
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ನ.15): ಆ ಗ್ರಾಮದ ಜನರು ತುಂಬಿ ಹರಿಯುವ ಅಘನಾಶಿನಿ ನದಿಯನ್ನು ದೋಣಿಯ ಮೂಲಕ ದಾಟುತ್ತಿದ್ದರು. ಈ ಸಮಸ್ಯೆಗೆ ಪರಿಹಾರವೆಂಬಂತೆ 5 ವರ್ಷಗಳ ಹಿಂದೆ ಆ ಗ್ರಾಮದಲ್ಲಿ ಸೇತುವೆಯೊಂದರ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿತ್ತು. ಆದರೆ, ದುರದೃಷ್ಟವಶಾತ್ ಈ ಸೇತುವೆ ಕಾಮಗಾರಿ ಮಾತ್ರ ಈವರೆಗೂ ಪೂರ್ಣಗೊಂಡಿಲ್ಲ. ಸೇತುವೆ ಮೇಲೆ ಹತ್ತಲು ಈವರೆಗೂ ವ್ಯವಸ್ಥೆಯನ್ನೇ ಮಾಡಲಾಗಿಲ್ಲ. ಇದರಿಂದ ಗ್ರಾಮಸ್ಥರು ನಿತ್ಯ ಪರದಾಡುವಂತಾಗಿದ್ದು, ನದಿ ದಾಟಲು ವೃದ್ಧರು, ಮಕ್ಕಳು, ಗೃಹಿಣಿಯರು ಇಂದಿಗೂ ಬೋಟುಗಳನ್ನೇ ಬಳಸಬೇಕಾದ ಸ್ಥಿತಿ ಇಲ್ಲಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಕಳೆದ ವರ್ಷ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಸಾಕಷ್ಟು ವಿವಾದ ಸೃಷ್ಠಿಸಿತ್ತು. ತಾನು ಶೇ. 100ರಷ್ಟು ಕಾಮಗಾರಿ ನಡೆಸಲ್ಲ. ಶೇ. 75ರಷ್ಟು ಮಾಡಿ ಉಳಿದ ಶೇ. 25ರಷ್ಟು ಚುನಾವಣೆ ಹತ್ತಿರ ಬರುವವರೆಗೆ ಹಾಗೆಯೇ ಇರಿಸಿಕೊಳ್ಳುತ್ತೇನೆ. ಮೊದಲೇ ಎಲ್ಲವೂ ಮಾಡಿಕೊಟ್ಟರೆ ಬಳಿಕ ಜನರು ಮಾತ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಚುನಾವಣೆ ಹತ್ತಿರ ಬರುತ್ತಿದೆಯಾದ್ರೂ ಶಾಸಕ ದಿನಕರ ಶೆಟ್ಟಿ ಈಗಾಗಲೇ ಶೇ.75ರಷ್ಟು ಮಾಡಿಟ್ಟಿರುವ ಕಾಮಗಾರಿಗಳ ಶೇ.25ರಷ್ಟು ಭಾಗವನ್ನು ಪೂರ್ಣಗೊಳಿಸಲು ಮರೆತಂತಿದೆ. ಇದಕ್ಕೆ ಸಾಕ್ಷಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೋಡ್ಕಣಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಸೇತುವೆ.
ಅರೆಬರೆ ಉಡುಪು ಧರಿಸಿ ಸಂಚರಿಸಬೇಡಿ: ಗೋಕರ್ಣ ಮಹಾಬಲೇಶ್ವರ ದೇಗುಲ ಸಮಿತಿಯ ವಿವಾದಿತ ಬ್ಯಾನರ್..!
