ಕೊಡಗು ಹಾಸ್ಟೆಲ್‌ನಲ್ಲಿ ಆಹಾರ ಚೋರಿ ವಾರ್ಡನ್‌, ಕಳವು ಸಾಬೀತಾದರೂ ಕ್ರಮ ಕೈಗೊಳ್ಳದ ಇಲಾಖೆ

Published : Jul 05, 2025, 07:48 PM IST
kodagu

ಸಾರಾಂಶ

ಕೊಡಗು ಜಿಲ್ಲೆಯ ಕುಶಾಲನಗರದ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್‌ನಲ್ಲಿ ವಾರ್ಡನ್ ಶಕುಂತಲ ಆಹಾರ ಪದಾರ್ಥಗಳನ್ನು ಕದ್ದು ಬೇರೆ ಹಾಸ್ಟೆಲ್‌ಗೆ ಸಾಗಿಸಿದ್ದಾರೆ. ಪೊಲೀಸರು ದಾಳಿ ನಡೆಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ವಾರ್ಡನ್ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಮನೆಗಳಿಗೆ ಕನ್ನ ಹಾಕಿ ನಗ, ನಾಣ್ಯ ದೋಚುವವರನ್ನು ನೀವು ಕೇಳಿರುತ್ತೀರಾ, ನೋಡಿರುತ್ತೀರಾ. ಆದರೆ ಇಲ್ಲಿ ಶಿಕ್ಷಣ ಪಡೆಯಲು ಬಂದ ನೂರಾರು ಬಡ ವಿದ್ಯಾರ್ಥಿಗಳ ಆಹಾರ ಪದಾರ್ಥಗಳನ್ನೇ ಹಾಸ್ಟೆಲ್ ವಾರ್ಡನ್ ದೋಚಿದ್ದಾಳೆ. ಹೌದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಲಕಿಯರ ಮೆಟ್ರಿಕ್ ನಂತರದ ಹಾಸ್ಟೆಲ್ ನ ವಾರ್ಡನ್ ಶಕುಂತಲ ಅವರು ವಿದ್ಯಾರ್ಥಿಗಳಿಗಾಗಿ ಇಲಾಖೆಯಿಂದ ನೀಡುತ್ತಿದ್ದ ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ಕದ್ದಿದ್ದಾರೆ. ಇಲ್ಲಿ ಆಹಾರ ಪದಾರ್ಥಗಳನ್ನು ಹಿಂದಿನಿಂದಲೂ ಅಪಾರ ಪ್ರಮಾಣದಲ್ಲಿ ಕದ್ದಿರುವ ವಿಷಯ ತಿಳಿದು ಅವರನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನರ್ಸಿಂಗ್ ಹಾಸ್ಟೆಲ್ಗೆ ವರ್ಗಾವಣೆ ಮಾಡಲಾಗಿತ್ತು.

ವರ್ಗಾವಣೆ ಆಗುವ ಸಂದರ್ಭ ಉಂಡು ಹೋದ, ಕೊಂಡು ಹೋದ ಎನ್ನುವ ಗಾದೆ ಮಾತಿನಂತೆ ತಾನು ಮೊದಲಿದ್ದ ಹಾಸ್ಟೆಲ್ ನಲ್ಲಿ ಕದ್ದಿದ್ದ ವಸ್ತುಗಳನೆಲ್ಲಾ ತಾನು ವರ್ಗಾವಣೆಗೊಂಡ ಹಾಸ್ಟೆಲ್ ಗೆ ಯಾರಿಗೂ ತಿಳಿಯದಂತೆ ಸಾಗಿಸಿ ಹಾಸ್ಟೆಲ್ ನ ಬಾತ್ ರೂಮಿನಲ್ಲಿ ಇರಿಸಿ ಬೀಗ ಹಾಕಿದ್ದಾರೆ. ಇದನ್ನು ತಿಳಿದ ಅಲ್ಲಿನ ಹಾಸ್ಟೆಲ್ ವಿದ್ಯಾರ್ಥಿಗಳು ಕೂಡ ಅದನ್ನು ಜನರ ಗಮನಕ್ಕೆ ತಂದಿದ್ದಾರೆ. ಸ್ಥಳೀಯರಾದ ಬಿ.ಡಿ. ಅಣ್ಣಯ್ಯ ಎಂಬುವವರು ಕುಶಾಲನಗರ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರೊಂದಿಗೆ ಹಾಸ್ಟೆಲ್ಗೆ ಹೋಗಿದ್ದಾರೆ. ಅಲ್ಲಿ ಹಾಸ್ಟೆಲ್ ನ ಬಾತ್ ರೂಂ ಒಂದಕ್ಕೆ ಹಾಕಿದ್ದ ಬೀಗವನ್ನು ತೆಗೆದು ನೋಡಿದಾಗ ಅದರಲ್ಲಿ 21 ಕೆ.ಜಿ. ರವೆ. 12 ಕೆ.ಜಿ. ಬಟಾಣಿ ಕಾಳು, 5 ಕೆ.ಜಿ. ಒಣಮೆಣಸು, 13 ಕೆ.ಜಿ. ಧನಿಯಾ ಪುಡಿ, 1 ಕೆ.ಜಿ. ಅರಿಶಿನ ಪುಡಿ ಜೊತೆಗೆ ಸಾಕಷ್ಟು ಬಕೆಟ್ ಮತ್ತಿತರ ವಸ್ತುಗಳನ್ನು ಕದ್ದು ಸಾಗಿಸಿ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.

