
ಮಂಡ್ಯ (ಆ.27): ಇತ್ತೀಚೆಗಷ್ಟೇ ಮಂಡ್ಯ ನಗರದ ವೃದ್ಧೆ ಹೂರ್ ಎಂಬಾಕೆಯ ಮನೆಯಲ್ಲಿ ₹8.40 ಲಕ್ಷ ನಗದು ಪತ್ತೆಯಾದ ಘಟನೆ ಸುದ್ದಿಯಾಗಿತ್ತು. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಶ್ರೀರಂಗಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿತ್ರಮ್ಮ ಅವರ ಮನೆ ಸ್ವಚ್ಛಗೊಳಿಸುವ ವೇಳೆ ಬರೋಬ್ಬರಿ ₹3.5 ಲಕ್ಷ ನಗದು ಪತ್ತೆಯಾಗಿದೆ.
ಮನೆ ಸ್ವಚ್ಛಗೊಳಿಸುವಾಗ ಸಿಕ್ಕಿತು ಹಣ!
ಶ್ರೀರಂಗಪಟ್ಟಣದ ಸಾವಿತ್ರಮ್ಮ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮನೆಯಲ್ಲೇ ವಾಸವಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ವಯಂಸೇವಕರು ಅವರ ಆರೈಕೆಗೆ ಮುಂದಾಗಿದ್ದಾರೆ. ಸಾವಿತ್ರಮ್ಮ ಅವರಿಗೆ ಸ್ನಾನ ಮಾಡಿಸಿ, ಬಳಿಕ ಮನೆಯ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯದ ವೇಳೆ ಮನೆಯಲ್ಲಿದ್ದ ಚೀಲಗಳ ಮೇಲೆ ಸ್ವಯಂಸೇವಕರ ಕಣ್ಣು ಬಿದ್ದಿದೆ. ಚೀಲಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಚಿಲ್ಲರೆ ನಾಣ್ಯಗಳು ಹಾಗೂ ನೋಟುಗಳು ತುಂಬಿರುವುದು ಪತ್ತೆಯಾಗಿದೆ.
ಚೀಲಗಳಲ್ಲಿತ್ತು ₹3.5 ಲಕ್ಷ!
ಚೀಲಗಳಲ್ಲಿದ್ದ ಹಣವನ್ನು ಹೊರತೆಗೆದು ಸ್ವಯಂಸೇವಕರು ಎಣಿಕೆ ಮಾಡಿದ್ದಾರೆ. ಈ ವೇಳೆ ಒಟ್ಟು ₹3.5 ಲಕ್ಷದಷ್ಟು ಹಣ ಇರುವುದು ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಸಾವಿತ್ರಮ್ಮ ಅವರು ತಮ್ಮ ತಾಯಿಯೊಂದಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರ ತಾಯಿ ಮೃತಪಟ್ಟಿದ್ದರು. ಇದೀಗ ಸಾವಿತ್ರಮ್ಮ ಕೂಡ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಸ್ವಯಂಸೇವಕರು ಅವರ ಮನೆಗೆ ತೆರಳಿ ನೆರವು ನೀಡುತ್ತಿದ್ದರು.
ಇದಕ್ಕೂ ಮುನ್ನ ಮಂಡ್ಯ ನಗರದ ಹೂರ್ ಎಂಬಾಕೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಬಳಿಕ, ಅವರ ಮನೆಯಲ್ಲಿ ₹8.40 ಲಕ್ಷ ನಗದು ಪತ್ತೆಯಾಗಿತ್ತು. ಈ ಘಟನೆ ಚರ್ಚೆಯಲ್ಲಿರುವ ಬೆನ್ನಲ್ಲೇ ಇದೀಗ ಶ್ರೀರಂಗಪಟ್ಟಣದ ಸಾವಿತ್ರಮ್ಮ ಅವರ ಮನೆಯಲ್ಲಿ ₹3.5 ಲಕ್ಷ ಸಿಕ್ಕಿರುವುದು ಮತ್ತೊಮ್ಮೆ ಗಮನ ಸೆಳೆದಿದೆ.
ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದವರ ಮನೆಗಳಲ್ಲಿ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗುತ್ತಿರುವುದು ಇದೀಗ ಮಂಡ್ಯ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹಣವನ್ನು ಸಾವಿತ್ರಮ್ಮ ಅವರು ಹಲವು ವರ್ಷಗಳಿಂದ ಉಳಿಸಿಕೊಂಡಿದ್ದರೇ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ಸಂಗ್ರಹಿಸಿದ್ದರೇ ಎಂಬುದು ಮುಂದಿನ ವಿಚಾರಣೆಯಿಂದ ತಿಳಿದುಬರಬೇಕಿದೆ.