ಬೆಂಗಳೂರಿನ ಐಷಾರಾಮಿ ಸಂಕೀರ್ಣ ಯುಬಿ ಸಿಟಿಯ 21 ಸ್ವತ್ತುಗಳಿಂದ ₹2.65 ಕೋಟಿ ತೆರಿಗೆ ವಸೂಲಿ

Published : Nov 20, 2026, 09:17 AM IST
UB City

ಸಾರಾಂಶ

ಐಷಾರಾಮಿ ಸಂಕೀರ್ಣಗಳಲ್ಲಿ ಒಂದಾಗಿರುವ ಯುಬಿ ಸಿಟಿಯಲ್ಲಿ ಬಾಕಿ ಉಳಿದಿದ್ದ ಆಸ್ತಿ ತೆರಿಗೆಯನ್ನು ವಸೂಲಿ ಮಾಡುವಲ್ಲಿ ಕೇಂದ್ರ ನಗರ ಪಾಲಿಕೆ ಮಹತ್ವದ ಪ್ರಗತಿ ಸಾಧಿಸಿದೆ. ಸಂಕೀರ್ಣಕ್ಕೆ ಸೇರಿದ 21 ಸ್ವತ್ತುಗಳಿಂದ ಒಟ್ಟು ₹2.65 ಕೋಟಿ ತೆರಿಗೆ ಮೊತ್ತವನ್ನು ವಸೂಲಿ ಮಾಡಲಾಗಿದೆ

ಬೆಂಗಳೂರು: ನಗರದ ಪ್ರತಿಷ್ಠಿತ ಯು.ಬಿ.ಸಿಟಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ 21 ಸ್ವತ್ತುಗಳಿಂದ 2.65 ಕೋಟಿ ರು. ತೆರಿಗೆಯನ್ನು ಕೇಂದ್ರ ನಗರ ಪಾಲಿಕೆ ವಸೂಲಿ ಮಾಡಿದೆ.

ಸ್ವತ್ತಿನ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ಇರುವ ಹಿನ್ನೆಲೆಯಲ್ಲಿ ಯು.ಬಿ. ಸಿಟಿಯ ಒಡೆತನ ಹೊಂದಿದ್ದ ಯುನೈಟೆಡ್ ಬ್ರೀವರೀಸ್ ಹೋಲ್ಡಿಂಗ್ ಲಿಮಿಟೆಡ್‌ಗೆ ಕರ್ನಾಟಕ ಹೈಕೋರ್ಟ್‌ ನೇಮಿಸಿರುವ ಕಂಪನಿ ಸಮಾಪನಾಧಿಕಾರಿಯವರು (ಆಫೀಷಿಯಲ್ ಲಿಕ್ವಿಡೇಟರ್) 2.65 ಕೋಟಿ ರು.ಯ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಅವರಿಗೆ ಹಸ್ತಾಂತರಿಸಿದರು.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಗುರುತಿಸಿ, ಬಾಕಿದಾರರಿಗೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸುವಂತೆ ಹಾಗೂ ಬಾಕಿ ತೆರಿಗೆಯನ್ನು ಆದ್ಯತೆಯ ಮೇರೆಗೆ ವಸೂಲಿ ಮಾಡುವಂತೆ ಆದೇಶ ನೀಡಲಾಗಿದೆ. ಅದರಂತೆ ಬಾಕಿ ತೆರಿಗೆ ವಸೂಲಾತಿ ಕಾರ್ಯವನ್ನು ಚುರುಕುಗೊಳಿಸಿದ್ದು, ಬಾಕಿದಾರರಿಗೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸುವುದರ ಜೊತೆಗೆ ತೆರಿಗೆ ವಸೂಲಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆಸ್ತಿ ಮಾಲೀಕರು ಕೂಡಲೇ ತಮ್ಮ ಬಾಕಿ ತೆರಿಗೆ ಮೊತ್ತವನ್ನು ಪಾವತಿಸಬೇಕು. ವಿಳಂಬ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತ ಜಿ.ಜಗದೀಶ್ ತಿಳಿಸಿದ್ದಾರೆ.

