ಜಿಲ್ಲೆಯ ವ್ಯಾಪಾರ ವಹಿವಾಟುಗಳು ಬಹುತೇಕ ಪ್ರವಾಸಿಗರನ್ನೇ ಅವಲಂಬಿಸಿವೆ. ಆದರೆ ಮಳೆಗಾಲ ಆರಂಭವಾದ ಜೂನ್ ತಿಂಗಳಿನಿಂದ ಇದುವರೆಗೆ ಕೊಡಗಿನ ಪ್ರವಾಸೋದ್ಯಮಕ್ಕೆ ಪೆಟ್ಟುಬಿದ್ದಿತ್ತು. ಆದರೆ ಮಳೆಯ ತೀವ್ರತೆ ಕಡಿಮೆ ಆಗಿರುವುದರಿಂದ ಇದೀಗ ಪ್ರವಾಸೋದ್ಯಮ ಒಂದಿಷ್ಟು ಚೇತರಿಸಿಕೊಳ್ಳುತ್ತಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.16): ಜಿಲ್ಲೆಯ ವ್ಯಾಪಾರ ವಹಿವಾಟುಗಳು ಬಹುತೇಕ ಪ್ರವಾಸಿಗರನ್ನೇ ಅವಲಂಬಿಸಿವೆ. ಆದರೆ ಮಳೆಗಾಲ ಆರಂಭವಾದ ಜೂನ್ ತಿಂಗಳಿನಿಂದ ಇದುವರೆಗೆ ಕೊಡಗಿನ ಪ್ರವಾಸೋದ್ಯಮಕ್ಕೆ ಪೆಟ್ಟುಬಿದ್ದಿತ್ತು. ಆದರೆ ಮಳೆಯ ತೀವ್ರತೆ ಕಡಿಮೆ ಆಗಿರುವುದರಿಂದ ಇದೀಗ ಪ್ರವಾಸೋದ್ಯಮ ಒಂದಿಷ್ಟು ಚೇತರಿಸಿಕೊಳ್ಳುತ್ತಿದೆ. ಕೊಡಗಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇದೀಗ ಜಿಲ್ಲೆಯತ್ತ ಮುಖ ಮಾಡಿದ್ದಾರೆ. ಹೀಗಾಗಿಯೇ ಕೊಡಗಿನ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಹೊಸ ಕಳೆಪಡೆದಿವೆ. ವಿಪರ್ಯಾಸವೆಂದರೆ ಪ್ರವಾಸಿಗರ ಹಾಟ್ ಸ್ಪಾಟ್ ಎಂದೆ ಪ್ರಸಿದ್ಧಿಯಾಗಿರುವ ಮಂಜಿನನಗರಿ ಮಡಿಕೇರಿಯಲ್ಲಿ ಇರುವ ರಾಜಾಸೀಟ್ ಕಳೆಗುಂದಿದೆ.
ಹೌದು ಸಂಜೆಯಾದರೂ ಕೂಡ ಪ್ರವಾಸಿಗರನ್ನು ಸಾಕಷ್ಟು ಸೆಳೆಯುತ್ತಿದ್ದ ಕಾರಂಜಿ ಸ್ಥಗಿತಗೊಂಡ ಮೂರು ತಿಂಗಳಾಗಿದೆ. ಆದರೆ ಇದುವರೆಗೆ ಅದನ್ನು ಸರಿಪಡಿಸುವ ಕೆಲಸಕ್ಕೆ ತೋಟಗಾರಿಕೆ ಇಲಾಖೆ ಮನಸ್ಸು ಮಾಡಿಲ್ಲ. ಇದು ಪ್ರವಾಸಿಗರಿಗೆ ಸಾಕಷ್ಟು ನಿರಾಸೆ ಮೂಡಿಸಿದೆ. ಆಗಾಗ ಸುರಿಯುವ ತುಂತುರು ಮಳೆ, ಬೆಟ್ಟಗಳ ಸಾಲಿನಲ್ಲಿ ಇರುವ ಉದ್ಯಾನವನ, ಈ ಬೆಟ್ಟಗಳ ಸಾಲಿನಲ್ಲಿ ಓಡಾಡಿ ಧಣಿದು ಬಂದರೆ ಸಂಜೆ ಆರುವರೆ ಗಂಟೆಯಿಂದ ಚಿಮ್ಮುತ್ತಿದ್ದ ಕಾರಂಜಿ ಎಲ್ಲಾ ಪ್ರವಾಸಿಗರ ಮೈಮನಗಳನ್ನು ತಣಿಸುತಿತ್ತು. ಕೊಡಗಿನ ವಾಲಗದೊಂದಿಗೆ ಬಣ್ಣ ಬಣ್ಣದ ಓಕುಳಿಯೊಂದಿಗೆ ಚಿಮ್ಮುತ್ತಿದ್ದ ಕಾರಂಜಿಯನ್ನು ನೋಡಿ ಪ್ರವಾಸಿಗರು ಫುಲ್ ಎಂಜಾಯ್ ಮಾಡುತ್ತಿದ್ದರು.
