ಮುರಿದ ಸೇತುವೆ ಮೇಲೆ ಬ್ಯಾಲೆನ್ಸ್ ನಡಿಗೆ: ನಿತ್ಯ ಜೀವ ಕೈಯಲ್ಲಿಡಿದು ನಡೆಯುವ ವಿದ್ಯಾರ್ಥಿಗಳು

Published : Jul 12, 2025, 09:55 PM IST
bridge

ಸಾರಾಂಶ

ಏಳು ವರ್ಷಗಳ ಹಿಂದೆ ನುಗ್ಗಿದ ಪ್ರವಾಹ ಇದೀಗ ನೂರಾರು ಜನರು ನಿತ್ಯ ಜೀವ ಕೈಯಲ್ಲಿ ಹಿಡಿದು ಓಡಾಡುವಂತೆ ಆಗಿದೆ. ಜನರ ಸಂಕಷ್ಟ ಪರಿಹರಿಸುವ ಸೇತುವೆ ಜೀವಕ್ಕೆ ಕುತ್ತು ತಂದಿರುವುದಾದರೂ ಏಕೆ ಅಂತೀರಾ ಅದನ್ನು ನೀವೇ ಓದಿ.

ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.12): ನದಿ ಪಾತ್ರದ ಗ್ರಾಮಗಳ ಸಾವಿರಾರು ಜನರ ಓಡಾಟಕ್ಕೆ ಅಂತ ಕಳೆದ ಎರಡು ದಶಕಗಳ ಹಿಂದೆ ತೂಗು ಸೇತುವೆ ನಿರ್ಮಿಸಲಾಗಿತ್ತು. ಅಂದಿನಿಂದ ಜನರು ನಮ್ಮ ಸಂಕಷ್ಟಕ್ಕೊಂದು ಪರಿಹಾರ ಸಿಕ್ಕಿತು ಅಂತ ನೆಮ್ಮದಿಯಾಗಿದ್ರು. ಆದರೆ ಏಳು ವರ್ಷಗಳ ಹಿಂದೆ ನುಗ್ಗಿದ ಪ್ರವಾಹ ಇದೀಗ ನೂರಾರು ಜನರು ನಿತ್ಯ ಜೀವ ಕೈಯಲ್ಲಿ ಹಿಡಿದು ಓಡಾಡುವಂತೆ ಆಗಿದೆ. ಜನರ ಸಂಕಷ್ಟ ಪರಿಹರಿಸುವ ಸೇತುವೆ ಜೀವಕ್ಕೆ ಕುತ್ತು ತಂದಿರುವುದಾದರೂ ಏಕೆ ಅಂತೀರಾ ಅದನ್ನು ನೀವೇ ಓದಿ. ಆಗಲೋ ಈಗಲೋ ಮುರಿದು ಬೀಳುವ ಸ್ಥಿತಿಯಲ್ಲಿರುವ ತಂತಿಗಳು, ಮುರಿದು ತೇಲಿ ಹೋಗಿ ಮತ್ತೊಂದಿಷ್ಟು ನೇತಾಡುತ್ತಿರುವ ಕಂಬಿಗಳು.

ಇಡೀ ಸೇತುವೆಯೇ ಒಂದು ಕಡೆಗೆ ವಾಲಿದ್ದರೂ ಅದರಲ್ಲೇ ಓಡಾಡುತ್ತಿರುವ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು. ಹೌದು ತುಂಬಿ ಭೋರ್ಗರೆದು ಹರಿಯುತ್ತಿರುವ ನದಿಯ ಮೇಲೆ ಇಂತಹ ಅಪಾಯದ ಸೇತುವೆಯಲ್ಲಿ ಜನರು ಜೀವವನ್ನು ಕೈಯಲ್ಲಿ ಬಿಗಿಯಾಗಿ ಹಿಡಿದು ಜನರು ಓಡಾಡುತ್ತಿರುವ ದೃಶ್ಯಗಳು ಕಂಡುಬರುತ್ತಿರುವುದು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕಣಿವೆ ಗ್ರಾಮದಲ್ಲಿ. ಕೊಡಗು ಹಾಗೂ ಮೈಸೂರು ಜಿಲ್ಲೆಗಳನ್ನು ಇಬ್ಭಾಗ ಮಾಡಿ ಹರಿಯುವ ಕಾವೇರಿ ನದಿಯ ಎರಡು ಬದಿಗಳಲ್ಲಿ ಹಲವು ಗ್ರಾಮಗಳಿವೆ. ಇತ್ತ, ಕಣಿವೆ, ಕೂಡಿಗೆ, ಹುಲುಸೆ ಸೇರಿದಂತೆ ಹಲವಾರು ಗ್ರಾಮಗಳಿದ್ದರೆ, ಅತ್ತ ದೊಡ್ಡ ಕಮರಹಳ್ಳಿ, ಚಿಕ್ಕಕಣಗಾಲ್, ಸೂಳೆಕೋಟೆ ಸೇರಿದಂತೆ ಹಲವು ಗ್ರಾಮಗಳಿವೆ.

