Kodagu; ರಾಜಸೀಟಿನಲ್ಲಿ ಎರಡು ದಿನಗಳ ಕಾಲ ನಡೆದ ಕಾಫಿ ಉತ್ಸವ, ನಿಗರ್ಸದಲ್ಲಿ ಕಾಫಿ ಸವಿದ ಪ್ರವಾಸಿಗರು

By Suvarna News  |  First Published Dec 11, 2022, 9:03 PM IST

ರಾಜಸೀಟಿನಲ್ಲಿ ಎರಡು ದಿನಗಳ ಕಾಲ ನಡೆದ ಕಾಫಿ ಉತ್ಸವದಲ್ಲಿ ಬಗೆಬಗೆಯ ಘಮಘಮಿಸೋ ಬಿಸಿ ಬಿಸಿ ಕಾಫಿ ಪ್ರವಾಸಿಗರು ಮನಸೋಲುವಂತೆ ಮಾಡಿತು. ಗ್ರೇಟರ್  ರಾಜಾಸೀಟ್ ನಲ್ಲಿ  ನಡೆದ ಕಾಫಿ ಉತ್ಸವದಲ್ಲಿ 20 ಕ್ಕೂ ಹೆಚ್ಚು ಅಂಗಡಿಗಳಲ್ಲಿ ತರಾವರಿ ಕಾಫಿ ಪ್ರವಾಸಿಗರ ಕೈಬೀಸಿ ಕರೆಯುತಿತ್ತು.


ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಡಿ.11): ಕೊಡಗು ಅಂದ್ರೇನೇ ಯಾವಾಗಲೂ ಹಚ್ಚ ಹಸಿರ ಪರಿಸರದೊಂದಿಗೆ ತಂಪಾಗಿರುವ ಜಿಲ್ಲೆ. ಅದರಲ್ಲೂ ಕಳೆದ ಎರಡು ದಿನಗಳಿಂದ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕೊಡಗು ಸಂಪೂರ್ಣ ಮೈಕೊರೆಯುವ ಚಳಿಯ ಅನುಭವ ನೀಡುತ್ತಿದೆ. ಈ ಕೂಲ್ ಕೂಲ್ ವೆದರ್‍ನಲ್ಲಿ ಪ್ರವಾಸಿಗರ ಹಾಟ್‍ಸ್ಪಾಟ್ ಆಗಿರುವ ಮಡಿಕೇರಿಯ ರಾಜಾಸೀಟಿನಲ್ಲಿ ಕಾಫಿ ಸವಿಯುತ್ತಾ ಪರಿಸರವನ್ನು  ನೋಡುತ್ತಾ ಎಂಜಾಯ್ ಮಾಡುವುದೆಂದರೆ ಅದು ಇನ್ನೆಷ್ಟು ಖುಷಿ ಇರಬೇಕು. ಅಂತಹ ಒಂದು ಅದ್ಭುತ ಕ್ಷಣವನ್ನು ಪ್ರವಾಸಿಗರಿಗೆ ಕಲ್ಪಿಸಿಕೊಟ್ಟಿದ್ದು, ಜಿಲ್ಲಾಡಳಿತ, ಕಾಫಿ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ. ರಾಜಸೀಟಿನಲ್ಲಿ ಎರಡು ದಿನಗಳ ಕಾಲ ನಡೆದ ಕಾಫಿ ಉತ್ಸವದಲ್ಲಿ ಬಗೆಬಗೆಯ ಘಮಘಮಿಸೋ ಬಿಸಿ ಬಿಸಿ ಕಾಫಿ ಪ್ರವಾಸಿಗರು ಮನಸೋಲುವಂತೆ ಮಾಡಿತು. ಗ್ರೇಟರ್  ರಾಜಾಸೀಟ್ ನಲ್ಲಿ  ನಡೆದ ಕಾಫಿ ಉತ್ಸವದಲ್ಲಿ 20 ಕ್ಕೂ ಹೆಚ್ಚು ಅಂಗಡಿಗಳಲ್ಲಿ ತರಾವರಿ ಕಾಫಿ ಪ್ರವಾಸಿಗರ ಕೈಬೀಸಿ ಕರೆಯುತಿತ್ತು. ಪ್ರಕೃತಿಯಲ್ಲಿ ಸುರಿಯುತ್ತಿರುವ ಹಿಮದ ರಾಶಿಯೊಳಗೆ ಸ್ವೆಟರ್ ಹೊದ್ದು, ಬಿಸಿ ಬಿಸಿ ಕಾಫಿ ಹೀರುತ್ತಾ ಪ್ರವಾಸಿಗರು ಪ್ರಕೃತಿಯ ಮಡಿಲಿನಲ್ಲಿ ಓಡಾಡುತ್ತಾ ಎಂಜಾಯ್ ಮಾಡುತ್ತಿದ್ದರು.

