾಯ್ಕ, ದಾಂಡೇಲಿಯಲ್ಲೇ ವಾಸವಾಗಿದ್ದರು. ವಿರ್ನೋಲಿ ಅರಣ್ಯ ವಲಯದ ಕುಳಗಿ ಶಾಖೆಯಲ್ಲಿ ಸಾಗುವಾನಿ ಸಸಿ ಮಡಿಯ ಕಳೆಗಳನ್ನು ನಾಶಪಡಿಸಲು ತಮ್ಮ ಸಹೋದ್ಯೋಗಿಗಳೊಂದಿಗೆ ತಾವೂ ಸಹ ಕೀಟನಾಶಕವನ್ನು ಸಿಂಪಡಿಸಿದ್ದರು.
undefined
ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶೀಘ್ರವೇ ಮುಟ್ಟಿನ ರಜೆ, ಸಿಎಂ ಪ್ರತಿಕ್ರಿಯೆ
ಇದಾದ ನಂತರ ಯೋಗೇಶ್ ನಾಯ್ಕ ಅವರು ಕೈಯನ್ನು ಸರಿಯಾಗಿ ಸ್ವಚ್ಚಗೊಳಿಸದೇ ನೀರು ಹಾಗೂ ಆಹಾರ ಸೇವಿಸಿದ್ದರು ಎನ್ನಲಾಗಿದೆ. ಪರಿಣಾಮ ಮರುದಿನ ಯೋಗೇಶ್ ನಾಯ್ಕ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅನಾರೋಗ್ಯ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆಯೇ ಯೋಗೇಶ್ ನಾಯ್ಕ ಅವರನ್ನು ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಚೇತರಿಸಿಕೊಳ್ಳದ ಹಿನ್ನೆಲೆ ಕಳೆದೆರಡು ದಿನಗಳಿಂದ ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಶಾಲಾ ವಾಹನಕ್ಕೆ ಬಲಿಯಾದ ಮೂರು ವರ್ಷದ ಪುಟ್ಟ ಕಂದಮ್ಮ!
ಆದರೆ, ಅಂಗಾಂಗ ವೈಫಲ್ಯದಿಂದ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯೋಗೇಶ್ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರ ಪತ್ನಿ ದಾಂಡೇಲಿ ಅರಣ್ಯ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ಎರಡೂವರೆ ವರ್ಷದ ಪುಟ್ಟ ಮಗನಿದ್ದಾನೆ. ಒಬ್ಬ ನಿಷ್ಠಾವಂತ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಯೋಗೇಶ್ ಅವರ ಸಾವಿನ ವಿಷಯ ತಿಳಿಯುತ್ತಿದ್ದಂತೇ ಆಸ್ಪತ್ರೆಗೆ ಅರಣ್ಯ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇಂದು ಮೃತರ ಹುಟ್ಟೂರಿನಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.