Kodagu: ಕೋವಿಡ್ ಚಿಕಿತ್ಸೆಗೆ ಕೊಡಗು ಜಿಲ್ಲಾಡಳಿತ ಸಿದ್ಧತೆ: ನಿಯಮ ಪಾಲಿಸುವಂತೆ ಪ್ರವಾಸಿಗರಿಗೆ ಸೂಚನೆ

By Sathish Kumar KH  |  First Published Dec 27, 2022, 6:45 PM IST

ಕೊಡಗು ಜಿಲ್ಲೆಯಲ್ಲೂ ಕೋವಿಡ್ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಕೊಡಗು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಡೀನ್ ಡಾ. ಕಾರಿಯಪ್ಪ ಪರಿಶೀಲನೆ ನಡೆಸಿದರು.


ಕೊಡಗು (ಡಿ.27):  ದೇಶದಲ್ಲಿ ಕೋವಿಡ್ ಸೋಂಕು ಹರಡುವ ಆತಂಕ ಇರುವುದರಿಂದ ದೇಶವ್ಯಾಪ್ತಿ ಕೋವಿಡ್ ಚಿಕಿತ್ಸೆಗೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲೂ ಕೋವಿಡ್ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಕೊಡಗು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಡೀನ್ ಡಾ. ಕಾರಿಯಪ್ಪ ಪರಿಶೀಲನೆ ನಡೆಸಿದರು.

ಇಂದು ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಬೆಡ್ ಮತ್ತು ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಪರಿಶೀಲನೆ ಮಾಡಿದರು. ನಂತರ ಆಸ್ಪತ್ರೆ ಮುಂಭಾಗದಲ್ಲಿ ಪಿಎಂ ಮೋದಿ ಕೇರ್ ನಿಂದ ಸ್ಥಾಪಿಸಿರುವ ನಿಮಿಷಕ್ಕೆ 1 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನಾ ಘಟಕವನ್ನು ಚಾಲನೆ ಮಾಡಿದ ಅಧಿಕಾರಿಗಳು ಮುಂದೆ ಉಪಯೋಗಕ್ಕೆ ಲಭ್ಯವಾಗುವುದನ್ನು ಖಚಿತಪಡಿಸಿಕೊಂಡರು. ಜೊತೆಗೆ ಸಾರಿ ಮತ್ತು ಐಎಲ್ಐ ಲಕ್ಷಣಗಳ ಚಿಕಿತ್ಸಾ ಘಟಕಗಳನ್ನು ಸಿದ್ಧಗೊಳಿಸಲಾಗಿತ್ತು. ಉಸಿರಾಟದ ತೊಂದರೆ ಇರುವವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ತೀವ್ರ ನಿಗಾ ಘಟಕವನ್ನು ಸಿದ್ಧಪಡಿಸಲಾಗಿದೆ. ಇನ್ನು ತೀವ್ರ ನಿಗಾ ಘಟಕದಲ್ಲಿ ಒಟ್ಟು 50 ಬೆಡ್ಗಳನ್ನು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಪರಿಶೀಲನೆ ಮಾಡಿದರು.

Tap to resize

Latest Videos

undefined

ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ಮಧ್ಯಪ್ರದೇಶಕ್ಕೆ ಐದು ಆನೆಗಳ ಸ್ಥಳಾಂತರ, ಗೋಳಾಡುತ್ತಲೇ ಲಾರಿ ಏರಿದ ಸಾಕಾನೆಗಳು

ಸೋಂಕಿತರ ಚಿಕಿತ್ಸೆಗೆ 250 ಹಾಸಿಗೆ ಸಿದ್ಧತೆ: ಆಸ್ಪತ್ರೆ ಪರಿಶೀಲನೆ ವೇಳೆ ಮಾತನಾಡಿದ ಡೀನ್ ಕಾರ್ಯಪ್ಪ ಅವರು, ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ತೀವ್ರ ನಿಗಾ ಘಟಕದಲ್ಲಿ 50 ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಹಾಗೆಯೇ ಜನರಲ್ ವಾರ್ಡಿನಲ್ಲಿ 100 ಹಾಸಿಗೆಗಳನ್ನು ಮೀಸಲು ಇಡಲಾಗಿದೆ. ಜೊತೆಗೆ ಮೆಡಿಕಲ್ ಕಾಲೇಜಿನಲ್ಲೂ ನೂರು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಸಮಸ್ಯೆ ಆಗುವುದಿಲ್ಲ. ಇನ್ನು ಆಸ್ಪತ್ರೆ ಮುಂಭಾಗದಲ್ಲಿ 13 ಸಾವಿರ ಲೀಟರ್ ಸಾಮರ್ಥ್ಯದ ಎರಡು ಆಕ್ಸಿಜನ್ ಟ್ಯಾಂಕ್‌ಗಳಿದ್ದು, ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ಸಾಕಷ್ಟು ಆಕ್ಸಿಜನ್ ಜಂಬೂ ಸಿಲಿಂಡರ್ ಗಳಿವೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೆ ಚಿಕಿತ್ಸೆಗೆ ಸಿದ್ದವಿದ್ದೇವೆ ಎಂದು ಹೇಳಿದರು.

