
ಒಂದು ಕಾಲದಲ್ಲಿ ಜೀವನ ನಿರ್ವಹಣೆಗಾಗಿ ಹಲವು ಕಡೆ ಕೆಲಸ ಮಾಡಿದ್ದ ಮಹಿಳೆ, ಇಂದು ಸ್ವಂತ ಉದ್ಯಮದ ಮೂಲಕ ಗುರುತಿಸಿಕೊಂಡಿದ್ದಾರೆ. ಕೈಯಲ್ಲಿ ಹೆಚ್ಚು ಹಣವಿಲ್ಲ, ಸ್ವಂತ ಜಮೀನು ಕೂಡ ಇಲ್ಲ ಎನ್ನುವ ಕಾರಣಕ್ಕೆ ಅನೇಕರು ಉದ್ಯಮ ಆರಂಭಿಸುವ ಕನಸನ್ನೇ ಕೈಬಿಡುತ್ತಾರೆ. ಆದರೆ ಕೊಡಗಿನ ಉಷಾ ಅವರು ಇಂತಹ ಎಲ್ಲ ಅಡೆತಡೆಗಳನ್ನು ಮೀರಿ ಜೇನು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಕೇವಲ 10 ಸಾವಿರ ರೂಪಾಯಿ ಆರಂಭಿಕ ಬಂಡವಾಳದೊಂದಿಗೆ ಶುರುವಾದ ಇವರ ಉದ್ಯಮ ಇಂದು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಮೂರು ರಾಜ್ಯಗಳಿಗೆ ವಿಸ್ತರಿಸಿದೆ.
ಸುಮಾರು 10 ವರ್ಷಗಳ ಹಿಂದೆ ಉಷಾ ಅವರು ಜೇನು ಕೃಷಿ ಆರಂಭಿಸುವ ನಿರ್ಧಾರ ಮಾಡಿದ್ದರು. ಆರಂಭದಲ್ಲಿ ಅವರ ಬಳಿ ದೊಡ್ಡ ಮೊತ್ತದ ಬಂಡವಾಳ ಇರಲಿಲ್ಲ. ಹೀಗಾಗಿ ಕೇವಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿ ಒಂದೆರಡು ಜೇನು ಪೆಟ್ಟಿಗೆಗಳೊಂದಿಗೆ ಕೆಲಸ ಶುರು ಮಾಡಿದರು. ಕನ್ಯಾಕುಮಾರಿಯಲ್ಲಿದ್ದ ಸಂಬಂಧಿಕರೊಬ್ಬರು ಜೇನು ಕೃಷಿಯ ಬಗ್ಗೆ ಮಾಹಿತಿ ನೀಡಿದ್ದರು. ಅವರಿಂದ ಸುಮಾರು 500 ಪೆಟ್ಟಿಗೆಗಳನ್ನು ಸಾಲವಾಗಿ ಪಡೆದು ಉದ್ಯಮವನ್ನು ವಿಸ್ತರಿಸುವ ಪ್ರಯತ್ನ ಮಾಡಿದರು.
ನಂತರ ಎರಡು ತಿಂಗಳು ಕನ್ಯಾಕುಮಾರಿಯಲ್ಲಿ ಉಳಿದು ಪ್ರಾಯೋಗಿಕವಾಗಿ ಜೇನು ಸಾಕಣೆ ಕಲಿತರು. ಪೊನ್ನಂಪೇಟೆಯಲ್ಲಿಯೂ ತರಬೇತಿ ಪಡೆದುಕೊಂಡರು. ಉದ್ಯಮ ಬೆಳೆಸಲು PMEGP ಯೋಜನೆಯಡಿ 10 ಲಕ್ಷ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿ, ಸುಮಾರು 6.5 ಲಕ್ಷ ರೂಪಾಯಿ ಸಾಲವನ್ನೂ ಪಡೆದರು. ಸಂಘಗಳಿಂದ ಸಾಲ ಪಡೆದು ಬಂದ ಆದಾಯವನ್ನೇ ಮತ್ತೆ ಉದ್ಯಮದಲ್ಲಿ ಹೂಡಿಕೆ ಮಾಡುತ್ತಾ ಹೋದರು.
ಇಂದು ಉಷಾ ಅವರ ಬಳಿ ಸುಮಾರು 11 ಸಾವಿರಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳಿವೆ. ಕೊಡಗು, ಗುಂಡ್ಲುಪೇಟೆ, ಕೇರಳ ಮತ್ತು ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಜೇನು ಸಾಕಣೆ ಮಾಡುತ್ತಿದ್ದಾರೆ. ತುಡುವೆ ಜೇನು, ಮುಜಂಟಿ ಜೇನು ಸೇರಿದಂತೆ ವಿವಿಧ ತಳಿಯ ಜೇನುಹುಳಗಳನ್ನು ಸಾಕುತ್ತಿದ್ದಾರೆ. ಇವರ ಉದ್ಯಮದ ವಿಶೇಷವೆಂದರೆ ಒಂದೇ ಸ್ಥಳದಲ್ಲಿ ಪೆಟ್ಟಿಗೆಗಳನ್ನು ಇಟ್ಟುಕೊಂಡು ಜೇನು ಉತ್ಪಾದನೆ ಮಾಡುವುದಿಲ್ಲ. ಹೂವಿನ ಲಭ್ಯತೆ ಮತ್ತು ಹವಾಮಾನಕ್ಕೆ ಅನುಗುಣವಾಗಿ ಜೇನು ಪೆಟ್ಟಿಗೆಗಳನ್ನು ಸ್ಥಳಾಂತರಿಸುತ್ತಾರೆ. ಕೊಡಗಿನಲ್ಲಿ ಹೂವುಗಳ ಸೀಸನ್ ಮುಗಿದ ಬಳಿಕ ಗುಂಡ್ಲುಪೇಟೆ ಭಾಗಕ್ಕೆ, ಅಲ್ಲಿಂದ ಕೇರಳದ ವಿವಿಧ ಪ್ರದೇಶಗಳಿಗೆ ಪೆಟ್ಟಿಗೆಗಳನ್ನು ಸಾಗಿಸುತ್ತಾರೆ.
