ನಿಡ್ತಾ ಪಂಚಾಯಿತಿಯ 16 ಹಳ್ಳಿಗಳ 26 ಕೆರೆಗಳು ಒತ್ತುವರಿ.
ಕೆರೆ ಜಾಗದಲ್ಲಿ ಮನೆ, ತೋಟ ನಿರ್ಮಿಸಿದರು ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ವರದಿ: ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಜ.22):ದೇಶದಲ್ಲಿ ಹಿಂದಿನಿಂದಲೂ ರಾಜ ಮಹಾರಾಜರು ಕೂಡ ತಮ್ಮ ರಾಜ್ಯಗಳ ಸಮೃದ್ಧಿಗಾಗಿ ಕೆರೆ, ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಆದರೆ ಇಂದಿನ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜನರು ಕೆರೆಗಳನ್ನೇ ನುಂಗಿ ನೀರು ಕುಡಿಯುತ್ತಿದ್ದಾರೆ. ಇಲ್ಲೊಂದು ಪಂಚಾಯಿತಿಯಲ್ಲಿ 26 ಕೆರೆಗಳು ಒತ್ತುವರಿಯಾಗಿವೆ. ಆದರೂ ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ಕೆರೆ, ಕಟ್ಟೆಗಳಿದ್ದರೆ ಒಂದು ಊರೇ ಸಮೃದ್ಧಿಯಾಗುತ್ತದೆ, ರೈತರ ಹೊಲಗದ್ದೆಗಳು ಹಸಿರಾಗಿರುತ್ತವೆ. ದನ, ಕರುಗಳು ನೆಮ್ಮದಿಯಿಂದ ತಮ್ಮ ನೀರಡಿಕೆ ತೀರಿಸಿಕೊಳ್ಳುತ್ತವೆ. ಆದರೆ ಈ ಕೆರೆಗಳನ್ನೇ ಒತ್ತುವರಿ ಮಾಡಿಕೊಂಡು ಹೊಲಗದ್ದೆ, ಕೆರೆಗಳನ್ನು ನಿರ್ಮಿಸಿಕೊಂಡರೆ ಹೇಗೆ. ಅಂತಹ ಸ್ಥಿತಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ.
undefined
Kodagu: ಪೋಷಕರನ್ನು ಹೊರಹಾಕಿದ ಮಕ್ಕಳಿಗೆ ತಕ್ಕಶಾಸ್ತಿ: ತಂದೆ-ತಾಯಿಗೆ ಆಸ್ತಿ ವಾಪಸ್ ಕೊಡಿಸಿದ ಕೋರ್ಟ್
ಹೌದು ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ತ, ಹಾರೆ ಹೊಸೂರು ಸೇರಿದಂತೆ ವಿವಿಧ 16 ಗ್ರಾಮಗಳ 26 ಕ್ಕೂ ಹೆಚ್ಚು ಕೆರೆಗಳನ್ನು ರೈತರು ಮತ್ತು ಜನರು ಒತ್ತುವರಿ ಮಾಡಿದ್ದಾರೆ. ಹೊಲಗದ್ದೆ ಅಷ್ಟೇ ಅಲ್ಲ, ಕೆರೆಗಳಿಗೆ ಕಲ್ಲು, ಮಣ್ಣು ತುಂಬಿ ಮನೆಗಳನ್ನು ನಿರ್ಮಿಸಲಾಗಿದೆ. ಸಾಕಷ್ಟು ಜನರು ಕೆರೆಯ ಜಾಗಗಳಿಗೆ ಬೇಲಿ ಹಾಕಿಕೊಂಡಿದ್ದಾರೆ. ಇನ್ನು ಕೆಲವು ಕೆರೆಗಳಿಗೆ ಹಳೆ ಮನೆಗಳ ಗೋಡೆಗಳ ಮಣ್ಣು, ಇತರೆ ತ್ಯಾಜ್ಯಗಳನ್ನು ಸುರಿದು ಕೆರೆಗಳನ್ನು ಮುಚ್ಚುತ್ತಿದ್ದಾರೆ. ಹಲವು ವರ್ಷಗಳಿಂದ ಕೆರೆ ಒತ್ತುವರಿ ಮಾಡಿ ಕಾಫಿ ತೋಟಗಳನ್ನೇ ಮಾಡಿದ್ದಾರೆ. ಇದಕ್ಕೆ ಸ್ಥಳೀಯ ಪಂಚಾಯಿತಿ ಕೆಲವು ಸದಸ್ಯರೇ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ.
ಕೆರೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಎನ್‍ಓಸಿ ಕೇಳಿದರೆ ಪಂಚಾಯಿತಿಯಿಂದ ಯಾವುದೇ ತಕರಾರು ಇಲ್ಲದೆ ಎನ್‍ಓಸಿ ನೀಡಲಾಗಿದೆ. ಹೀಗಾಗಿ ಕೆರೆಯ ಜಾಗದಲ್ಲಿ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ. ಆದರೂ ಪಂಚಾಯಿತಿಯಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದುನಂದಾಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರನ್ನು ಕೇಳಿದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಕೆರೆಗಳನ್ನು ಹಿಂದಿನಿಂದಲೂ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಬೇಸಿಗೆ ಶುರುವಾಯಿತ್ತೆಂದರೆ ಊರಿನ ದನ, ಕರುಗಳಿಗೆ ಕುಡಿಯುವ ನೀರಿಗೂ ಆಹಾಕಾರ ಶುರುವಾಗುತ್ತದೆ. 8 ರಿಂದ 10 ಎಕರೆ ವಿಸ್ತೀರ್ಣದ ಕೆರೆಗಳು ಈಗ ಕೇವಲ ಅರ್ಧ ಎಕರೆ, ಒಂದು ಎಕರೆಯಷ್ಟು ಮಾತ್ರವೇ ಉಳಿದಿವೆ.
ಸಂರಕ್ಷಿತ ಅರಣ್ಯದಲ್ಲಿ ಅಕ್ರಮ ರಸ್ತೆ ನಿರ್ಮಾಣ, ಕೊಡಗು ಶಾಸಕರ ಮೇಲೆ ಶಿಕ್ಷೆ ತೂಗುಗತ್ತಿ!
ದೂರು ನೀಡಿದರೂ ಕ್ರಮವಹಿಸಿದ ಅಧಿಕಾರಿಗಳು:
ಈ ಕುರಿತು ಕೆರೆಗಳನ್ನು ಸಂರಕ್ಷಿಸುವಂತೆ ಸಂಬಂಧಿಸಿದ ತಹಶೀಲ್ದಾರ್ ಅವರಿಗೂ ದೂರು ನೀಡಿದ್ದೇವೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಲ್ಲೂ ದೂರು ನೀಡಿದ್ದೇವೆ. ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುವ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಂಚಾಯಿತಿ ಮಾಜಿ ಸದಸ್ಯ ಎಸ್.ಕೆ.ಪುಟ್ಟಸ್ವಾಮಿ ಅಧಿಕಾರಿಗಳ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಒಂದೆಡೆ ದನ ಕರುಗಳು ಮೇಯುವುದಕ್ಕೆ ಜಾಗವಿಲ್ಲ. ಮತ್ತೊಂದೆಡೆ ಅವುಗಳಿಗೆ ಕುಡಿಯುವ ನೀರಿಗಾಗಿ ಇದ್ದ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ದನಗಳನ್ನು ಸಾಕಲು ಸಾಧ್ಯವಾಗದೆ ಮಾರಾಟ ಮಾಡೋಣ ಎಂದರೆ ಅದಕ್ಕೂ ಬಿಡುವುದಿಲ್ಲ ಎಂದು ಸ್ಥಳೀಯರಾದ ನಾಗೇಂದ್ರ ಅಸಮಾಧಾನ ಹೊರ ಹಾಕಿದ್ದಾರೆ.
ಹೀಗೆ ಕೆರೆಗಳು ಸಂಪೂರ್ಣ ಒತ್ತುವರಿ ಆಗಿದ್ದರೂ ಕಳೆದ ಒಂಭತ್ತು ವರ್ಷಗಳಿಂದ ಇದೇ ಪಂಚಾಯಿತಿಯಲ್ಲಿ ಇರುವ ಪಿಡಿಓ ಅವರು ಸುಮ್ಮನಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿಡ್ತಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಕೆರೆಗಳು ಒತ್ತುವರಿಯಾಗಿದ್ದು, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಒತ್ತುವರಿ ಆಗಿರುವ ಕೆರೆಗಳನ್ನು ತೆರವುಗೊಳಿಸಿ ಕೆರೆ ಸಂರಕ್ಷಣೆ ಮಾಡಬೇಕಾಗಿದೆ.