ವಿಮಾ ಪರಿಹಾರ ಹಣ ಕಡಿತಕ್ಕೆ ಖಂಡನೆ

By Kannadaprabha NewsFirst Published Dec 22, 2019, 10:51 AM IST
Highlights

ಸಾವನ್ನಪ್ಪುವ ರಾಸುಗಳಿಗೆ ನ್ಯಾಷನಲ್‌ ಇನ್ಸೂರೆನ್ಸ್‌ ಕಂಪನಿ ವತಿಯಿಂದ ನೀಡಲಾಗುತ್ತಿದ್ದ ಪರಿಹಾರವನ್ನು ಕಡಿತಗೊಳಿಸಿರುವ ಕ್ರಮ ಖಂಡಿಸಲಾಗಿದೆ.

ಸಾಗರ [ಡಿ.22]:  ಸಹಜ ಮತ್ತು ಅಸಹಜವಾಗಿ ಸಾವನ್ನಪ್ಪುವ ರಾಸುಗಳಿಗೆ ನ್ಯಾಷನಲ್‌ ಇನ್ಸೂರೆನ್ಸ್‌ ಕಂಪನಿ ವತಿಯಿಂದ ನೀಡಲಾಗುತ್ತಿದ್ದ ಪರಿಹಾರವನ್ನು ಕಡಿತಗೊಳಿಸಿರುವ ಕ್ರಮ ಖಂಡಿನೀಯ ಎಂದು ಕೆಳದಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಎಂ.ಸತ್ಯನಾರಾಯಣ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರ ಸಂಘಗಳ ಮೂಲಕ ಹೈನುಗಾರಿಕೆ ನಡೆಸುವ ರೈತರ ರಾಸುಗಳಿಗೆ ಸರ್ಕಾರದಿಂದ ಮತ್ತು ಶಿವಮೊಗ್ಗ ಹಾಲು ಒಕ್ಕೂಟದಿಂದ ಶೇ. 70 ಮತ್ತು ಸ್ಥಳೀಯ ಹಾಲು ಉತ್ಪಾದಕರ ಸಂಘದಿಂದ ಶೇ. 30 ಗುಂಪು ವಿಮೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ವಿಮೆ ಮಾಡಿಸಿದ ಜಾನುವಾರು ಮೃತಪಟ್ಟರೆ ವಿಮಾ ಕಂಪನಿಯಿಂದ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನಿಗದಿಪಡಿಸಿದ ವಿಮಾ ಪರಿಹಾರ ನೀಡಲಾಗುತ್ತದೆ. ಆದರೆ ಇನ್ಸೂರೆನ್ಸ್‌ ಕಂಪನಿ ಕಳೆದ ಆರು ತಿಂಗಳಿನಿಂದ ವೈದ್ಯರು ನಿಗದಿಪಡಿಸಿದ ವಿಮಾ ಮೊತ್ತಕ್ಕಿಂತ 6 ರಿಂದ 8 ಸಾವಿರ ರು. ಕಡಿಮೆ ನೀಡುತ್ತಿದೆ. ಇದರಿಂದಾಗಿ ಹೈನುಗಾರಿಕೆಯನ್ನು ಉಪ ಕಸುಬಾಗಿ ಮಾಡಿಕೊಂಡು ಬಂದಿರುವ ರೈತರು ನಷ್ಟ ಅನುಭವಿಸುವಂತೆ ಆಗಿದೆ. ಹಿಂದೆ ಓರಿಯಂಟಲ್‌ ಇನ್ಸೂರೆನ್ಸ್‌ ಸಂಸ್ಥೆ ವೈದ್ಯರು ನಿಗದಿಪಡಿಸಿದ ವಿಮಾ ಪರಿಹಾರ ಮೊತ್ತ ನೀಡುತ್ತಿತ್ತು. ಆದರೆ ನ್ಯಾಷನಲ್‌ ಇನ್ಸೂರೆನ್ಸ್‌ ಕಂಪನಿ ವಿಮಾ ಮೊತ್ತ ಕಡಿತ ಮಾಡುತ್ತಿದೆ. ನೂತನವಾಗಿ ಬಂದಿರುವ ಕಂಪನಿ ವ್ಯವಸ್ಥಾಪಕರ ಅವೈಜ್ಞಾನಿಕ ಚಿಂತನೆಯೆ ಇದಕ್ಕೆ ಕಾರಣವಾಗಿದೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಮಾ ಮೊತ್ತ ಕಡಿತಗೊಳಿಸುತ್ತಿರುವ ಬಗ್ಗೆ ಸರ್ಕಾರಕ್ಕೆ, ಹಾಲು ಒಕ್ಕೂಟಕ್ಕೆ, ಇನ್ಸೂರೆನ್ಸ್‌ ಕಂಪನಿಗೆ ಪತ್ರ ಬರೆದಿದ್ದರೂ ಪೂರ್ಣ ಪ್ರಮಾಣದಲ್ಲಿ ವಿಮಾ ಮೊತ್ತ ಪಾವತಿ ಮಾಡುತ್ತಿಲ್ಲ. ಶಿವಮೊಗ್ಗ ಜಿಲ್ಲೆಯ ಎಲ್ಲ ಹಾಲು ಉತ್ಪಾದಕರ ಸಂಘಗಳಲ್ಲೂ ಮೃತಪಟ್ಟರಾಸುಗಳಿಗೆ ಪರಿಹಾರ ನೀಡುವಲ್ಲಿ ವಂಚನೆಯಾಗುತ್ತಿದ್ದು, ಕೂಡಲೆ ವಿಮಾ ಕಂಪನಿ ಕಡಿತ ಮಾಡಿರುವ ವಿಮಾ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಮೇಶ್‌ ಕೆಳದಿ ಮಾತನಾಡಿ, ಹೈನುಗಾರಿಕೆ ಅತ್ಯಂತ ಸಂಕಷ್ಟದಲ್ಲಿದೆ. ಹೈನುಗಾರರಿಗೆ ಸ್ಪಂದಿಸಬೇಕಾಗಿದ್ದ ವಿಮಾ ಕಂಪನಿಗಳೇ ಈ ರೀತಿ ವಿಮಾಮೊತ್ತ ಕಡಿತಗೊಳಿಸಿದರೆ ಹೈನುಗಾರರು ಹೈನುಗಾರಿಕೆಯಿಂದಲೆ ವಿಮುಖವಾಗುವ ಸಾಧ್ಯತೆ ಇದೆ. ಕೂಡಲೆ ವಿಮಾ ಕಂಪನಿ ಕಡಿತಗೊಳಿಸಿರುವ ವಿಮಾಮೊತ್ತ ಬಿಡುಗಡೆ ಮಾಡದೆ ಹೋದಲ್ಲಿ ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಂಘದಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

click me!