ಬಿಜೆಪಿ ಶಾಸಕ ಮುನಿರತ್ನ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ವರದಿ: ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಸೆ.16): ಜಾತಿನಿಂದನೆ ಮತ್ತು ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಂಧಿಸಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಮಹಿಳಾ, ದಲಿತ ವಿರೋಧಿ ಶಾಸಕನನ್ನು ಕಿತ್ತೊಗೆಯಿರಿ, ಮುನಿರತ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಫಲಕಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಮೋಹನ್ ದಾಸರಿ ಅವರು, ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ?
ದಲಿತ ಸಮುದಾಯದವರ ಬಳಿ ಬಿಜೆಪಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬಬೇಕು ಎಂದು ಒತ್ತಾಯಿಸಿದರು. ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿದಂತೆ ಮುನಿರತ್ನ ಹಾಗೂ ಅವರ ಆಪ್ತ ವಸಂತ ಕುಮಾರ್ ಅವರು ₹30 ಲಕ್ಷಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರು ದೂರು ನೀಡಿದ್ದಾರೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿನ ಮುನಿರತ್ನ ಅವರ ಮಾತುಗಳು ಕೇವಲ ಅವರೊಬ್ಬರ ವೈಯಕ್ತಿಕ ಹೇಳಿಕೆಯಲ್ಲ, ಸಮಸ್ತ ಬಿಜೆಪಿಗರ ಮನಸ್ಥಿತಿಯ ಪ್ರತಿರೂಪ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ವಾಸ್ತವದಲ್ಲಿ ದಲಿತರನ್ನು, ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಮುನಿರತ್ನ ಅವರು ಆಡಿರುವ ಮಾತುಗಳೇ ಸಾಕ್ಷಿ. ಗುತ್ತಿಗೆದಾರರೊಬ್ಬರಿಗೆ ಕಮಿಷನ್ ಕಿರುಕುಳ ನೀಡುತ್ತ, ಅವಾಚ್ಯವಾಗಿ ಅವರ ತಾಯಿಯನ್ನು ನಿಂದಿಸುತ್ತ ಕೊಲೆ ಬೆದರಿಕೆ ಒಡ್ಡಿರುವುದು ಆಘಾತಕಾರಿ ವಿಚಾರ. ಇಂತಹ ಜನಪ್ರತಿನಿಧಿಗಳಿದ್ದರೆ ಗುತ್ತಿಗೆದಾರರು, ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್, ವೈರಲ್ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ.
ರಾಹುಲ್ ಗಾಂಧಿಯದ್ದು ಮಾನವ ಜಾತಿ: ಸಚಿವ ವೆಂಕಟೇಶ್
ಗುತ್ತಿಗೆದಾರನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಂಥ ಭ್ರಷ್ಟ ಶಾಸಕನನ್ನು ಬಿಜೆಪಿಯು ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಆಪ್ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಸರ್ರಾವ್ ಮಾತನಾಡುತ್ತಾ, ತಾಯಿಯ ಬಗ್ಗೆ ಹೇಯವಾಗಿ ಮಾತನಾಡಿರುವ ಮುನಿರತ್ನ ಜನಪ್ರತಿನಿಧಿಯಾಗಿ ಮುಂದುವರಿಯಲು ಅನರ್ಹರು. ಬಿಜೆಪಿಯು ಮುನಿರತ್ನ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಮುನಿರತ್ನ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಪಕ್ಷದ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಸಿದ್ದು, ಮುಖಂಡರಾದ ಜಗದೀಶ ಬಾಬು, ಲೋಕೇಶ್, ಶಶಿಧರ್ ಆರಾಧ್ಯ, ಅನಿಲ್ ನಾಚಪ್ಪ, ಅನಿತಾ, ಶರಣ್ಯ, ಕಲೈ, ಮುನೀಂದ್ರ, ಶರವಣ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.