ವಿಶಾಲವಾಗಿ ಹರಿಯುವ ಅಘನಾಶಿನಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆಯ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಶೇ. 25ರಷ್ಟು ಕಾಮಗಾರಿಯನ್ನು ಹಾಗೆಯೇ ಬಾಕಿಯಿರಿಸಿರುವ ಕಾರಣ ಜನರಿಗೆ ಇಂದಿಗೂ ಈ ಸೇತುವೆ ಬಳಕೆಗೆ ದೊರಕದಂತಾಗಿದೆ. ಕೋಡ್ಕಣಿ ಗ್ರಾಮದಿಂದ ಐಗಳ್‌ಕುರ್ವೆ ಗ್ರಾಮಕ್ಕೆ ಹೋಗಲು ಈ ಹಿಂದೆ ಜನರು ಜೀವ ಪಣಕ್ಕಿಟ್ಟು ಅಘನಾಶಿನಿ ನದಿಯಲ್ಲಿ ದೋಣಿಯಲ್ಲೇ ಒಂದೆಡೆಯಿಂದ ಮತ್ತೊಂದೆಡೆ ಸಾಗಬೇಕಿತ್ತು. ಜನರ ಬೇಡಿಕೆ ಮೇರೆಗೆ 2018ರಲ್ಲಿ ಇಲ್ಲಿ ಸೇತುವೆ ನಿರ್ಮಾಣದ ಯೋಜನೆಯನ್ನು ಸರಕಾರ ಮಂಜೂರು ಮಾಡಿತ್ತು. ಜತೆಗೆ ಸರ್ಕಾರದಿಂದ 22.1 ಕೋಟಿ ರೂ. ಅನುದಾನ ಕೂಡಾ ಬಿಡುಗಡೆಯಾಗಿತ್ತು.
ಅಂದು ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಿದ ಡಿಆರ್‌ಎನ್ ಇನ್‌ಫ್ರಾಸ್ಟ್ರಕ್ಚರ್ಸ್ 270 ಮೀಟರ್ ಉದ್ದ ಹಾಗೂ 10.5 ಮೀಟರ್ ಅಗಲದ ಸೇತುವೆಯನ್ನು ಶೇ. 75ರಷ್ಟು ಮುಗಿಸಿ ಅನುದಾನ ಸಾಕಾಗುವುದಿಲ್ಲವೆಂದು ಕಾಮಗಾರಿಯನ್ನು ನಿಲ್ಲಿಸಿಬಿಟ್ಟಿದೆ. ನದಿಯ ಮೇಲೆ ಸೇತುವೆ ಹಾಗೂ ಇವುಗಳ ಪಿಲ್ಲರ್‌ಗಳನ್ನಷ್ಟೇ ನಿರ್ಮಿಸಲಾಗಿದ್ದು, ಈ ಬೃಹತ್ ಸೇತುವೆ ಮೇಲೆ ಹತ್ಗಲು ಎರಡೂ ಕಡೆಯಿಂದ ವ್ಯವಸ್ಥೆಯೇ ಇಲ್ಲ. ಈ ಹಿಂದೆ ಜನರು ಕಬ್ಬಿಣದ ಮೆಟ್ಟಿಲು ಹಾಗೂ ಅಡಿಕೆ ಮರದ ಮೆಟ್ಟಿಲು ಅಳವಡಿಸಿ ಹತ್ತುತ್ತಿದ್ದರಾದ್ರೂ ಇದೀಗ ಅವುಗಳನ್ನು ತೆಗೆದಿರುವುದರಿಂದ ಜನರು ಮತ್ತೆ ದೋಣಿಯಲ್ಲೇ ಸಾಗುವ ಸ್ಥಿತಿ ಉಂಟಾಗಿದೆ. ಇದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸೇತುವೆ ನಿರ್ಮಾಣಗೊಂಡಲ್ಲಿ ಸುಮಾರು ಹತ್ತಾರು ಹಳ್ಳಿಗಳಿಗೆ ಸಂಪರ್ಕದ ಕೊಂಡಿಯಾಗುತ್ತೆ.
ಸೇತುವೆ ಅನಿವಾರ್ಯತೆ ಸಾರ್ವಜನಿಕರಿಗೆ ಇದ್ದರೂ ಜನಪ್ರತಿನಿಧಿಗಳು ಸುಮ್ಮನಿದ್ದಾರೆ. ಜನರ ಕಷ್ಟ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ಐಗಳ್‌ಕುರ್ವೆ ಗ್ರಾಮದ ಜನರು ಕೋಡ್ಕಣಿ ಅಥವಾ ಕುಮಟಾ ಬರಬೇಕಂದ್ರೆ ಇಲ್ಲಿನ ಗ್ರಾಮಸ್ಥರು ದೋಣಿಗಳ ಮೂಲಕವೇ ಒಂದೆಡೆಯಿಂದ ಇನ್ನೊಂದೆಡೆ ಸಾಗಬೇಕು. ಒಮ್ಮೆ ನಾವಿಕ ಒಂದು ತೀರಕ್ಕೆ ತೆರಳಿದರೆ ಅರ್ಧ ಗಂಟೆಯವರೆಗೆ ಕಾಯಬೇಕಾದ ಸ್ಥಿತಿ. ಅಪೂರ್ಣ ಸೇತುವೆಯಿಂದಾಗಿ ಇಂದಿಗೂ ಜನರು ದೋಣಿಯಲ್ಲೇ ಸಾಗುತ್ತಿದ್ದಾರೆ. ಸಂಪರ್ಕ ಸೇತುವೆ ಇಲ್ಲದ ಕಾರಣ ಪ್ರತೀ ನಿತ್ಯ ವೃದ್ಧರು, ಗರ್ಭಿಣಿ ಮಹಿಳೆಯರು, ಶಾಲಾ ಮಕ್ಕಳು ಸಾಕಷ್ಟು ಸಮಸ್ಯೆಗೀಡಾಗುತ್ತಿದ್ದಾರೆ.