ಪ್ರವಾಸಿಗರಿಗೂ ಕೋವಿಡ್‌ ಪರೀಕ್ಷೆಗೆ ಚಿಂತನೆ: ಇನ್ನು ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಎಲ್ಲಾ ಪ್ರವಾಸಿ ತಾಣಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಡೆ ಕೋವಿಡ್ ಟೆಸ್ಟಿಂಗ್‌ ತೀವ್ರಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಸೂಚನೆ ನೀಡಿದ್ದಾರೆ. ಸದ್ಯ ಇಯರ್ ಎಂಡಿಂಗ್ ಸಮೀಪಿಸುತ್ತಿರುವುದರಿಂದ ಮತ್ತು ಪ್ರವಾಸದ ಸೀಜನ್ ಆಗಿರುವುದಿರಂದ ಕೊಡಗು ಜಿಲ್ಲೆಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಅವರಿಗೆ ಟೆಸ್ಟಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೋವಿಡ್‌ ನಿಯಮ ಕಠಿಣ ಜಾರಿಗೆ ಸ್ಥಳೀಯರ ಆಗ್ರಹ:  ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ. ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದರೂ ಸದ್ಯಕ್ಕೆ ಪ್ರವಾಸಿ ತಾಣಗಳಲ್ಲಿ ಯಾವುದೇ ಟೆಸ್ಟ್ ಮಾಡಲಾಗುತ್ತಿಲ್ಲ. ಟೆಸ್ಟ್ ಮಾತಿರಲಿ, ರಾಜ್ಯ, ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿಗರು ಕೊನೆ ಪಕ್ಷ ಮಾಸ್ಕ್ ಕೂಡ ಹಾಕಿಕೊಳ್ಳದೆ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವ ಆತಂಕವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಾಕಷ್ಟು ನಿಯಮ ರೂಪಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Madikeri: ಹೈಕೋರ್ಟ್ ನೀಡಿದ ಗಡುವು ಮುಗಿದರೂ ಪೂರ್ಣಗೊಳ್ಳದ ಮಡಿಕೇರಿ ಕೋಟೆ ದುರಸ್ತಿ

ಸರ್ಕಾರದ ಆದೇಶದಂತೆ ನಿಯಮಗಳ ಕಠಿಣ ಜಾರಿ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು, ಜಿಲ್ಲೆಯ ಪ್ರವಾಸಿ ತಾಣಗಳ ಮುಂಭಾಗವೇ ಬೋರ್ಡ್ ಅಳವಡಿಸಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಇನ್ನು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಸಾಕಷ್ಟು ನಿಯಮಗಳನ್ನು ಮಾಡಿದೆ. ಹೊರಾಂಗಣದಲ್ಲಿ ಹೊಸ ವರ್ಷಾಚರಣೆ ಮಾಡುವುದಾದರೆ ಕಡ್ಡಾಯವಾಗಿ ಮಾಸ್ಕ್  ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಳಾಂಗಣದಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಾದರೆ ಕಡ್ಡಾಯವಾಗಿ ಅಲ್ಲಿ ಎಷ್ಟು ಸೀಟುಗಳಿಗೆ ಅವಕಾಶ ಇರುತ್ತದೆಯೋ ಅಷ್ಟು ಜನರು ಮಾತ್ರವೇ ಭಾಗವಹಿಸಬೇಕು. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಕೊಡಗಿನಲ್ಲಿ ಒಂದೆಡೆ ಕೋವಿಡ್ ಚಿಕಿತ್ಸೆಗಾಗಿ ಸಕಲ ಸಿದ್ಧತೆ ನೆಡಸುತ್ತಿದ್ದರೆ, ಮತ್ತೊಂದೆಡೆ ಪ್ರವಾಸಿಗರಿಂದಾಗಿ ಜಿಲ್ಲೆಯಲ್ಲಿ ಸೋಂಕು ಹರಡುವ ಆತಂಕ ಎದುರಾಗಿದೆ.

click me!