ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆ: ಕಾಫಿಗೆ ಕೊಳೆ ರೋಗ, ನಷ್ಟದ ಆತಂಕ ಎದುರಿಸುತ್ತಿರುವ ಬೆಳೆಗಾರರು!

By Govindaraj S  |  First Published Nov 14, 2024, 9:01 PM IST

ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಈ ಬಾರಿ ಎತ್ತೇಚ್ಛ ಮಳೆ ಸುರಿದಿದೆ. ಅದರಲ್ಲೂ ಮೇ ತಿಂಗಳಾರ್ಧದಲ್ಲಿ ಆರಂಭವಾದ ಮಳೆ ಸೆಪ್ಟೆಂಬರ್ ಕೊನೆ ವಾರದವರೆಗೆ ಎಡಬಿಡದೆ ಸುರಿದಿತ್ತು.


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ನ.14): ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಈ ಬಾರಿ ಎತ್ತೇಚ್ಛ ಮಳೆ ಸುರಿದಿದೆ. ಅದರಲ್ಲೂ ಮೇ ತಿಂಗಳಾರ್ಧದಲ್ಲಿ ಆರಂಭವಾದ ಮಳೆ ಸೆಪ್ಟೆಂಬರ್ ಕೊನೆ ವಾರದವರೆಗೆ ಎಡಬಿಡದೆ ಸುರಿದಿತ್ತು. ಆದಾದ ಮೇಲೆಯೂ ಎರಡು ದಿನಗಳಿಗೆ, ಮೂರು ದಿನಗಳಿಗೆ ಒಮ್ಮೆಯಂತೆ ಮಳೆ ಸುರಿಯುತ್ತಲೇ ಇದೆ. ಇದರಿಂದಾಗಿ ಭೂಮಿಯಲ್ಲಿ ತೇವಾಂಶ ಜಾಸ್ತಿಯಾಗಿ ಕೊಡಗು ಜಿಲ್ಲೆಯಾದ್ಯಂತ ಕಾಫಿಗೆ ಕೊಳೆ ರೋಗ ಎದುರಾಗಿದೆ. ಕೊಳೆ ರೋಗದಿಂದ ಇಡೀ ಕಾಫಿ ಕೊಳೆತು ಉದುರುತ್ತಿದೆ. ಜಿಲ್ಲೆಯಲ್ಲಿ ಬೆಳೆಯುವ ಅರೇಬಿಕಾ ಮತ್ತು ರೊಬೋಸ್ಟಾ ಕಾಫಿ ಗಿಡದಲ್ಲಿಯೇ ಕರಗಿ ಸಂಪೂರ್ಣ ಕೊಳೆತು ಉದುರಿ ಹೋಗುತ್ತಿದೆ. 

Tap to resize

Latest Videos

undefined

ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯದೊಳಗೆ ಕೊಡಗು ಜಿಲ್ಲೆಯಲ್ಲಿ ಮಳೆ ಸಂಪೂರ್ಣ ನಿಂತು ಹೋಗುತಿತ್ತು. ಆದರೆ ಈ ಬಾರಿ ನವೆಂಬರ್ ತಿಂಗಳು ಅರ್ಧ ಮುಗಿದರೂ ಮಳೆ ಮಾತ್ರ ತಪ್ಪಿಲ್ಲ. ಕೆಲವು ಭಾಗಗಳಲ್ಲಿ ಅರೇಬಿಕಾ ಕಾಫಿ ಹಣ್ಣಾಗುತ್ತಿದ್ದು, ಮಳೆಯ ರಭಸಕ್ಕೆ ಹಣ್ಣು ಹೊಡೆದು ಹಾಳಾಗುತ್ತಿದೆ. ಮತ್ತೊಂದೆಡೆ ಹಣ್ಣಾಗದ ಕಾಫಿ ಕಾಯಿ ಕರಗಿ ನೆಲಕ್ಕೆ ಉದುರುತ್ತಿದೆ. ರೋಬಸ್ಟಾ ತಳಿಯ ಕಾಫಿಯಂತು ಹೇಳ ತೀರದು. ಅದು ಇನ್ನು ಬಲಿಯುವ ಹಂತ ತಲುಪಿದೆಯಾದರೂ ವಿಪರೀತ ಮಳೆಯಿಂದಾಗಿ ಎಲ್ಲವೂ ಕರಗಿ ನೆಲಕಚ್ಚುತ್ತಿದೆ. 

ಕುಡಿಯುವ ನೀರು ಯೋಜನೆ ನೀರುಪಾಲು: 5 ಕೋಟಿಗೂ ವೆಚ್ಚದ ಪೈಪ್‌ಲೈನ್ ವ್ಯರ್ಥ?

