
ಶಿಗ್ಗಾಂವಿ(ಮೇ.10): ಜನತೆಯ ಗಮನ ಬೇರೆ ಕಡೆ ಹರಿಸಲು ಸಂಸದ ತೇಜಸ್ವಿ ಸೂರ್ಯ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿ ಸರ್ಕಾರ ಕೋವಿಡ್ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಖರೀಮಸಾಬ್ ಮೋಘಲಲ್ಲಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ರಾಜ್ಯದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ನ್ಯಾಯಾಲಯಗಳು ಇವರ ಕಾರ್ಯಕ್ಕೆ ಛೀಮಾರಿ ಹಾಕುತ್ತಿವೆ. ಬಿಜೆಪಿ ಸರ್ಕಾರ ಜನತೆಯ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದರು.
ತೇಜಸ್ವಿ ಸೂರ್ಯ + ನಂದನ್ ನಿಲೇಕಣಿ.. ಮಾಫಿಯಾ ಆಟ ಇನ್ನು ನಡೆಯಲ್ಲ!
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ ಮಾತನಾಡಿ, ಬಿಜೆಪಿಯವರು ಜಾತಿಯ ವಿಷಬೀಜ ಬಿತ್ತುತ್ತಾ ಯುವಕರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ನಾಲಿಗೆಯ ಮೇಲಿನ ಹಿಡಿತ ತಪ್ಪಿದ್ದಾರೆ ಎಂದರು.
ತಾಲೂಕು ವಕ್ತಾರ ಮಂಜುನಾಥ ಮಣ್ಣಣ್ಣನವರ ಮಾತನಾಡಿ, ಸಾಮರಸ್ಯವನ್ನು ಹಾಳು ಮಾಡುವ ಕೆಲಸ ಮಾಡಬೇಡಿ. ಮೊದಲು ಸಾಯುತ್ತಿರುವ ರೋಗಿಗಳನ್ನು ಉಳಿಸಿ. ಕ್ಷಮೆ ಕೇಳಿ ಎಂದರು.
ಅಲ್ಪಸಂಖ್ಯಾತರ ಘಟಕದ ಶಿಗ್ಗಾಂವಿ ತಾಲೂಕು ಅಧ್ಯಕ್ಷ ಬಾಬರ ಬಾವೊಜಿ, ಅಲ್ಪಸಂಖ್ಯಾತರ ಶಹರ ಘಟಕದ ಅಧ್ಯಕ್ಷ ಅಬ್ದುಲ್‌ರೆಹಮಾನ ತೋಕಲ್ಲಿ, ಬಂಕಾಪುರ ಕಾಂಗ್ರೆಸ್ ಮುಖಂಡ ನೂರಹ್ಮದ ಮಾಳಗಿ ಮಾತನಾಡಿದರು. ಪುರಸಭೆ ಸದಸ್ಯ ಗೌಸಖಾನ ಮುನಶಿ, ಗ್ರಾಪಂ ಸದಸ್ಯ ಬಿ.ಸಿ. ಪಾಟೀಲ್ ಹಾಗೂ ಮುನ್ನಾ ಲಕ್ಷೇಶ್ವರ ಉಪಸ್ಥಿತರಿದ್ದರು.