Latest Videos

undefined

ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಮಾರುಕಟ್ಟೆ ಕಲ್ಪಿಸುವುದು ಹಾಗೂ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವುದಕ್ಕಾಗಿ ಕಾಫಿ ಉತ್ಸವವನ್ನು ಆಯೋಜನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾಫಿ ಬೆಳೆಯಲಾಗುತ್ತಿದ್ದು, ಕಾಫಿಗೆ ರೈತರೇ ಉತ್ತಮ ಲಾಭ ಕಂಡುಕೊಳ್ಳುವಂತೆ ಮಾಡಬೇಕಾಗಿದೆ. ಕಾಫಿ ಬೆಳೆಯದ ಜಿಲ್ಲೆಗಳಲ್ಲಿಯೇ ಕಾಫಿಯನ್ನು ವಿವಿಧ ಉತ್ಪನ್ನಗಳನ್ನಾಗಿ ಮಾಡಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಲಾಗುತ್ತಿದೆ.

ಆದರೆ ಕೊಡಗು ಜಿಲ್ಲೆಯಲ್ಲಿ ರೈತರು ಆ ಲಾಭ ಪಡೆಯುತ್ತಿಲ್ಲ. ಆ ರೀತಿಯ ಲಾಭಗಳಿಸುವಂತೆ ಆಗಬೇಕು ಎನ್ನುವುದು ಕೂಡ ಈ ಕಾಫಿ ಉತ್ಸವದ ಉದ್ದೇಶವಾಗಿತ್ತು. ಇನ್ನು ಕಾಫಿ ಎಂದ ಕೂಡಲೇ ಸಾಮಾನ್ಯ ಎನ್ನುವುದು ಪ್ರವಾಸಿಗರ ತಿಳುವಳಿಕೆಯಾಗಿರುತ್ತದೆ. ಆದರೆ ಕಾಫಿಯಲ್ಲಿ ತರಾವರಿ ವಿಧಗಳಿದ್ದು, ಕಾಫಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ಚಿಕೋರಿ ಹಾಕಿರುತ್ತಾರೆ. ಎಷ್ಟು ಪ್ರಮಾಣದಲ್ಲಿ ಚಕೋರಿ ಹಾಕಬೇಕು ಎನ್ನುವ ತಿಳುವಳಿಕೆ ಜನರಿಗೆ ಇರಬೇಕಾಗುತ್ತದೆ. ಹೀಗಾಗಿ ಕಾಫಿ ಉತ್ಸವ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಹೇಳಿದರು.