ಒಂದು ತುಡುವೆ ಜೇನು ಪೆಟ್ಟಿಗೆಯಿಂದ ವರ್ಷಕ್ಕೆ ಸುಮಾರು 8ರಿಂದ 10 ಕೆ.ಜಿ. ಜೇನುತುಪ್ಪ ಸಂಗ್ರಹಿಸುವ ಅವಕಾಶವಿದೆ. ಆದರೆ ಇದು ಒಂದೇ ಬಾರಿ ಸಿಗುವುದಿಲ್ಲ. ಹೂವುಗಳ ಲಭ್ಯತೆ ಮತ್ತು ಜೇನು ಕುಟುಂಬದ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಜೇನುತುಪ್ಪದ ಜೊತೆಗೆ ಜೇನುಹುಳಗಳಿರುವ ಪೆಟ್ಟಿಗೆ, ವ್ಯಾಕ್ಸ್ ಮತ್ತು ಫ್ರೇಮ್‌ಗಳ ಮಾರಾಟದಿಂದಲೂ ಆದಾಯ ಗಳಿಸುತ್ತಿದ್ದಾರೆ.
ಉಷಾ ಅವರ ಪ್ರಕಾರ, ಮೂರು ರಾಜ್ಯಗಳಲ್ಲಿನ ಜೇನು ಕೃಷಿ ಉದ್ಯಮದಿಂದ ವರ್ಷಕ್ಕೆ 50 ಲಕ್ಷ ರೂಪಾಯಿಗೂ ಅಧಿಕ ವಹಿವಾಟು ನಡೆಯುತ್ತದೆ. ಇದರಲ್ಲಿ ಕಾರ್ಮಿಕರ ವೇತನ, ಜೇನುಹುಳಗಳಿಗೆ ಆಹಾರ, ಸಾಗಣೆ ಸೇರಿದಂತೆ ಹಲವು ಖರ್ಚುಗಳಿವೆ. ಪ್ರಸ್ತುತ ಇವರ ಉದ್ಯಮದಲ್ಲಿ ಆರು ಮಂದಿ ಕೆಲಸ ಮಾಡುತ್ತಿದ್ದಾರೆ. ಜೇನು ಕೊಯ್ಲಿನ ಸಮಯದಲ್ಲಿ ಈ ಸಂಖ್ಯೆ 10ಕ್ಕೂ ಹೆಚ್ಚಾಗುತ್ತದೆ. ಜೇನು ಪೆಟ್ಟಿಗೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಕೂಡ ಸುಲಭದ ಕೆಲಸವಲ್ಲ. ರಾತ್ರಿ 7 ಗಂಟೆಯ ನಂತರವೇ ಪೆಟ್ಟಿಗೆಗಳನ್ನು ಸ್ಥಳಾಂತರಿಸಬೇಕು. ಏಕೆಂದರೆ ರಾತ್ರಿ ವೇಳೆ ಜೇನುಹುಳಗಳು ಗೂಡಿನೊಳಗೆ ಸೇರಿರುತ್ತವೆ. ಹೀಗಾಗಿ ಕೆಲವೊಮ್ಮೆ ನಿದ್ದೆಯನ್ನೂ ಬಿಟ್ಟು ತೋಟಗಳಲ್ಲಿಯೇ ರಾತ್ರಿ ಕಳೆಯಬೇಕಾಗುತ್ತದೆ.
ಜೇನು ಕೃಷಿ ಆರಂಭಿಸಲು ದೊಡ್ಡ ಜಮೀನು ಅಥವಾ ಭಾರಿ ಬಂಡವಾಳದ ಅಗತ್ಯವಿಲ್ಲ ಎನ್ನುವುದು ಉಷಾ ಅವರ ಮಾತು. ಮನೆಯ ಸುತ್ತಮುತ್ತಲಿನ ಜಾಗದಲ್ಲಿಯೂ ಕೆಲವು ಪೆಟ್ಟಿಗೆಗಳನ್ನು ಇಟ್ಟುಕೊಂಡು ಆರಂಭಿಸಬಹುದು. ವಾರಕ್ಕೊಮ್ಮೆ ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸುವುದು, ರಾಣಿ ಜೇನುಹುಳಿನ ಆರೋಗ್ಯ ಗಮನಿಸುವುದು, ಜೇನು ಕುಟುಂಬದ ಬೆಳವಣಿಗೆಯನ್ನು ಪರಿಶೀಲಿಸುವುದು ಮುಖ್ಯ. ಇಂದು ಉಷಾ ಅವರು ಜೇನು ಕೃಷಿಯ ಬಗ್ಗೆ ಆಸಕ್ತಿ ಇರುವ ರೈತರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಜೇನು ಪೆಟ್ಟಿಗೆಗಳು, ಜೇನುಹುಳಗಳು, ವ್ಯಾಕ್ಸ್, ಫ್ರೇಮ್‌ಗಳು ಹಾಗೂ ಸಾಕಣೆ ಕುರಿತ ಮಾರ್ಗದರ್ಶನವನ್ನು ಒದಗಿಸುತ್ತಿದ್ದಾರೆ.