ಹಣಕ್ಕಿಂತ ಜ್ಞಾನ ಸಂಪಾದನೆ ಮುಖ್ಯ: ಸಿಎಂ ಬಸವರಾಜ ಬೊಮ್ಮಾಯಿ

By Kannadaprabha News  |  First Published Dec 19, 2022, 12:35 PM IST

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹಣಕ್ಕಿಂತ ಜ್ಞಾನ ಸಂಪಾದನೆ ಮಾಡುವುದು ಮುಖ್ಯವಾಗಿದೆ. ಜ್ಞಾನವುಳ್ಳವರು ಜಗತ್ತನ್ನು ಆಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಹುಬ್ಬಳ್ಳಿ (ಡಿ.19) : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹಣಕ್ಕಿಂತ ಜ್ಞಾನ ಸಂಪಾದನೆ ಮಾಡುವುದು ಮುಖ್ಯವಾಗಿದೆ. ಜ್ಞಾನವುಳ್ಳವರು ಜಗತ್ತನ್ನು ಆಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಕುಸುಗಲ್‌ ರಸ್ತೆಯ ಜೈನ್‌ ಕಾಲನಿಯಲ್ಲಿ ಭಾನುವಾರ ನಡೆದ ಅಜಿತ್‌ ಸಾಹಿತ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಆಚಾರ್ಯ ಅಜಿತಶೇಖರ ಸೂರಿ ಮಹಾರಾಜರ 100ನೇ ಪುಸ್ತಕ ರಿಪ್ರೇಶ್‌ ಯುವರ್‌ ಮೈಂಟ್‌ ಬಿಡುಗಡೆಗೊಳಿಸಿ ಮಾತನಾಡಿದರು.

ಭೂ ಒಡೆಯರು 17-18ನೇ ಶತಮಾನದಲ್ಲಿ ಜಗತ್ತನ್ನು ಆಳಿದ್ದಾರೆ. ಹಣವುಳ್ಳವರು 19-20ನೇ ಶತಮಾನದಲ್ಲಿ ಮೇಲುಗೈ ಸಾಧಿಸಿದ್ದರು. ಸದ್ಯ ಈಗ ಕಾಲ ಬದಲಾಗುತ್ತಿದೆ. ಪ್ರಪಂಚದೆಲ್ಲೆಡೆ ಜ್ಞಾನವಂತರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಹಾಗಾಗಿ ಜ್ಞಾನ ಗಳಿಸುವುದು ಮನುಷ್ಯನ ಜೀವನದ ಆದ್ಯತೆಯಾಗಬೇಕು ಎಂದು ತಿಳಿಸಿದರು.

Tap to resize

Latest Videos

mangalore blast: ಡಿಕೆಶಿ ಮುಸ್ಲಿಂರ ಓಲೈಕೆಗೆ ಮುಂದಾಗಿದ್ದಾರೆ: ಸಿಎಂ ಬೊಮ್ಮಾಯಿ ಕಿಡಿ

ಜೈನ್‌ ಸಮಾಜದವರು ಪ್ರಗತಿಪರರು. ಬೇರೆಡೆಯಿಂದ ಕರ್ನಾಟಕಕ್ಕೆ ಬಂದು ಇಲ್ಲಿಯ ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಂಡು ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ಆಚಾರ್ಯ ಅಜಿತಶೇಖರ ಸೂರಿ ಮಹಾರಾಜರು 100 ಪುಸ್ತಕ ರಚನೆ ಮಾಡಿರುವುದು ದಾಖಲಾರ್ಹ ಸಂಗತಿಯಾಗಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಜೀವನದಲ್ಲಿ ಮನುಷ್ಯ ಹೆಚ್ಚು ಸಂಪತ್ತು ಗಳಿಸಿದಾಗ ಒತ್ತಡ, ಭಯಕ್ಕೆ ಒಳಗಾಗುತ್ತಾನೆ. ಹೇಗೆ ಒತ್ತಡಕ್ಕೆ ಒಳಗಾಗುತ್ತಾನೆ. ಅದರಿಂದ ಬಿಡುಗಡೆ ಹೊಂದುವುದು ಹೇಗೆ ಎನ್ನುವುದನ್ನು ಆಚಾರ್ಯ ಅಜಿತಶೇಖರ ಸೂರಿ ಮಹಾರಾಜರು ಪುಸ್ತಕದಲ್ಲಿ ತಿಳಿಸಿದ್ದಾರೆ. ಜೀವನದಲ್ಲಿ ಜ್ಞಾನ ಸಂಪಾದನೆಯಿಂದ ತೃಪ್ತಿಕರ ಜೀವನ ನಡೆಸುವವರಿಗೆ ಎಂದಿಗೂ ಭಯ ಇರುವುದಿಲ್ಲ ಎಂದರು.

ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಚೇರ್ಮನ್‌ ಡಾ. ವಿಜಯ ಸಂಕೇಶ್ವರ ಮಾತನಾಡಿ, ಜನರಲ್ಲಿ ಓದುವ ಹವ್ಯಾಸ ಬೆಳೆಯಬೇಕಾಗಿದೆ. ಪುಸ್ತಕ ಓದುವುದರಿಂದ ಮಿದುಳಿನ ಸಾಮರ್ಥ್ಯ ವೃದ್ಧಿಯಾಗಲಿದೆ. ಉತ್ತಮ ಪುಸ್ತಕ ಓದುವುದರಿಂದ ಮನುಷ್ಯನ ಜೀವನದಲ್ಲಿ ಪರಿವರ್ತನೆ ಕಾಣಲಿದೆ. ಜಡ್ಡುಗಟ್ಟಿದ ಮನಸ್ಸಿನ ಸ್ವಚ್ಛತೆಗೆ ಓದುವ ಹವ್ಯಾಸ ಔಷಧಿಯಂತೆ ಕೆಲಸ ಮಾಡಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಆಚಾರ್ಯ ಅಜಿತಶೇಖರ ಸುರೀಶ್ವರ ಮಹಾರಾಜರು ಮಾತನಾಡಿ, ಪ್ರತಿ ವ್ಯಕ್ತಿ ಆನಂದದಿಂದ ಇರಬೇಕು ಎಂಬುದು ನಮ್ಮ ಆಶಯವಾಗಿದೆ. ಕ್ರೋಧ, ದುರಾಸೆಯು ದುಃಖಕ್ಕೆ ಕಾರಣವಾಗುತ್ತದೆ. ಆ ನಿಟ್ಟಿನಲ್ಲಿ ಪುಸ್ತಕದಲ್ಲಿ ಕೆಲ ಸಲಹೆ ನೀಡಲಾಗಿದೆ. ಮನುಷ್ಯನ ಮಿದುಳು ಸರಿಯಾಗಿ ಬಳಕೆಯಾದರೆ ಜೀವನ, ಸಮಾಜ ನಂದನವನ ಆಗಲಿದೆ ಎಂದು ಹೇಳಿದರು.

ಬಿಜೆಪಿಗೆ ಬಿಎಸ್‌ವೈ ನಾಯಕತ್ವದ ಶ್ರೀರಕ್ಷೆಯಿದೆ: ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ, ಯೋಗಗುರು ಭವರಲಾಲ ಆರ್ಯ, ಅಜಿತ ಸಾಹಿತ್ಯ ಮಹೋತ್ಸವ ಸಮಿತಿ ಅಧ್ಯಕ್ಷ ಭವರಲಾಲ ಜೈನ್‌, ಅಮೃತ್‌ ಜೈನ್‌, ಭರತ್‌ ಭಂಡಾರಿ, ಸುರೇಶ ಜೈನ್‌ ಇತರರು ಪಾಲ್ಗೊಂಡಿದ್ದರು.

click me!