ಇದನ್ನೆಲ್ಲಾ ಪೊಲೀಸರ ಸಮ್ಮುಖದಲ್ಲಿಯೇ ಕೂಡಲೇ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಕವಿತಾ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅವರು ಎಲ್ಲವನ್ನು ಪರಿಶೀಲಿಸಿ ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ಸಲ್ಲಿಸಿದ್ದಾರೆ. ವಿಪರ್ಯಾಸವೆಂದರೆ ಘಟನೆ ನಡೆದ ಮೂರು ನಾಲ್ಕು ದಿನಗಳಾದರೂ ಇಂದಿಗೂ ವಾರ್ಡನ್ ವಿರುದ್ಧ ಕ್ರಮವಾಗಿಲ್ಲ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರಾದ ಅಣ್ಣಯ್ಯ ಅವರು ಹಾಸ್ಟೆಲ್ಗಳಲ್ಲಿ ಹಗಲು ದರೋಡೆ ನಡೆಯುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಒಳ್ಳೆಯ ಆರೋಗ್ಯ, ಶಿಕ್ಷಣ ದೊರೆಯಲಿ ಎಂದು ಹಾಸ್ಟೆಲ್ಗಳನ್ನು ಮಾಡಿದರೆ, ವಾರ್ಡನ್ಗಳು ದೋಚುತ್ತಿದ್ದಾರೆ.

ಇದರ ವಿರುದ್ಧ ದೂರು ನೀಡಿದರೂ ಪ್ರಯೋಜನವಾಗಿಲ್ಲ. ವಾರ್ಡನ್ ಶಕುಂತಲ ವಿರುದ್ಧ ಸಾಕಷ್ಟು ಬಾರಿ ಇಂತಹ ಆರೋಪಗಳು ಕೇಳಿ ಬಂದ ನಂತರವೂ ಇಲಾಖೆಯ ತಾಲ್ಲೂಕು ಅಧಿಕಾರಿಯೊಬ್ಬರು ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಹಾಸ್ಟೆಲ್ಗಳ ಗುಣಮಟ್ಟ, ಸ್ವಚ್ಛತೆ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮ ವಹಿಸಲಿ ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಜಿಲ್ಲಾ ಪಂಚಾಯಿತಿ ಸಿಇಒ ಆನಂದ ಪ್ರಕಾಶ ಮೀನಾ ಅವರು ಒಂದು ಹಾಸ್ಟೆಲ್ನ ವಸ್ತುಗಳನ್ನು ಮತ್ತೊಂದು ಹಾಸ್ಟೆಲ್ ಗೆ ಅಕ್ರಮವಾಗಿ ಸಾಗಿಸಿರುವುದು ಸಾಬೀತಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದೇವೆ ಎಂದಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು: ಸೈಬರ್ ವಂಚನೆ ತಡೆಗೆ ಎಐ ಅಸ್ತ್ರ ಪ್ರಯೋಗ
ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?