ಎರಡು ಬದಿಗಳ ಗ್ರಾಮಗಳ ಜನರ ಕೃಷಿ ಭೂಮಿಗಳು ಎರಡು ಬದಿಗಳಲ್ಲಿ ಇವೆ. ಅಷ್ಟೇ ಅಲ್ಲ ದೊಡ್ಡಕಮರಹಳ್ಳಿ ಸೂಳೆಕೋಟೆ ಚಿಕ್ಕಕಣಗಾಲಲು ಸೇರಿದಂತೆ ಹಲವು ಗ್ರಾಮಗಳ ಜನರು ಕೊಡಗು ಜಿಲ್ಲೆಯ ಕೂಡಿಗೆ, ಕೂಡುಮಂಗಳೂರುಗಳಲ್ಲಿ ಇರುವ ಹಲವು ಕೈಗಾರಿಕೆಗಳಲ್ಲಿ ಕೆಲಸ ಮಾಡಲು ನಿತ್ಯ ಬರುತ್ತಾರೆ. ಇನ್ನು ನೂರಾರು ವಿದ್ಯಾರ್ಥಿಗಳು ಕೂಡ ಕೊಡಗು ಜಿಲ್ಲೆಯ ಕೂಡಿಗೆ, ಕುಶಾಲನಗರಗಳ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಅವರೆಲ್ಲರೂ ಇದೇ ಸೇತುವೆ ಮೇಲೆ ಓಡಾಡಬೇಕಾಗಿದೆ. ವಿಪರ್ಯಾಸವೆಂದರೆ 2018 ರಲ್ಲಿ ಭೀಕರ ಪ್ರವಾಹ ಬಂದಾಗ ಸೇತುವೆ ಮೇಲಿನವರೆಗೂ ನೀರು ನುಗ್ಗಿ, ಸೇತುವೆ ಬಹುತೇಕ ಮುರಿದು ಹೋಗಿದೆ.

ಹಲವು ಕಡೆಗಳಲ್ಲಿ ಸೇತುವೆಯ ಕಂಬಿಗಳೇ ಮಾಯವಾಗಿದ್ದು, ಮತ್ತೆ ಎಷ್ಟೋ ಕಡೆಗಳಲ್ಲಿ ಸೇತುವೆಯ ಮೆಟ್ಟಿಲುಗಳ ಕೊಂಡಿಗಳೇ ಬಿಟ್ಟು ಹೋಗಿವೆ. ಇಷ್ಟೆಲ್ಲಾ ಇದ್ದರೂ ಬೇರೆ ದಾರಿಯಿಲ್ಲದೆ ಇದೇ ಸೇತುವೆ ಮೇಲೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ ಎನ್ನುತ್ತಾರೆ ದೊಡ್ಡಕಮರಹಳ್ಳಿಯ ನಿವಾಸಿ ಲೋಲಾಕ್ಷಿ ಮತ್ತು ನಾಗರಾಜ್. ಸೇತುವೆ ಮುರಿದು ಹೋಗಿ 7 ವರ್ಷಗಳೇ ಕಳೆದಿದ್ದರೂ ಎರಡು ಜಿಲ್ಲೆಗಳ ಶಾಸಕರಾಗಲಿ, ಸಚಿವರಾಗಲಿ ಇದನ್ನು ದುರಸ್ಥಿ ಮಾಡಿಸುವ ಗೋಜಿಗೆ ಹೋಗಿಲ್ಲ. ಮೂರು ವರ್ಷಗಳ ಹಿಂದೆ ಕೆಲವರು ಸೇತುವೆ ಮುರಿದು ಹೋಗಿರುವ ಕೆಲವೆಡೆಗಳಲ್ಲಿ ವೆಲ್ಡಿಂಗ್ ಮಾಡಿ ಹೇಗೋ ತಾತ್ಕಾಲಿಕ ರಿಪೇರಿ ಕೆಲಸ ಮಾಡಿದ್ದರು.

ಆದರೆ ನಿತ್ಯ ನೂರಾರು ಜನರು ಓಡಾಡುವುದರಿಂದ ಅದು ಮತ್ತೆ ಮುರಿದು ಹೋಗಿದ್ದು ಯಾವುದೇ ಕ್ಷಣದಲ್ಲಾದರೂ ಅಪಾಯ ಎದುರಾಗಬಹುದು ಎನ್ನುವ ಪರಿಸ್ಥಿತಿ ಇದೆ. ಈ ಕುರಿತು ಶಾಸಕರು, ಸಚಿವರುಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ಓಡಾಡುತ್ತಿದ್ದ ವೇಳೆ ಏನಾದರೂ ಅನಾಹುತ ಆದರೆ ಅದಕ್ಕೆ ಯಾರು ಹೊಣೆ ಎನ್ನುವುದೇ ಸ್ಥಳೀಯರಾದ ಮಾಜಿ ಸೈನಿಕ ಈರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಜನರ ಸಂಕಷ್ಟ ನಿವಾರಿಸಬೇಕಾಗಿದ್ದ ಸೇತುವೆ ಈಗ ಜನರ ಪ್ರಾಣಕ್ಕೆ ಕಂಟಕವಾಗಿದ್ದು, ಸಂಬಂಧಿಸಿದ ಜನ ಪ್ರತಿನಿಧಿಗಳು ಆದಷ್ಟು ಶೀಘ್ರವೇ ಇದನ್ನು ದುರಸ್ಥಿಪಡಿಸುತ್ತಾರಾ ಕಾದು ನೋಡಬೇಕಾಗಿದೆ.

PREV
Read more Articles on
click me!

Recommended Stories

ಪಾರಿವಾಳ ಪ್ರಿಯರಿಗೆ ಶಾಕ್: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದು ನಿಷೇಧ
ಕ್ರಿಸ್‌ಮಸ್ ರಜೆ ಮುಗಿಸಿ ಕೆಲಸಕ್ಕೆ ಬರುತ್ತಿದ್ದ ಟೆಕ್ಕಿ; ಕಾರು ಮರಕ್ಕೆ ಡಿಕ್ಕಿಯಾಗಿ ಅಪ್ಪ-ಮಗ ಸಾವು