ಕುಮಟಾ ನಗರಕ್ಕೆ ಶೀಘ್ರದಲ್ಲಿ ಬರಬೇಕಂದಿದ್ದಲ್ಲಿ ಒಂದೋ ದೋಣಿಯಲ್ಲಿ ಸಾಗಬೇಕು, ಇಲ್ಲವಾದಲ್ಲಿ ಸುಮಾರು 30ಕಿ.ಮೀ. ಸುತ್ತುಹಾಕಿಕೊಂಡು ಹೋಗಬೇಕು. ಅಗತ್ಯ ಚಿಕಿತ್ಸೆಯಂತಹ ತುರ್ತು ಸಂದರ್ಭದಲ್ಲಂತೂ ಜನರು ಬಹಳ ತೊಂದರೆಗೆ ಒಳಗಾಗುತ್ತಿದ್ದಾರೆ. ಇಲ್ಲಿನ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ, ಸೇತುವೆ ಹತ್ತಲು ವ್ಯವಸ್ಥೆ ಹಾಗೂ ಹೊಂದಿಕೊಂಡ ರಸ್ತೆ ಇಲ್ಲ. ಸೇತುವೆ ಬಳಿ ರಸ್ತೆಗೆ ಜಾಗ ಮಂಜೂರಾಗಿದ್ದರೂ, ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿ ಯಾವಾಗ ಮುಗಿಯುತ್ತೋ ಎಂದು ಜನರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಾಡದೋಣಿಗಳಿಗೆ ಪೂರೈಕೆಯಾಗದ ಸೀಮೆಎಣ್ಣೆ: ಚುನಾವಣೆ ವೇಳೆ ನೋಡಿಕೊಳ್ಳುತ್ತೇವೆಂದ ಮೀನುಗಾರರು
ಇನ್ನು ಸೇತುವೆಗೆ ಸಂಪರ್ಕಿಸುವ ರಸ್ತೆಗಾಗಿ ಸ್ಥಳೀಯರು ಜಾಗ ಬಿಟ್ಟುಕೊಟ್ಟಿದ್ದು, ಅವರಿಗೆ ಇನ್ನೂ ಕೂಡ ಪರಿಹಾರದ ಹಣ ಮಂಜೂರಾಗಿಲ್ಲ. ಶೀಘ್ರದಲ್ಲೇ ಜಾಗ ಕಳೆದುಕೊಂಡವರಿಗೆ ಸರಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿರುವ ಜನರು ಪರಿಹಾರ ದೊರಕದಿದ್ದಲ್ಲಿ ಚುನಾವಣೆ ವೇಳೆ ಮತವೇ ಹಾಕೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಕೋಡ್ಕಣಿ- ಐಗಳ್ ಕುರ್ವೆ ಸಂಪರ್ಕಿಸುವ ಸೇತುವೆ ಕಾಮಗಾರಿ ಸುಮಾರು 5 ವರ್ಷಗಳಿಂದ ಬಿಟ್ಟು ಬಿಟ್ಟು ನಡೆಯುತ್ತಿದ್ದು, ಜನರು ಮಾತ್ರ ತೀವ್ರ ತೊಂದರೆಗೊಳಗಾಗುತ್ತಿದ್ದಾರೆ. ಈ ಕಾರಣದಿಂದ ಕುಮಟಾ ಶಾಸಕರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕಿದೆ. ಇಲ್ಲವಾದಲ್ಲಿ ಜನರ ಆಕ್ರೋಶಕ್ಕೆ ತುತ್ತಾಗುವುದರಲ್ಲಿ ಎರಡು ಮಾತಿಲ್ಲ.