ಇದರಿಂದ ವರ್ಷವಿಡೀ ಔಷಧಿ ಗೊಬ್ಬರ, ಕಳೆ ತೆಗೆಯುವುದು, ಕಪಾತಿಂಗ್ ಮಾಡುವುದು ಸೇರಿದಂತೆ ಹತ್ತಾರು ಕೆಲಸಗಳನ್ನು ಮಾಡಿಸಿ ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆದಿದ್ದ ಬೆಳೆ ಬೆಳೆದಿದ್ದ ಬೆಳೆಗಾರರು ಸಾಲ ಹೊತ್ತುಕೊಳ್ಳುವ ಪರಿಸ್ಥಿತಿ ಬರಬಹುದೇನು ಎನ್ನುವ ಚಿಂತೆಗೀಡಾಗಿದ್ದಾರೆ. ಬೆಳೆ ಕೈ ಸೇರುವ ಸಂದರ್ಭದಲ್ಲಿ ವರುಣಾರ್ಭಟಕ್ಕೆ ಕಾಫಿ ಹಾಳಾಗುತ್ತಿರುವುದಕ್ಕೆ ಬೆಳೆಗಾರ ಕಂಗಾಲಾಗುವಂತೆ ಆಗಿದೆ. ಕಾಫಿ ಅಷ್ಟೇ ಅಲ್ಲ, ಕಾಫಿಯೊಂದಿಗೆ ಪರ್ಯಾಯ ಲಾಭ ತಂದುಕೊಡಬಲ್ಲ ಬೆಳೆ ಎಂದು ಬೆಳೆಯುವ ಕಾಳು ಮೆಣಸು ಕೂಡ ಇದೇ ರೀತಿಯಾಗಿ ಎಲ್ಲವೂ ನೆಲಕಚ್ಚುತ್ತಿದೆ. 

ಇದರಿಂದ ಕಾಫಿ ಬೆಳೆಗಾರರು ತೀವ್ರ ನಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ವಿಪರ್ಯಾಸವೆಂದರೆ ಮಳೆಯಿಂದ ಕಾಫಿ ಫಸಲು ಹಾಳಾಗುತ್ತಿದ್ದರೂ ಪರಿಹಾರವನ್ನೂ ಪಡೆಯಲು ಸಾಧ್ಯವಾಗದಂತಹ ಸ್ಥಿತಿ ಇದೆ. ಎನ್ಡಿಆರ್ಎಫ್ ನಿಯಮಗಳ ಪ್ರಕಾರ ಶೇ 60 ಬೆಳೆ ಹಾಳಾಗಿದ್ದರೆ ಮಾತ್ರವೇ ಕಾಫಿ ಮಂಡಳಿ ಪರಿಹಾರ ನೀಡಲು ಸಾಧ್ಯ. ಆದರೆ ಇದು ಶೇ 45 ರಷ್ಟು ಬೆಳೆ ಹಾಳಾಗಿರುವುದರಿಂದ ಪರಿಹಾರವೂ ಸಿಗುವುದು ಅನುಮಾನ ಎನ್ನುವಂತೆ ಆಗಿದೆ. ಸದ್ಯ ಕಾಫಿ ಮಂಡಳಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದು ಏನು ನಿರ್ಧಾರ ಕೈಗೊಳ್ಳುತ್ತಾರೋ ಎನ್ನುವ ಆತಂಕ ಬೆಳೆಗಾರರಿಗೆ ಎದುರಾಗಿದೆ. 

108 ಸಿಬ್ಬಂದಿಗಳಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ಸಚಿವ ದಿನೇಶ್ ಗುಂಡೂರಾವ್

ಅರೇಬಿಕಾ ಕಾಫಿ ಹಣ್ಣಾಗುತ್ತಿದ್ದು ಅದನ್ನಾದರೂ ಕೊಯ್ಲು ಮಾಡಿ ಒಣಗಿಸೋಣ ಅಂದರೆ ಅದಕ್ಕೂ ಅವಕಾಶವಿಲ್ಲದಂತ ಪರಿಸ್ಥಿತಿ ಕೊಡಗು ಜಿಲ್ಲೆಯಲ್ಲಿ ಇದೆ. ಜಿಲ್ಲೆಯಾದ್ಯಂತ ಇಡೀ ದಿನ ಬಹುತೇಕ ಮೋಡಕವಿದ ವಾತಾವರಣ, ಅಲ್ಲಲ್ಲೇ ಚದುರಿದಂತೆ ತುಂತುರು ಮಳೆಯೂ ಆಗುತ್ತಿರುವುದರಿಂದ ಕೊಯ್ಲು ಮಾಡಿದ ಹಣ್ಣನ್ನು ಒಣಗಿಸಲು ಸಾಧ್ಯವಾಗದೆ ಅದೂ ಹಾಳಾಗುವ ಆತಂಕವಿದೆ. ಹೀಗಾಗಿ ಬೆಳೆಗಾರರು ಕಾಫಿ ಕೊಯ್ಲು ಮಾಡಿಸಿದರೂ ಕಷ್ಟ, ಮಾಡಿಸದಿದ್ದರೂ ಕಷ್ಟ ಎನ್ನುವ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಭಾರಿ ಮಳೆರಾಯ ವಾಡಿಕೆಗಿಂತ ಹೆಚ್ಚು ಕೃಪೆ ತೋರಿಸಿದ್ದರಿಂದ ಕಾಫಿ ಬೆಳೆಗಾರರು ವರುಣನ ಅವಕೃಪೆಗೆ ಒಳಗಾಗುವಂತೆ ಆಗಿರುವುದಂತು ಸತ್ಯ.

click me!