ಕೇಂದ್ರ ಪಾಲಿಕೆಯಿಂದ 273 ಅನಧಿಕೃತ ಬ್ಯಾನರ್ ತೆರವು

ಬೆಂಗಳೂರು: ವಾರ್ಡ್ ಒನ್ ಅಭಿಯಾನದಡಿ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ 273 ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಜಿ. ಜಗದೀಶ್ ತಿಳಿಸಿದ್ದಾರೆ.

ಥಣಿಸಂದ್ರದಲ್ಲಿ ಅಕ್ರಮ ಮದರಸಾ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: ಬೆಂಗಳೂರಿನ ಥಣಿಸಂದ್ರದಲ್ಲಿ ಅಕ್ರಮವಾಗಿ ನಡೆಯುತ್ತಿದೆ ಎನ್ನಲಾದ ಜಾಮಿಯಾ ಮೊಹಮ್ಮದೀಯಾ ಮನ್ಸೂರಾ ರೆಸಿಡೆನ್ಸಿಯಲ್ ಸ್ಕೂಲ್ (ಮದರಸಾ) ಹಾಗೂ ಸಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಕೋರಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ವಿಚಾರವಾಗಿ ಬೆಂಗಳೂರಿನ ಪಾದರಾಯನಪುರ ನಿವಾಸಿ ಚಾಂದ್ ಪಾಷಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಅವರ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರ, ಶಿಕ್ಷಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಅಲ್ ಜಾಮೀಯಾ ಎಜುಕೇಷನಲ್ ಸೊಸೈಟಿಗೆ ನೋಟಿಸ್ ಜಾರಿಗೊಳಿಸಿತು.

ತಾನು ಮಹಾರಾಷ್ಟ್ರ ಸೊಸೈಟಿಗಳ ನೋಂದಣಿ ಕಾಯ್ದೆ-1979ರಡಿ ನೋಂದಣಿ ಆಗಿರುವುದಾಗಿ ಅಲ್ ಜಾಮಿಯಾ ಮಹ್ಮದೀಯ ಸೊಸೈಟಿ ಹೇಳುತ್ತಿದೆ. ಆದರೆ, ಅಂತಹ ಯಾವುದೇ ದಾಖಲೆಗಳು ಲಭ್ಯವಿಲ್ಲ. ನೋಂದಣಿ ಇಲ್ಲದೆಯೇ ಈ ಸಂಸ್ಥೆ, ಬೆಂಗಳೂರಿನ ಥಣಿಸಂದ್ರದಲ್ಲಿ ಮದರಸಾ ಮತ್ತು ಶಾಲೆ ನಡೆಸುತ್ತಿದೆ. ಶಿಕ್ಷಣ ಇಲಾಖೆಯು 2025ರ ಮೇ 30ರಂದು ಮಾನ್ಯತೆ ರದ್ದುಪಡಿಸಿದ್ದು, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ಆದರೆ, ಈ ಶಾಲೆಗೆ ಸರ್ಕಾರದಿಂದ 5 ಲಕ್ಷ ರು.ಅನುದಾನ ಬಿಡುಗಡೆಯಾಗಿದೆ. ಇಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರ ಸೇರಿ ಉತ್ತರ ಭಾರತದ ವಲಸೆ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಈ ಮದರಸಾ ಮತ್ತು ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

PREV
Read more Articles on
click me!

Recommended Stories

ಮತ್ತೆ ಶುರುವಾಯ್ತು HMT ಕ್ರೇಜ್: ‘ಕನ್ನಡಿಗ’ ವಾಚ್‌ಗೆ ಭಾರಿ ಡಿಮ್ಯಾಂಡ್, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೈಕೋರ್ಟಲ್ಲಿ ಬುರುಡೆ ಗ್ಯಾಂಗ್‌ಗೆ ಹಿನ್ನಡೆ, ಮುಂದೇನು?