ಶಾಸಕ ಮುನಿರತ್ನ ರಾಜೀನಾಮೆಗೆ ಆಗ್ರಹಿಸಿ ಎಎಪಿ ಪ್ರತಿಭಟನೆ: ಕೂಡಲೇ ಪಕ್ಷದಿಂದ ಅಮಾನತ್ತು ಮಾಡಬೇಕೆಂದು ಆಗ್ರಹ
ಆದರೆ ಈಗ ಅದಕ್ಕೆ ಅವಕಾಶವೇ ಇಲ್ಲ. ಸಂಜೆ ಆರುವರೆ ಎನ್ನುವಷ್ಟರಲ್ಲಿ ಕತ್ತಲೆ ಅವರಿಸಿಕೊಳ್ಳಲು ಆರಂಭವಾಗುವುದರಿಂದ ಪ್ರವಾಸಿಗರು ರಾಜಾಸೀಟಿನಿಂದ ಹೊರ ನಡೆಯುತ್ತಾರೆ. ಅಲ್ಲಿನ ಎಲ್ಲವೂ ಮುಗಿಯಿತು ಎನ್ನುವಂತೆ ಆಗಿದೆ ಎಂದು ಪ್ರವಾಸಿ ಶೀತಲ್ ಹೇಳಿದ್ದಾರೆ. ಇದು ಪ್ರವಾಸಿಗರಿಗೆ ನಿರಾಸೆಯನ್ನು ಮೂಡಿಸಿದ್ದರೆ ಮಡಿಕೇರಿ ನಗರದ ವ್ಯಾಪಾರ ವಹಿವಾಟುಗಳಿಗೂ ಒಂದಿಷ್ಟು ಪೆಟ್ಟು ನೀಡಿದೆ. ಹೌದು ಮಡಿಕೇರಿ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಸಂಜೆವರೆಗೂ ವೀಕ್ಷಿಸುತ್ತಿದ್ದ ಪ್ರವಾಸಿಗರು ಸಂಜೆ ಸಮಯಕ್ಕೆ ರಾಜಾಸೀಟಿಗೆ ಬರುತ್ತಿದ್ದರು.
ಸಂಜೆ ಆರುವರೆಯವರೆಗೆ ರಾಜಾಸೀಟಿನಲ್ಲಿ ಓಡಾಡಿ ಆರುವರೆಯಿಂದ ಏಳುವರೆಯ ತನಕ ರಾಜಾಸೀಟಿನಲ್ಲಿ ಚಿಮ್ಮುವ ಕಾರಂಜಿಯನ್ನು ನೋಡಿ ಎಂಜಾಯ್ ಮಾಡುತ್ತಿದ್ದರು. ಬಳಿಕ ಮಡಿಕೇರಿ ನಗರದಲ್ಲಿ ಪ್ರವಾಸಿಗರು ಸುತ್ತಾಡುತ್ತಿದ್ದರಿಂದ ಮಡಿಕೇರಿಯಲ್ಲಿ ವ್ಯಾಪಾರ ವಹಿವಾಟು ರಾತ್ರಿ ಎಂಟುವರೆಯ ತನಕವೂ ನಡೆಯುತ್ತಿದ್ದವು. ಆದರೀಗ ಸಂಜೆ ಆರುವರೆಗೆ ರಾಜಾಸೀಟಿನಿಂದ ಹೊರಗೆ ಬರುವ ಪ್ರವಾಸಿಗರು ಬಳಿಕ ಏಳುವರೆಯವರೆಗೆ ಮಡಿಕೇರಿ ನಗರದಲ್ಲಿ ಸುತ್ತಾಡಿದರೆ ಅಲ್ಲಿಗೆ ಮುಗಿಯಿತು. ಮಡಿಕೇರಿ ನಗರ ಸ್ತಬ್ಧವಾಗಿಬಿಡುತ್ತದೆ ಎನ್ನುವಂತಾಗಿದೆ. ಇದು ಮಡಿಕೇರಿ ನಗರದ ವ್ಯಾಪಾರಿಗಳಿಗೂ ನಷ್ಟ ಉಂಟು ಮಾಡುತ್ತಿದೆ. ಆದ್ದರಿಂದ ಆದಷ್ಟು ಶೀಘ್ರವೇ ರಾಜಾಸೀಟಿನಲ್ಲಿ ಇರುವ ಕಾರಂಜಿಯನ್ನು ದುರಸ್ಥಿಗೊಳಿಸಬೇಕು ಎಂದು ಪ್ರವಾಸೋದ್ಯಮವನ್ನು ಅವಲಂಭಿಸಿರುವ ವ್ಯಾಪಾರೋದ್ಯಮಿ ಆಗಿರುವ ಮಧು ಅವರು ಆಗ್ರಹಿಸುತ್ತಿದ್ದಾರೆ.
ರಾಹುಲ್ ಗಾಂಧಿಯದ್ದು ಮಾನವ ಜಾತಿ: ಸಚಿವ ವೆಂಕಟೇಶ್
ಕಾರಂಜಿಯಷ್ಟೇ ಅಲ್ಲ, ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಮಳೆ ಇದ್ದಿದ್ದರಿಂದ ರಾಜಾಸೀಟು ಉದ್ಯಾನವನದಲ್ಲಿ ಹೂವುಗಳೇ ಇಲ್ಲ. ಇದು ಕೂಡ ಪ್ರವಾಸಿಗರಿಗೆ ಒಂದಿಷ್ಟು ನಿರಾಸೆ ಮೂಡಿಸಿದೆ. ಇದು ಒಂದೆಡೆಯಾದರೆ ರಾಜಾಸೀಟಿನಲ್ಲಿರುವ ಮಕ್ಕಳ ಪುಟಾಣಿ ರೈಲು ಕೂಡ ಮೂಲೆ ಗುಂಪಾಗಿ ಹಲವು ವರ್ಷಗಳೇ ಕಳೆದಿವೆ. ಅದು ಕೂಡ ರಾಜಾಸೀಟಿಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಕಡಿಮೆ ಮಾಡಿದೆ. ಒಟ್ಟಿನಲ್ಲಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕೊಡಗಿನ ಪ್ರವಾಸೋದ್ಯಮಕ್ಕೆ ಶಕ್ತಿ ತುಂಬುವ ಕೆಲಸವನ್ನು ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಪ್ರಯತ್ನಿಸಬೇಕಾಗಿದೆ.