ಹವಾಮಾನ ವೈಪರೀತ್ಯದಿಂದ ಅವಧಿಗೆ ಮುನ್ನ ಹಣ್ಣಾದ ಕಾಫಿ : ರೈತ ಕಂಗಾಲು

ಇನ್ನೂ  ಈ ಕಾಫಿ ಮೇಳದಲ್ಲಿ ಸುಮಾರು 22 ಮಳಿಗೆಗಳು ಭಾಗವಹಿಸಿದ್ದವು. ಕೊಡಗು, ಚಿಕ್ಕಮಗಳೂರು ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ಪ್ರವಾಸಿಗರಿಗೆ  ತಮ್ಮ ತಮ್ಮ ಕಾಫಿ ಹಾಗೂ ಅವರ ಬ್ರಾಂಡ್ ನ ಬಗೆಪರಿಚಯಿಸಿದ್ರು.  ಕಾಫಿಮೇಳದಲ್ಲಿ ಕಾಫಿಯಷ್ಟೇ ಅಲ್ಲ, ಕಾಫಿಯಿಂದ ಮಾಡಿದ್ದ ಚಾಕೋಲೆಟ್, ಹೆಣ್ಣುಮಕ್ಕಳ ಮುಖದ ಸೌಂದರ್ಯ ಕಾಂತಿಯನ್ನು ಹೆಚ್ಚಿಸುವ ಫೇಸ್ ಪ್ಯಾಕ್, ಹೇರ್ ಪ್ಯಾಕ್ ಅಷ್ಟೇ ಅಲ್ಲ ರುಚಿ, ರುಚಿಯಾದ ಕಾಫಿ ಕೇಕ್, ಕಿಕ್ ಏರಿಸುವ ಕಾಫಿ ವೈನ್‍ಗಳನ್ನು ಮಾಡಿ ಮಾರಾಟ ಮತ್ತು ಪ್ರದರ್ಶನಕ್ಕೆ ಇರಿಸಲಾಗಿತ್ತು.

Kodagu: ನಾಲ್ಕು ವರ್ಷಗಳ ಬಳಿಕ ಕಾಫಿ ಬೆಳೆಗಾರರಲ್ಲಿ ಮಂದಹಾಸ: ಭರ್ಜರಿ ಬ್ಯುಸಿನೆಸ್‌

ಈ ರೀತಿಯ ಕಾಫಿ ಮೇಳ ಆಯೋಜಿರುವುದರಿಂದ ಪ್ರವಾಸಿಗರಿಗೆ ಯಾವ ಯಾವ ರೀತಿಯ ಕಾಫಿ ಇದೆ, ಯಾವೆಲ್ಲ ಸ್ವಾದದ ಕಾಫಿ ಇದೆ ಎಂಬುದರ ಪರಿಚಯಿಸಲು ಸಾಧ್ಯ ಹಾಗೂ ತಮ್ಮ ಪ್ರಾಡಕ್ಟ್ ಗಳ ಮಾರುಕಟ್ಟೆಗೆ ಕೂಡ  ಇದೊಂದು ಉತ್ತಮ ಪ್ಲಾಟ್ ಫಾರ್ಮ್ ಆಗಿದೆ. ಇಲ್ಲಿ ಅಂಗಡಿ ಮುಂಗಟ್ಟುಗಳು ಇವೆ ಎಂದು ಪ್ರವಾಸಿಗರಿಗೆ ಗೊತ್ತಿಲ್ಲ. ಆದರೆ ಒಳಗೆ ಬಂದ ಪ್ರವಾಸಿಗರು ಕಾಫಿಯ ವಿವಿಧ ಉತ್ಪನ್ನಗಳನ್ನು ಕೊಂಡು ಖುಷಿಯಾಗಿ ಕೊಂಡೊಯುತ್ತಿದ್ದಾರೆ ಎಂದು ವ್ಯಾಪಾರಿ ರಶ್ಮಿ ಅವರು ಅಭಿಪ್ರಾಯಿಸಿದರು. ಒಟ್ಟಿನಲ್ಲಿ ಇದೆ ಮೊದಲ ಬಾರಿಗೆ ಕೊಡಗಿನಲ್ಲಿ ಈ ರೀತಿಯ ಕಾಫಿ ಮೇಳ ಆಯೋಜನೆಗೊಂಡಿದ್ದು ಕೊಡಗಿನ  ಕಾಫಿ ಮೇಳಕ್ಕೆ ಪ್ರವಾಸಿಗರಿಂದ ಹಾಗೂ ಸ್ಥಳೀಯರಿಂದ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.

click me!