
ಬೆಂಗಳೂರು (ನ.4): ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆಯ ಬಿಸಿಯಿಂದ ತತ್ತರಿಸಿರುವ ಕರ್ನಾಟಕದ ಸಾರ್ವಜನಿಕರಿಗೆ 'ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ' (KMF) ಮತ್ತೊಂದು ಭಾರಿ ಶಾಕ್ ನೀಡಿದೆ: ತನ್ನ ಪ್ರಸಿದ್ಧ 'ನಂದಿನಿ' (Nandini) ಬ್ರ್ಯಾಂಡ್ ನ ಉತ್ಪನ್ನಗಳಾದ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಬೆಲೆಗಳನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ನೂತನ ಪರಿಷ್ಕೃತ ದರಗಳು ನವೆಂಬರ್ 4 ರಿಂದಲೇ ಅಧಿಕೃತವಾಗಿ ಜಾರಿಗೆ ಬಂದಿವೆ. ಕೆಎಂಎಫ್‌ನ ನಂದಿನಿ ತುಪ್ಪಕ್ಕೆ ಹೋಲಿಸಿದರೆ ಗುಜರಾತ್‌ನ ಅಮೂಲ್‌ನ ಒಂದು ಲೀಟರ್ ತುಪ್ಪ ಕೆಜಿಗೆ 680 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಮೂಲ್ ನ.2 ರಿಂದ ಜಾರಿಯಾಗುವಂತೆ ತುಪ್ಪದ ಬೆಲೆ ಏರಿಕೆ ಮಾಡಿದ್ದು, ಏರಿಕೆಯ ಬಳಿಕ ಲೀಟರ್ ತುಪ್ಪದ ಬೆಲೆ 680 ರೂಪಾಯಿ ಆಗಿದೆ.
ದೇಶಾದ್ಯಂತ ಹಾಲು ಹಾಗೂ ಹಾಲಿನ ಉತ್ಪನ್ನಗಳ ಕಚ್ಚಾ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಮುಲ್ ಸಂಸ್ಥೆ ಬೆಲೆ ಏರಿಕೆ ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ಕೆಎಂಎಫ್ ಕೂಡ ತನ್ನ ನಂದಿನಿ ಪ್ರಮುಖ ಉತ್ಪನ್ನಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು (MRP) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಕೆಎಂಎಫ್ ಪ್ರಕಟಿಸಿರುವ ಪರಿಷ್ಕೃತ ದರಗಳ ಪ್ರಕಾರ, ನಂದಿನಿ ತುಪ್ಪದ ಬೆಲೆಯಲ್ಲಿ ಲೀಟರ್‌ಗೆ ಬರೋಬ್ಬರಿ ₹100, ಬೆಣ್ಣೆ ಬೆಲೆಯಲ್ಲಿ ₹80 ಹಾಗೂ ಪನ್ನೀರ್ ಬೆಲೆಯಲ್ಲಿ ₹77 ರವರೆಗೆ ಹೆಚ್ಚಳ ಮಾಡಲಾಗಿದೆ.
ಹಬ್ಬಗಳ ಸಾಲು ಸಾಲು ಆಚರಣೆಗಳ ಬೆನ್ನಲ್ಲೇ ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ದಿಢೀರ್ ಏರಿಕೆಯಾಗಿರುವುದು ರಾಜ್ಯದ ಪ್ರತಿಯೊಂದು ಕುಟುಂಬದ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ. ದಿನನಿತ್ಯ ನಂದಿನಿ ಬೆಣ್ಣೆ, ತುಪ್ಪ ಹಾಗೂ ಪನ್ನೀರ್ ಬಳಸುವ ಬೇಕರಿಗಳು, ಹೋಟೆಲ್‌ಗಳು ಹಾಗೂ ಸಣ್ಣ ಉಪಹಾರ ಗೃಹಗಳ ಮಾಲೀಕರಿಗೆ ಈ ನಿರ್ಧಾರ ಭಾರಿ ನಷ್ಟದ ಆತಂಕವನ್ನು ತಂದೊಡ್ಡಿದೆ. ನವೆಂಬರ್ 4 ರಿಂದಲೇ ಈ ನೂತನ ದರಗಳು ರಾಜ್ಯಾದ್ಯಂತ ಅನುಷ್ಠಾನಕ್ಕೆ ಬಂದಿದ್ದು, ಸರಣಿ ಬೆಲೆ ಏರಿಕೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.