
ತಿರುವನಂತಪುರಂ/ಬೆಂಗಳೂರು (ಏ.05): ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿರುವ ಬೆನ್ನಲ್ಲೇ, ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಬೆಂಗಳೂರಿನಿಂದ ಕೇರಳಕ್ಕೆ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 17.50 ಲಕ್ಷ ರೂಪಾಯಿ ಅಕ್ರಮ ಹಣವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕರ್ನಾಟಕ ಮೂಲದ ಯುವಕನೊಬ್ಬನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರಿನಿಂದ ತಿರುವನಂತಪುರಂನ ಕಳಕ್ಕೂಟ್ಟಂಗೆ ಹೊರಟಿದ್ದ ಖಾಸಗಿ ಬಸ್ಸನ್ನು ಅಮರವಿಳ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ ಮೇಲೆ ಸಂಶಯಗೊಂಡು ಪರಿಶೀಲಿಸಿದಾಗ, ಬ್ಯಾಗ್‌ನ ತುಂಬಾ 500 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಅಧಿಕಾರಿಗಳು ತಕ್ಷಣವೇ ಹಣವನ್ನು ಎಣಿಕೆ ಮಾಡಿದಾಗ ಅದು ಒಟ್ಟು 17.50 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
ಈ ಅಕ್ರಮ ಹಣ ಸಾಗಾಟದ ಆರೋಪದ ಮೇಲೆ ಕರ್ನಾಟಕ ಮೂಲದ 29 ವರ್ಷದ ನಾರಾಯಣ ಸ್ವಾಮಿ ಎಂಬುವವರನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತ ತನ್ನ ಬ್ಯಾಗ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಣವನ್ನು ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ. ಕಳಕ್ಕೂಟ್ಟಂ ತಲುಪಿದ ನಂತರ ಅಲ್ಲಿ ಒಬ್ಬ ವ್ಯಕ್ತಿ ಬಂದು ಈ ಹಣವನ್ನು ಪಡೆದುಕೊಳ್ಳುವುದಾಗಿ ತನಗೆ ತಿಳಿಸಲಾಗಿತ್ತು ಎಂದು ನಾರಾಯಣ ಸ್ವಾಮಿ ಪ್ರಾಥಮಿಕ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಆದರೆ, ಬೆಂಗಳೂರಿನಲ್ಲಿ ಈ ಹಣವನ್ನು ಕೊಟ್ಟವರು ಯಾರು? ಮತ್ತು ಕೇರಳದಲ್ಲಿ ಇದನ್ನು ಸ್ವೀಕರಿಸಬೇಕಾದವರು ಯಾರು ಎಂಬ ಬಗ್ಗೆ ಆತ ಯಾವುದೇ ಖಚಿತ ಮಾಹಿತಿ ನೀಡಿಲ್ಲ.
ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಚಟುವಟಿಕೆಗಳು ಆರಂಭವಾಗುತ್ತಿರುವುದರಿಂದ, ಈ ಹಣವನ್ನು ಮತದಾರರಿಗೆ ಹಂಚಲು ಅಥವಾ ಚುನಾವಣಾ ಅಕ್ರಮಗಳಿಗೆ ಬಳಸಲು ಸಾಗಿಸಲಾಗುತ್ತಿತ್ತೇ ಎಂಬ ಬಲವಾದ ಸಂಶಯ ವ್ಯಕ್ತವಾಗಿದೆ. ಕರ್ನಾಟಕದಿಂದ ಇಷ್ಟೊಂದು ದೊಡ್ಡ ಮೊತ್ತದ ಹಣ ಕೇರಳಕ್ಕೆ ರವಾನೆಯಾಗಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಹವಾಲಾ ಜಾಲದ ಮೂಲಕ ಈ ವ್ಯವಹಾರ ನಡೆದಿದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಅಬಕಾರಿ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ವಶಪಡಿಸಿಕೊಂಡ ಹಣಕ್ಕೆ ಯಾವುದೇ ದಾಖಲೆಗಳು ಇಲ್ಲದ ಕಾರಣ ಮತ್ತು ಇದು ಅಕ್ರಮ ಸಾಗಾಟವಾಗಿರುವುದರಿಂದ, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ನಾರಾಯಣ ಸ್ವಾಮಿಯನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಹಣದ ಮೂಲ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಕೇರಳದ ಗಡಿ ಭಾಗಗಳಲ್ಲಿ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಈಗ ನಿಗಾವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಅಂತರರಾಜ್ಯ ಬಸ್‌ಗಳು ಮತ್ತು ಖಾಸಗಿ ವಾಹನಗಳ ಮೇಲೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಬೆಂಗಳೂರಿನಂತಹ ಮೆಟ್ರೋ ನಗರಗಳಿಂದ ಹಣದ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹದ್ದಿನ ಕಣ್ಣು ಇಡಲಾಗಿದೆ. ಈ ಘಟನೆಯು ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಕರ್ನಾಟಕದಿಂದ ಕೇರಳಕ್ಕೆ ಹಣ ವರ್ಗಾವಣೆಯಾಗುತ್ತಿರುವ ಬಗ್ಗೆ ಕೇರಳದ ವಿರೋಧ ಪಕ್ಷಗಳು ಸರ್ಕಾರದ ಗಮನ ಸೆಳೆಯುತ್ತಿವೆ.