
ಪುನರುಜ್ಜೀವನದ ಪ್ರಯತ್ನಗಳ ನಡುವೆ, ಹಿಂದೂಸ್ತಾನ್ ಮೆಷಿನ್ ಟೂಲ್ಸ್ ವಾಚ್ಗಳಿಗೆ ಮತ್ತೆ ಭಾರಿ ಆಸಕ್ತಿ ವ್ಯಕ್ತವಾಗಿದ್ದು, ಸಂಸ್ಥೆಯ ಸಮೀಕ್ಷೆಯ ಪ್ರಕಾರ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ವಾಚ್ಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ದುಡಿಯುವ ಬಂಡವಾಳದ ಕೊರತೆಯಿಂದಾಗಿ, ಎಚ್ಎಂಟಿ ಸಂಸ್ಥೆಯು ಪ್ರಸ್ತುತ ತಿಂಗಳಿಗೆ ಕೇವಲ 10,000 ವಾಚ್ಗಳನ್ನು ಮಾತ್ರ ಜೋಡಿಸಲು ಶಕ್ತವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಂಸ್ಥೆಯು ತನ್ನ ಪ್ರಸ್ತುತ ಉತ್ಪಾದನಾ ಸಾಮರ್ಥ್ಯವನ್ನು 13,000 ವಾಚ್ಗಳಿಗೆ ಹೆಚ್ಚಿಸಲು ಮುಂದಾಗಿದೆ.
ಬೇಡಿಕೆ ಹೆಚ್ಚಿದ ನಿಟ್ಟಿನಲ್ಲಿ, ಉತ್ಪಾದನಾ ಸಾಮರ್ಥ್ಯವನ್ನು 25,000 ವಾಚ್ಗಳಿಗೆ ಏರಿಸಲು ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ. 2027ರ ಮಧ್ಯಭಾಗದ ವೇಳೆಗೆ ಮಾಸಿಕ ಬೇಡಿಕೆಯ ಕನಿಷ್ಠ ಅರ್ಧದಷ್ಟನ್ನಾದರೂ ಪೂರೈಸುವ ಗುರಿಯನ್ನು HMT ಹೊಂದಿದೆ. ಗ್ರಾಹಕರಿಂದ ಸಂಗ್ರಹಿಸಿದ ಅಭಿಪ್ರಾಯಗಳು ಮತ್ತು ನಿರೀಕ್ಷೆಗಳ ಆಧಾರದ ಮೇಲೆ HMT ವಿನ್ಯಾಸ ತಂಡವು ಮೂರು ಹೊಸ ವಿನ್ಯಾಸಗಳ ಮೇಲೆ ಕೆಲಸ ಮಾಡುತ್ತಿದೆ. ಇವು ಇನ್ನೂ ಪೂರ್ಣಗೊಳ್ಳಬೇಕಿದೆ ಮತ್ತು ಅಂತಿಮಗೊಳ್ಳಬೇಕಿದೆ.
ಹೊಸದಾಗಿ ಬಿಡುಗಡೆಯಾದ 'HMT ಕನ್ನಡಿಗ' ವಾಚ್ಗಳ ಮಾರಾಟವು ಸಂಸ್ಥೆಯ ನಿರೀಕ್ಷೆಗಳನ್ನು ಮೀರಿದೆ. ನವೆಂಬರ್ 2 ಮತ್ತು 3ರ ನಡುವೆ ಕೇವಲ ಎರಡು ದಿನಗಳಲ್ಲಿ 3,000ಕ್ಕೂ ಹೆಚ್ಚು ವಾಚ್ಗಳು ಮಾರಾಟವಾಗಿವೆ. ಇನ್ನೂ ಕೆಲವು ಸಾವಿರ ವಾಚ್ಗಳು ಉತ್ಪಾದನೆಯ ಹಂತದಲ್ಲಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. 'ಎಚ್ಎಂಟಿ ಕನ್ನಡಿಗ' ಸೀಮಿತ ಆವೃತ್ತಿಯ ವಾಚ್ ಆಗಿರುವುದರಿಂದ, ಒಂದು ಹಂತದ ನಂತರ ಇದರ ಉತ್ಪಾದನೆಯನ್ನು ನಿಲ್ಲಿಸಬೇಕಾಗಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನವೆಂಬರ್ 1ರಂದು ಈ ವಾಚ್ಗಳನ್ನು ಅನಾವರಣಗೊಳಿಸಿದ್ದರು. ಈ ವಾಚ್ಗಳು ಸನ್ಬರ್ಸ್ಟ್ ಡಯಲ್ ಮತ್ತು ಅಸಲಿ ಇಟಾಲಿಯನ್ ಲೆದರ್ ಸ್ಟ್ರಾಪ್ಗಳನ್ನು ಹೊಂದಿವೆ ಎಂದು ಎಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್. ರಮೇಶ್ ಕುಮಾರ್ ತಿಳಿಸಿದ್ದಾರೆ. ಹೊಸ ವಾಚ್ಗಳ ಜೊತೆಗೆ ಸೋನಾ ಮತ್ತು ಸ್ಟೆಲ್ಲಾರ್ ಸರಣಿಯಂತಹ ಹಳೆಯ ಬ್ರಾಂಡ್ಗಳಿಗೂ ಉತ್ತಮ ಮಾರಾಟ ಕಂಡುಬರುತ್ತಿದೆ.
ವಾಚ್ ಪ್ರಿಯರಲ್ಲಿ 'HMT ರೋಮನ್' ವಾಚ್ ಕೂಡ ಭಾರಿ ಸದ್ದು ಮಾಡಿದೆ. ಆದರೆ, ಇದರ ಕೇಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಬೇರೆ ತಯಾರಕರಿಂದ ತರಿಸಿಕೊಳ್ಳಲಾಗಿದ್ದರಿಂದ, ಸದ್ಯಕ್ಕೆ ಈ ವಾಚ್ ಮರು-ಸಂಗ್ರಹ ಆಗುವ ಸಾಧ್ಯತೆ ಕಡಿಮೆ ಇದ್ದು, ಮತ್ತೆ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ವಲಯದ ಉದ್ಯಮವಾದ HMT, ಮಾರುಕಟ್ಟೆಯಲ್ಲಿ ತನ್ನ ವಾಚ್ಗಳಿಗೆ ಎಷ್ಟು ಬೇಡಿಕೆಯಿದೆ ಎಂಬುದನ್ನು ತಿಳಿಯಲು ಅಧಿಕೃತವಾಗಿ ಬೇಡಿಕೆ ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆಯ ವರದಿಯಿಂದಲೇ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ವಾಚ್ಗಳ ಬೇಡಿಕೆ ಇರುವುದು ದೃಢಪಟ್ಟಿದೆ. ಕೇವಲ ಹಳೆಯ ಶೈಲಿಗೆ ಸೀಮಿತವಾಗದೆ, ಇಂದಿನ ಗ್ರಾಹಕರ ನಾಡಿಮಿಡಿತ ಮತ್ತು ಅವರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಂಸ್ಥೆ ಪ್ರಯತ್ನಿಸುತ್ತಿದೆ. ಗ್ರಾಹಕರಿಂದ ಸಂಗ್ರಹಿಸಿದ ಅಭಿಪ್ರಾಯಗಳ ಆಧಾರದ ಮೇಲೆಯೇ ಎಚ್ಎಂಟಿ ಆಂತರಿಕ ವಿನ್ಯಾಸ ತಂಡವು ಹೊಸ ವಾಚ್ಗಳನ್ನು ರೂಪಿಸುತ್ತಿದೆ.