ಏಕಕಾಲಕ್ಕೆ 2 ರನ್‌ವೇ ಬಳಸಬಹುದಾದ ದಕ್ಷಿಣ ಭಾರತದ ಏಕೈಕ ಏರ್‌ಪೋರ್ಟ್‌ ಕೆಐಎ

By Kannadaprabha NewsFirst Published Mar 26, 2021, 8:21 AM IST
Highlights

ಕ್ಯಾಟ್‌ ತ್ರಿಬಿ ನಿಯಮದಂತೆ ನವೀಕರಣ ಕಾರ್ಯ ಮುಕ್ತಾಯ| ಕೆಟ್ಟ ಹವಾಮಾನದಲ್ಲೂ ವಿಮಾನ ಲ್ಯಾಂಡಿಂಗ್‌, ಟೇಕಾಫ್‌ ಸಾಧ್ಯ| ಪ್ರತಿಕೂಲ ವಾತಾವರಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗೋದಿಲ್ಲ| 

ಬೆಂಗಳೂರು(ಮಾ.26): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದ ಉತ್ತರ ರನ್‌ ವೇ ನವೀಕರಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರ ರನ್‌ವೇಯನ್ನು ಸೇವೆಗೆ ಮುಕ್ತಗೊಳಿಸಲಾಗಿದೆ. ಈ ಮೂಲಕ ಎರಡು (ಸಮಾನಾಂತರ) ರನ್‌ವೇ ಹೊಂದಿರುವ ದಕ್ಷಿಣ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎ ಪಾತ್ರವಾಗಿದೆ.

ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಜೂನ್‌ನಲ್ಲಿ ಸದರಿ ರನ್‌ ವೇಯಲ್ಲಿ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಈ ರನ್‌ವೇಗೆ ಎಲ್‌ಇಡಿ ಸೆಂಟರ್‌ ಲೈನ್‌ ಲೈಟಿಂಗ್‌, ಇನ್‌ಸೆಟ್‌ ರನ್‌ ವೇ ಎಡ್ಜ್‌ ಲೈಟ್‌ ಮತ್ತು ಟ್ಯಾಕ್ಸಿ ವೇ ಸೆಂಟರ್‌ಲೈನ್‌ ಲೈಂಟಿಂಗ್‌ ಮತ್ತು ಎರಡು ಹೊಸ ಮಿಡ್‌ ಪಾಯಿಂಟ್‌ ಟ್ರಾನ್ಸ್‌ಮಿಸೋ ಮೀಟರ್‌ಗಳನ್ನು ಅಳವಡಿಸಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ ಮೂಲಕ ರನ್‌ ವೇ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ. ಇದರಿಂದ ಕಡಿಮೆ ದೃಶ್ಯ ಸಾಧ್ಯತೆ ಮತ್ತು ಪ್ರತಿಕೂಲ ಹವಾಮಾನದ ವಾತಾವರಣದಲ್ಲಿ ವಿಮಾನಗಳ ಕಾರ್ಯಾಚರಣೆ ಎರಡೂ ರನ್‌ ವೇಗಳು ಸಹಕಾರಿಯಾಗಿದೆ. ಈ ಎರಡು ರನ್‌ವೇಗಳು ಏಕ ಕಾಲದಲ್ಲಿ ವಿಮಾನಗಳ ಕಾರ್ಯಾಚರಣೆಗೆ ಬಳಸಬಹುದಾಗಿದೆ.

ಬೆಂಗ್ಳೂರಲ್ಲಿ ದೇಶದ ಪ್ರಥಮ ಕ್ಷಿಪ್ರ ಸರಕು ಸಾಗಣೆ ಕಾರ್ಗೊ ಟರ್ಮಿನಲ್‌ ಉದ್ಘಾಟನೆ

ಈ ಉತ್ತರ ರನ್‌ ವೇ ಮೇಲ್ದರ್ಜೆಗೆ ಏರಿಸಿರುವ ಹಿನ್ನೆಲೆಯಲ್ಲಿ 125 ಮೀಟರ್‌ ದೃಶ್ಯ ಸಾಧ್ಯತೆಯಲ್ಲಿ ವಿಮಾನ ಲ್ಯಾಂಡಿಂಗ್‌ ಮಾಡಬಹುದು ಹಾಗೂ 550 ಮೀಟರ್‌ನಷ್ಟು ದೃಶ್ಯ ಸಾಧ್ಯತೆಯಲ್ಲಿ ವಿಮಾನಗಳನ್ನು ಟೇಕಾಫ್‌ ಮಾಡಬಹುದಾಗಿದೆ. ದಕ್ಷಿಣ ರನ್‌ವೇಯನ್ನು ಕ್ಯಾಟ್‌ ತ್ರಿಬಿ ನಿಯಮಾನುಸಾರ ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಉತ್ತರ ರನ್‌ವೇಯನ್ನು ಕ್ಯಾಟ್‌ ತ್ರಿಬಿ ನಿಯಮಾನುಸಾರ ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಲಾಗಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರ ಕಡಿಮೆಯಾದ್ದರಿಂದ ಕ್ಯಾಟ್‌ ಒನ್‌ ನಿಯಮಾನುಸಾರ ಮೇಲ್ದರ್ಜೆಗೇರಿಸಲಾಗಿದೆ. ಸದ್ಯಕ್ಕೆ ದಕ್ಷಿಣ ರನ್‌ವೇ ಕ್ಯಾಟ್‌ ತ್ರಿಬಿ ನಿಯಮ ಅಳವಡಿಸಿ ಕೊಂಡಿರುವುದರಿಂದ ಪ್ರತಿಕೂಲ ವಾತಾವರಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(ಬಿಐಎಎಲ್‌) ತಿಳಿಸಿದೆ.

click me!